ವಿಜಯಪುರ ನಗರದಲ್ಲಿ ವಿದ್ಯಾರ್ಥಿಗಳು ಎಬಿವಿಪಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಹರ್ಷ ನಾಯಕ, ಶಶಿಕಾಂತ ರಾಕ್ಲೆ, ಚೇತನ ಕೋರವಾರ ಮತ್ತಿತರರಿದ್ದರು.
Published on:
Copied
Follow Us
ಸರ್ಕಾರಿ ಹುದ್ದೆಗಳ ನೇಮಕ ಪ್ರಕ್ರಿಯೆಗೆ ಆಗ್ರಹಿಸಿ ಎಬಿವಿಪಿ ನೇತೃತ್ವದಲ್ಲಿ ನೂರಾರು ವಿದ್ಯಾರ್ಥಿಗಳು ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಿದರು.
ನಗರದ ಪ್ರಮುಖ ಮಾರ್ಗಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ವಿದ್ಯಾರ್ಥಿಗಳು ಕೂಡಲೇ ಖಾಲಿ ಇರುವ ಹುದ್ದೆಗಳಿಗೆ ನೇಮಕ ಪ್ರಕ್ರಿಯೆ ನಡೆಸಬೇಕೆಂದು ಒತ್ತಾಯಿಸಿದರು.
ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಮೊಳಗಿಸಿದರು. ಬಳಿಕ ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಎಬಿವಿಪಿಯ ಕೇಂದ್ರೀಯ ಕಾರ್ಯಸಮಿತಿ ಸದಸ್ಯ ಸಚಿನ ಕುಳಗೇರಿ ಮಾತನಾಡಿ, ರಾಜ್ಯದಲ್ಲಿ ಕಳೆದ ೫-೬ ವರ್ಷಗಳಿಂದ ವಿದ್ಯಾರ್ಥಿಗಳ ಪರಿಸ್ಥಿತಿ ಶೋಚನೀಯವಾಗಿದೆ. ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಸರ್ಕಾರ ಕುಂಭಕರ್ಣನ ನಿದ್ರೆಗೆ ಜಾರಿಗೆ. ಸರ್ಕಾರದ ಹತ್ತಿರ ಯಾವುದೇ ದೂರದೃಷ್ಟಿಯ ಯೋಜನೆಗಳು ಇಲ್ಲದೆ ಸಮಸ್ಯೆಗಳು ಬಂದಾಗ ಅವುಗಳಿಗೆ ತೇಪೆ ಹಚ್ಚುವ ಕಾರ್ಯ ನಡೆಯುತ್ತಿದೆ ಎಂದರು.
ಚುನಾವಣೆ ಪೂರ್ವ ಪ್ರಣಾಳಿಕೆಯಲ್ಲಿ ನೇಮಕ ಪ್ರಕ್ರಿಯೆ ನಡೆಸುವುದಾಗಿ ಹೇಳಿದ್ದ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಮೂರು ವರ್ಷಗಳಾದರೂ ನೇಮಕ ಪ್ರಕ್ರಿಯೆ ನಡೆಸಿಲ್ಲ. ರಾಜ್ಯದಲ್ಲಿ ಒಟ್ಟು ೪೩ ಇಲಾಖೆಗಳಲ್ಲಿ ೨,೮೪,೮೮೧ ಹುದ್ದೆಗಳು ಖಾಲಿ ಇವೆ. ಲಕ್ಷಾಂತರ ಅಭ್ಯರ್ಥಿಗಳು ಕಳೆದ ಐದಾರು ವರ್ಷಗಳಿಂದ ಸರ್ಕಾರ ನೇಮಕಾತಿಗಳನ್ನು ಮಾಡುತ್ತೆ ಎಂಬ ನಂಬಿಕೆಯೊದಿಗೆ ಪ್ರತಿ ತಿಂಗಳು ಹಣವನ್ನು ಖರ್ಚು ಮಾಡಿಕೊಂಡು ತರಬೇತಿ ಪಡೆಯುತ್ತಿದ್ದಾರೆ. ಆದರೆ ಸರ್ಕಾರ ಈ ಯಾವುದೇ ತೊಂದರೆಗಳನ್ನು ಗಮನಿಸದೆ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ ಎಂದರು.
ಜಿಲ್ಲಾ ಸಂಚಾಲಕ ಸಂದೀಪ ಅರಳಗುಂಡಿ ಮಾತನಾಡಿ, ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತಹ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯಲ್ಲಿ ೭೯,೬೯೪ ಹುದ್ದೆಗಳು, ಉನ್ನತ ಶಿಕ್ಷಣ ಇಲಾಖೆಯಲ್ಲೂ ೧೩,೫೯೯ ಹುದ್ದೆಗಳು ಖಾಲಿ ಇದ್ದು, ಇದರಿಂದ ರಾಜ್ಯದ ವಿದ್ಯಾರ್ಥಿಗಳ ಶಿಕ್ಷಣದ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ಸರಿಯಾಗಿ ತರಗತಿಗಳು ನಡೆಯುತ್ತಿಲ್ಲ, ಸರ್ವರಿಗೂ ಶಿಕ್ಷಣವನ್ನು ನೀಡಬೇಕಾದದ್ದು ಸರ್ಕಾರಗಳ ಕರ್ತವ್ಯ. ಆದರೆ ಸರ್ಕಾರಿ ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ಈ ಸರ್ಕಾರ ಅನ್ಯಾಯ ಮಾಡುತ್ತಿದೆ ಎಂದರು.
ಕಾನೂನು ವಿದ್ಯಾರ್ಥಿಗಳ ಪ್ರಮುಖ ಮಂಜುನಾಥ ಹಳ್ಳಿ ಮಾತನಾಡಿ, ರಾಜ್ಯದ ವಿಶ್ವವಿದ್ಯಾಲಯಗಳ ಸ್ಥಿತಿಗತಿ ಶೋಚನೀಯವಾಗಿದೆ. ವಿವಿಗಳಿಗೆ ಯಾವುದೇ ಅನುದಾನ ನೀಡದೇ ಅವುಗಳನ್ನು ಕೇವಲ ವಿದ್ಯಾರ್ಥಿಗಳ ಶುಲ್ಕದ ಮೇಲೆ ನಡೆಸುವಂತಾಗಿದೆ. ಇದರಿಂದ ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳ ಮೇಲೆ ಹಲವಾರು ಶುಲ್ಕಗಳನ್ನು ಹೇರುತ್ತಿದೆ. ಹಿಂದಿನ ಸರ್ಕಾರ ಸ್ಥಾಪಿಸಿದ ೯ವಿಶ್ವ ವಿದ್ಯಾಲಯಗಳು ಮುಚ್ಚುವ ಸ್ಥಿತಿಯನ್ನು ಸರ್ಕಾರ ನಿರ್ಮಾಣ ಮಾಡುತ್ತಿದೆ ಎಂದರು.
ವಿಭಾಗ ಸಂಘಟನಾ ಕಾರ್ಯದರ್ಶಿ ಹರ್ಷ ನಾಯಕ, ಶಶಿಕಾಂತ ರಾಕ್ಲೆ, ಚೇತನ ಕೋರವಾರ, ದುಂಡಪ್ಪ ನಿಲೋಗಿ, ಬಾಲಾಜಿ ಬಿರಾದಾರ, ಬಸನಗೌಡ ಕೋನರಡ್ಡಿ, ಕಾರ್ತಿಕ ಬಿರಾದಾರ, ಶಿಲ್ಪಾ ಪೂಜಾರಿ, ನಿಖಿತಾ ರೂಡಿ, ಅಜಯ ಸೋಲಂಕಿ, ಶಶಿಕುಮಾರ ಪಾಟೀಲ, ಸಾಯಿ ಬಿರಾದಾರ ಇತರರಿದ್ದರು.
ಪ್ರಮುಖ ಬೇಡಿಕೆಗಳು
*ಖಾಲಿ ಇರುವ ಹುದ್ದೆಗಳ ನೇಮಕಾತಿ ಪ್ರಾರಂಭ ಮಾಡಬೇಕು.
*ವಿವಿಧ ಇಲಾಖೆಗಳಿಗೆ ನೇಮಕಾತಿ ಮಾಡುವಾಗ ವಯೋಮಿತಿಯನ್ನು ಸಡಿಲಿಕೆ ಮಾಡಬೇಕು.
*ವಿಶ್ವ ವಿದ್ಯಾಲಯಗಳಿಗೆ ಅನುದಾನ ನೀಡಬೇಕು.
*ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ -ಫಲಿತಾಂಶ, ಅಂಕಪಟ್ಟಿ ನೀಡಬೇಕು.