ಹಳೆಯ ಪದ್ಧತಿ ಅನ್ವಯ ನೇಮಕ ಪ್ರಕ್ರಿಯೆ ನಡೆಸಿ

ವಿಜಯಪುರ ನಗರದ ಹಳೆಯ ಪ್ರವಾಸಿ ಮಂದಿರದಲ್ಲಿ ಚಲವಾದಿ ಮಹಾಸಭಾದ ಮುಖಂಡರು ಸುದ್ದಿಗೋಷ್ಠಿ ನಡೆಸಿದರು. ಮುಖಂಡರಾದ ಕಲ್ಲಪ್ಪ ಕೊಡಬಾಗಿ, ಸುರೇಶ ಘೋಣಸಗಿ, ಅಡಿವೆಪ್ಪ ಸಾಲಗಲ್ಲ ಇತರರಿದ್ದಾರೆ.
ವಿಜಯಪುರ ನಗರದ ಹಳೆಯ ಪ್ರವಾಸಿ ಮಂದಿರದಲ್ಲಿ ಚಲವಾದಿ ಮಹಾಸಭಾದ ಮುಖಂಡರು ಸುದ್ದಿಗೋಷ್ಠಿ ನಡೆಸಿದರು. ಮುಖಂಡರಾದ ಕಲ್ಲಪ್ಪ ಕೊಡಬಾಗಿ, ಸುರೇಶ ಘೋಣಸಗಿ, ಅಡಿವೆಪ್ಪ ಸಾಲಗಲ್ಲ ಇತರರಿದ್ದಾರೆ.
Published on
ಒಳಮೀಸಲಾತಿ ವಿಚಾರದಲ್ಲಿ ಉಂಟಾಗಿರುವ ತಾರತಮ್ಯ ಹೋಗಲಾಡಿಸಬೇಕು, ಹಳೆಯ ಮೀಸಲಾತಿ ಪದ್ಧತಿ ಅನ್ವಯವೇ ನೇಮಕ ಪ್ರಕ್ರಿಯೆ ನಡೆಯಬೇಕು, ಹಾಗೊಂದು ವೇಳೆ ರೋಸ್ಟರ್ ಬಿಂದು ನಿಯಮ ಆಧರಿಸಿ ನೇಮಕ ಪ್ರಕ್ರಿಯೆ ನಡೆಸುವುದೇ ಆದಲ್ಲಿ ಪರಿಶಿಷ್ಟ ಜಾತಿಯ ಎಡ ಮತ್ತು ಬಲ ಸಮುದಾಯಗಳಿಗೆ ಮೀಸಲಾತಿ ಪ್ರಮಾಣವನ್ನು ಸಮಾನವಾಗಿ ಹಂಚಿಕೆ ಮಾಡಬೇಕೆಂದು ಚಲವಾದಿ ಮಹಾಸಭಾ ಆಗ್ರಹಿಸಿದೆ.
ರಾಜ್ಯದಲ್ಲಿ ಒಳಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಉಂಟಾದ ಗೊಂದಲಕ್ಕೆ ಸಂಬಂಧಿಸಿದಂತೆ ಮತ್ತು ಮಾದಿಗ ಸಮುದಾಯದ ಮುಖಂಡ ಭಾಸ್ಕರ್ ಪ್ರಸಾದ್ ಅವರ ಆರೋಪಗಳಿಗೆ ಸಂಬಂಧಿಸಿದಂತೆ ಸೋಮವಾರ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯೆ ನೀಡಿದ ಮಹಾಸಭಾದ ಮುಖಂಡರುಗಳು, ಪರಿಶಿಷ್ಟ ಜಾತಿಯ ಎಡ ಮತ್ತು ಬಲ ಸಮುದಾಯಗಳು ಸಹೋದರರಿದ್ದಂತೆ. ಈ ಸಮುದಾಯಗಳ ಮಧ್ಯೆ ಬಿರುಕು ಮೂಡಿಸುವ ಪ್ರಯತ್ನ ಸಹಿಸುವುದಿಲ್ಲವೆಂದರು.
ಮುಖಂಡ ಚಂದ್ರಶೇಖರ ಕೊಡಬಾಗಿ ಮಾತನಾಡಿ, ದೇಶದಲ್ಲಿ ನೂರಾರು ವರ್ಷಗಳಿಂದ ಚಲವಾದಿ ಸಮುದಾಯ ಶೋಷಣೆಗೆ ಒಳಗಾಗುತ್ತಲೇ ಬಂದಿದೆ. ಯಾರೋ ರಾಜಕೀಯ ಲಾಭಕ್ಕಾಗಿ ಸಮಾಜವನ್ನು ಒಡೆದು ಆಳಲು ಪ್ರಯತ್ನಿಸುತ್ತಿದ್ದಾರೆ. ಪ್ರಸ್ತುತ ರಾಜ್ಯ ಸರ್ಕಾರ ೫೬೪೦೦ ಹುದ್ದೆಗಳಿಗೆ ನೇಮಕ ಪ್ರಕ್ರಿಯೆಗೆ ಮುಂದಾಗಿದ್ದು, ಅದಕ್ಕೆ ತೊಂದರೆಯಾಗದಂತೆ ಹಳೆಯ ಮೀಸಲಾತಿ ಅನ್ವಯವೇ ನೇಮಕ ಪ್ರಕ್ರಿಯೆ ನಡೆಸಬೇಕೆಂದು ಆಗ್ರಹಿಸಿದರು.
ಮುಖಂಡ ಅಭಿಷೇಕ ಚಕ್ರವರ್ತಿ ಮಾತನಾಡಿ, ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಪರಿಶಿಷ್ಟ ಜಾತಿಗಳಿಗೆ ಮೀಸಲಾತಿ ಸೌಲಭ್ಯ ಕಲ್ಪಿಸಿದ್ದಾರೆ. ೧೯೭೫ ಮತ್ತು ೧೯೯೫ರಲ್ಲಿ ಮೀಸಲಾತಿ ನಿರ್ವಹಣೆ ಮಾಡಿಕೊಂಡು ಬರಲಾಗಿದೆ. ಇದಕ್ಕೂ ಮೊದಲು ನಾಲ್ವಡಿ ಕೃಷ್ಣರಾಜ ಒಡೆಯರ ಅವರು ಶೇ.೫೦ರಷ್ಟು ಮೀಸಲಾತಿ ಕಲ್ಪಿಸಿದ್ದರು. ಆದರೆ ೧೯೭೯ರಲ್ಲಿ ಹಾವನೂರ ವರದಿ ನಂತರ ಲಂಬಾಣಿ, ಬೋವಿ, ಒಡ್ಡರ, ಕೊರಮ ಮತ್ತು ಕೊರಚ ಸಮುದಾಯ ಸೇರ್ಪಡೆ ಮಾಡಲಾಯಿತು. ಅಲ್ಲಿವರೆಗೆ ಮೂಲ ಅಸ್ಗೆಪೃ ಮಾತ್ರ ಮೀಸಲಾತಿ ಇತ್ತು. ಇಂದಿಗೂ ಹೊಲೆಯ-ಮಾದಿಗ ಸಮುದಾಯ ಸಹೋದರರಂತೆ ಬದುಕುತ್ತಿದ್ದಾರೆ. ಇದೀಗ ಕೆಲವರು ಜಗಳ ಹಚ್ಚುವ ಕೆಲಸ ಮಾಡುತ್ತಿದ್ದಾರೆಂದು ಟೀಕಿಸಿದರು.
ಈವರೆಗೆ ಸರಿಸಮಾನವಾಗಿ ಮೀಸಲಾತಿ ಪಡೆದಿದ್ದೇವೆ. ಕೆಲವರು ಅಸ್ಪೃಷ್ಯರ ಪರಿಶಿಷ್ಟ ಜಾತಿಗೆ ಸೇರ್ಪಡೆಯಾಗಿ ಬಹುಪಾಲು ಸೌಲಭ್ಯ ಪಡೆಯಬೇಕೆಂಬ ಕಾರಣಕ್ಕೆ ಒಳಮೀಸಲಾತಿಗೆ ಬೇಡಿಕೆ ಇರಿಸಲಾಯಿತು. ಇದೀಗ ಆ ಪ್ರಕಾರ ಮೀಸಲಾತಿ ಹಂಚಿಕೆಯಾಗಿದ್ದು ನ್ಯೂನತೆ ಸರಿಪಡಿಸಿ ಸರಿಸಮಾನ ಮೀಸಲಾತಿ ಸೌಲಭ್ಯ ಕಲ್ಪಿಸಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ಮುಖಂಡರಾದ ನಾಗರಾಜ ಲಂಬು, ಸುರೇಶ ಘೋಣಸಗಿ, ಅಡಿವೆಪ್ಪ ಸಾಲಗಲ್ಲ, ಚನ್ನು ಕಟ್ಟಿಮನಿ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net