ಚಿನ್ನದ ಅಂಗಡಿಯಲ್ಲಿ ಸಿಲಿಂಡರ್ ಸ್ಪೋಟ, ಇಬ್ಬರು ಕಾರ್ಮಿಕರಿಗೆ ಗಾಯ

ವಿಜಯಪುರ ನಗರದ ಸರಾಫ್ ಬಜಾರದಲ್ಲಿರುವ ಚಿನ್ನದ ಅಂಗಡಿಯಲ್ಲಿ ಸಿಲಿಂಡರ್ ಸ್ಪೋಟಗೊಂಡ ಹಿನ್ನೆಲೆ ಜಿಲ್ಲಾಧಿಕಾರಿ ಡಾ.ಆನಂದ ಕೆ ಭೇಟಿ ನೀಡಿ ಪರಿಶೀಲಿಸಿದರು. ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ ಮತ್ತಿತರರಿದ್ದಾರೆ.
ವಿಜಯಪುರ ನಗರದ ಸರಾಫ್ ಬಜಾರದಲ್ಲಿರುವ ಚಿನ್ನದ ಅಂಗಡಿಯಲ್ಲಿ ಸಿಲಿಂಡರ್ ಸ್ಪೋಟಗೊಂಡ ಹಿನ್ನೆಲೆ ಜಿಲ್ಲಾಧಿಕಾರಿ ಡಾ.ಆನಂದ ಕೆ ಭೇಟಿ ನೀಡಿ ಪರಿಶೀಲಿಸಿದರು. ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ ಮತ್ತಿತರರಿದ್ದಾರೆ.
Published on

ಪ್ರಮುಖ ಮುಖ್ಯಾಂಶಗಳು

  • ಸರಾಫ್ ಬಜಾರದಲ್ಲಿ ನಡೆದ ಘಟನೆ
  • ಜಿಲ್ಲಾಧಿಕಾರಿ ಡಾ.ಆನಂದ ಕೆ ಭೇಟಿ
  • ಅಗ್ನಿ ಶಾಮಕ ದಳದಿಂದ ಕಾರ್ಯಾಚರಣೆ
ವಿಜಯಪುರ: ಚಿನ್ನದ ಕುಲುಮೆಗೆ ಅಳವಡಿಸಿದ್ದ ಸಿಲಿಂಡರ್ ಸ್ಪೋಟಗೊಂಡ ಪರಿಣಾಮ ಇಬ್ಬರು ಕಾರ್ಮಿಕರು ಗಾಯಗೊಂಡಿದ್ದು, ಸ್ಪೋಟದ ತೀವ್ರತೆಗೆ ಚಿನ್ನದ ಅಂಗಡಿ ಷಟರ್ ಹಾಗೂ ಗಿಫ್ಟ್ ಸೆಂಟರ್‌ಗೆ ದೊಡ್ಡ ಪ್ರಮಾಣದ ಹಾನಿಯಾಗಿದೆ.
ನಗರದ ಸರಾಫ್ ಬಜಾರದಲ್ಲಿರುವ ತ್ರಿಲೋಕಚಂದ್ ಶಿರೂರ ಎಂಬುವರ ಕಟ್ಟಡದಲ್ಲಿ ಗುರುವಾರ ಈ ಘಟನೆ ನಡೆದಿದ್ದು, ಪಶ್ಚಿಮ ಬಂಗಾಳ ಮೂಲದ ಬೀಜು (38) ಮತ್ತು ನಾನಾ ಹಕ್ಕೀಂ (40) ಎಂಬುವರು ಗಾಯಗೊಂಡಿದ್ದಾರೆ. ತಕ್ಷಣವೇ ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ವಿವರ

ಸರಾಫ್ ಬಜಾರದಲ್ಲಿರುವ ಚಿನ್ನದ ಅಂಗಡಿಯಲ್ಲಿ ಕಾರ್ಮಿಕರು ಎಂದಿನಂತೆ ಕಾರ್ಯತತ್ಪರರಾಗಿದ್ದರು. ಈ ವೇಳೆ ಸಿಲಿಂಡರ್‌ನಲ್ಲಿದ್ದ ಅನಿಲ ಸೋರಿಕೆಯಾಗಿ ದೊಡ್ಡ ಪ್ರಮಾಣದಲ್ಲಿ ಸ್ಪೋಟ ಸಂಭವಿಸಿದೆ. ದೊಡ್ಡ ಪ್ರಮಾಣದ ಶಬ್ದ ಉಂಟಾಗಿ, ದಟ್ಟ ಹೊಗೆ ಆವರಿಸಿದೆ. ಬೆಂಕಿ ಹೊತ್ತಿಕೊಂಡಿದ್ದು ಕಾರ್ಮಿಕರು ಹೊರ ಓಡಿದ್ದಾರೆ. ಈವೇಳೆ ಗಾಯಗಳಾಗಿವೆ. ಘಟನೆಯಿಂದ ಕೆಲ ಕಾಲ ಸರಾಫ್ ಬಜಾರದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಕೂಡಲೇ ಅಗ್ನಿ ಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆ ನಡೆಸಿದರು.
ಘಟನೆಯಿಂದಾಗಿ ಗಿಫ್ಟ್ ಸೆಂಟರ್‌ನಲ್ಲಿ ಇರಿಸಲಾಗಿರುವ ಅನೇಕ ವಸ್ತುಗಳು ದೊಡ್ಡ ಪ್ರಮಾಣದಲ್ಲಿ ಹಾನಿಗೀಡಾಗಿವೆ. ಗಾಜಿನ ಅಲಂಕಾರಿಕ ವಸ್ತುಗಳು, ಫೋಟೋ ಫ್ರೇಮ್‌ಗಳು, ಆಟಿಕೆಗಳು ಸಂಪೂರ್ಣ ನೆಲಕ್ಕುರುಳಿ ಲಕ್ಷಾಂತರ ರೂ. ಹಾನಿಗೀಡಾಗಿದೆ. ಸ್ಥಳಕ್ಕೆ ಜಿಲ್ಲಾಧಿಕಾರಿ ಡಾ.ಆನಂದ ಕೆ, ಎಸ್‌ಪಿ ಲಕ್ಷ್ಮಣ ನಿಂಬರಗಿ ಹಾಗೂ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ ಕೂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net