ಸರ್ಕಾರಿ ವೈದ್ಯಕೀಯ ಕಾಲೇಜ್‌ಗೆ ಬೇಡಿಕೆ, ಪಿಪಿಪಿ ಮಾದರಿ ವಿರುದ್ಧ ಭುಗಿಲೆದ್ದ ಆಕ್ರೋಶ, ಡಿ.1ರಂದು ಬೃಹತ್ ಪ್ರತಿಭಟನಾ ಮೆರವಣಿಗೆ

ವಿಜಯಪುರ ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಸತ್ಯಾಗ್ರಹ ಸ್ಥಳದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜ್ ಹೋರಾಟ ಸಮಿತಿ ಮುಖಂಡರು ಸುದ್ದಿಗೋಷ್ಠಿ ನಡೆಸಿದರು. ಮುಖಂಡ ಅನೀಲ ಹೊಸಮನಿ, ಬಿ.ಭಗವಾನ್ ರೆಡ್ಡಿ, ಮಲ್ಲಿಕಾರ್ಜುನ ಬಟಗಿ ಮತ್ತಿತರರಿದ್ದಾರೆ.
ವಿಜಯಪುರ ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಸತ್ಯಾಗ್ರಹ ಸ್ಥಳದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜ್ ಹೋರಾಟ ಸಮಿತಿ ಮುಖಂಡರು ಸುದ್ದಿಗೋಷ್ಠಿ ನಡೆಸಿದರು. ಮುಖಂಡ ಅನೀಲ ಹೊಸಮನಿ, ಬಿ.ಭಗವಾನ್ ರೆಡ್ಡಿ, ಮಲ್ಲಿಕಾರ್ಜುನ ಬಟಗಿ ಮತ್ತಿತರರಿದ್ದಾರೆ.
Published on

ಪ್ರಮುಖ ಮುಖ್ಯಾಂಶಗಳು

  • ಸರ್ಕಾರದಿಂದಲೇ ವೈದ್ಯಕೀಯ ಕಾಲೇಜ್ ಸ್ಥಾಪಿಸುವಂತೆ ಆಗ್ರಹ
  • ಪಿಪಿಪಿ ಮಾದರಿ ವಿರುದ್ಧ ಭುಗಿಲೆದ್ದ ಆಕ್ರೋಶ
  • ಡಿ.1ರಂದು ಬೃಹತ್ ಪ್ರತಿಭಟನಾ ಮೆರವಣಿಗೆ
ವಿಜಯಪುರ: ಅನಿರ್ದಿಷ್ಟಾವಧಿ ಸತ್ಯಾಗ್ರಹ, ಪಂಜಿನ ಮೆರವಣಿಗೆ, ರಕ್ತದಲ್ಲಿ ಸಹಿ ಸಂಗ್ರಹ ಅಭಿಯಾನ, ಪತ್ರ ಚಳುವಳಿ, ರಂಗೋಲಿ ಚಳುವಳಿ ಸೇರಿದಂತೆ ಹಲವು ಆಯಾಮಗಳಲ್ಲಿ ಹೋರಾಟ ನಡೆಸಿಕೊಂಡು ಬಂದಿರುವ ಸರ್ಕಾರಿ ವೈದ್ಯಕೀಯ ಕಾಲೇಜ್ ಹೋರಾಟ ಸಮಿತಿ ಇದೀಗ ಮುಂದುವರಿದ ಭಾಗವಾಗಿ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲು ಸಜ್ಜಾಗಿದೆ.
ಖಾಸಗಿ ಮತ್ತು ಸರ್ಕಾರಿ ಸಹಭಾಗಿತ್ವ (ಪಿಪಿಪಿ)ದ ಮಾದರಿ ವಿರೋಧಿಸಿ ಸರ್ಕಾರದಿಂದಲೇ ವೈದ್ಯಕೀಯ ಕಾಲೇಜ್ ಸ್ಥಾಪಿಸುವಂತೆ ಆಗ್ರಹಿಸಿ ಕಳೆದ ಸೆ. 18ರಿಂದ ನಿರಂತರವಾಗಿ ಹೋರಾಟ ಹಮ್ಮಿಕೊಂಡು ಬರಲಾಗುತ್ತಿದೆ. ಸಿಎಂ ಸಿದ್ದರಾಮಯ್ಯ ಅವರನ್ನೂ ಭೇಟಿ ಮಾಡಿದ ಸಮಿತಿಯ ಪದಾಧಿಕಾರಿಗಳು ಯಾವುದೇ ಕಾರಣಕ್ಕೂ ಪಿಪಿಪಿ ಮಾದರಿಗೆ ಅವಕಾಶ ಕೊಡಬಾರದೆಂದು ಒತ್ತಾಯಿಸಿದ್ದಾರೆ. ಆದರೆ ಮುಖ್ಯಮಂತ್ರಿಗಳಿಂದಲೂ ಸಕಾರಾತ್ಮಕ ಸ್ಪಂದನೆ ಸಿಗದ ಹಿನ್ನೆಲೆ ಡಿ. 1 ರಂದು ಬೃಹತ್ ಹೋರಾಟ ನಡೆಸುತ್ತಿರುವುದಾಗಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಸಮಿತಿಯ ಮುಖಂಡ ಅನೀಲ ಹೊಸಮನಿ ತಿಳಿಸಿದರು.
ನ. 19 ರಂದು ಬೆಂಗಳೂರಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲರ ನೇತೃತ್ವದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲಾಯಿತು. ಯಾವುದೇ ಕಾರಣಕ್ಕೂ ಪಿಪಿಪಿ ಮಾದರಿಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜ್ ಸ್ಥಾಪಿಸಬಾರದೆಂದು ಮನವಿ ಮಾಡಲಾಯಿತಲ್ಲದೇ ಸರ್ಕಾರವೇ ಅನುದಾನ ನೀಡಿ ಕಾಲೇಜ್ ನಿರ್ವಹಿಸಬೇಕೆಂದು ಒತ್ತಾಯಿಸಲಾಯಿತು. ಆದರೆ, ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲರು ಮೌನವಹಿಸಿದ್ದರು. ಸಿಎಂ ಕೂಡ ಸಕಾರಾತ್ಮಕವಾಗಿ ಸ್ಪಂದಿಸಲಿಲ್ಲ. ಹೀಗಾಗಿ ಬೃಹತ್ ಹೋರಾಟ ಅನಿವಾರ್ಯವಾಗಿದೆ ಎಂದರು.
ಚಳಿಗಾಲ ಅಧಿವೇಶನ ಆರಂಭಿಸುತ್ತಿದ್ದು, ಜಿಲ್ಲೆಯ ಶಾಸಕರು ಮತ್ತು ಸಚಿವರು ಸದನದಲ್ಲಿ ಧ್ವನಿ ಎತ್ತಬೇಕು. ಇಲ್ಲವಾದರೆ ಬರುವ ದಿನಗಳಲ್ಲಿ ಶಾಸಕರು ಮತ್ತು ಸಚಿವರ ಮನೆ ಮುಂದೆಯೂ ಧರಣಿ ನಡೆಸಲಾಗುವುದೆಂದು ಎಚ್ಚರಿಸಿದರು.
ಮುಖಂಡ ಬಿ.ಭಗವಾನ್ ರೆಡ್ಡಿ ಮಾತನಾಡಿ, ಸರ್ಕಾರಿ ವೈದ್ಯಕೀಯ ಕಾಲೇಜ್ ಹೋರಾಟ ಬೇಡಿಕೆ ಈಡೇರುವವರೆಗೂ ನಿಲ್ಲುವುದಿಲ್ಲ. ಇದೊಂದು ಪಕ್ಷಾತೀತ ಹೋರಾಟ. ಮಾತ್ರವಲ್ಲ, ಜಾತ್ಯತೀತ, ಧರ್ಮಾತೀತ ಹೋರಾಟ ಕೂಡ ಆಗಿದೆ. ಎಲ್ಲ ವರ್ಗದವರೂ ಈ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ. ಈ ಹೋರಾಟ ಎಲ್ಲರಿಗೂ ಸೇರಿದ್ದು. ಏಕೆಂದರೆ ಸರ್ಕಾರಿ ವೈದ್ಯಕೀಯ ಕಾಲೇಜ್ ಕೂಡ ಎಲ್ಲರಿಗೂ ಅನುಕೂಲಕರವಾಗಿದೆ. ಸರ್ಕಾರಿ ವ್ಯವಸ್ಥೆ, ಸಂಸ್ಥೆಗಳನ್ನು ಉಳಿಸಲು ಸರ್ವರೂ ಈ ಹೋರಾಟಕ್ಕೆ ಕೈ ಜೋಡಿಸಬೇಕೆಂದರು.
ಮುಖಂಡ ಮಲ್ಲಿಕಾರ್ಜುನ ಬಟಗಿ ಮಾತನಾಡಿ, ಡಿ. 1ರಂದು ನಡೆಯಲಿರುವ ಬೃಹತ್ ಹೋರಾಟದಲ್ಲಿ ಹಿರಿಯ ಸಾಹಿತಿಗಳು, ಚಿಂತಕರು, ಪ್ರಗತಿ ಪರರು ಭಾಗವಹಿಸಲಿದ್ದಾರೆ. ಅನೇಕ ಸಂಘಟನೆಗಳು ಬೆಂಬಲ ಸೂಚಿಸಲಿವೆ. ಸಾವಿರಾರು ಜನ ಹೋರಾಟದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದರು.
ಮುಖಂಡರಾದ ಸಿದ್ಧಲಿಂಗ ಬಾಗೇವಾಡಿ, ಸಿದ್ದರಾಮ ಹಳ್ಳೂರ, ಅಕ್ರಂ ಮಾಶ್ಯಾಳಕರ, ಸುರೇಶ ಬಿಜಾಪುರ, ಲಕ್ಷ್ಮಣ ಹಂದ್ರಾಳ, ಮಲ್ಲಿಕಾರ್ಜುನ ಎಚ್.ಟಿ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net