

ಪ್ರಮುಖ ಮುಖ್ಯಾಂಶಗಳು
ಕಾಲೇಜು ಎನ್ನುವುದು ಕೇವಲ ಪದವಿ ಪಡೆಯುವ ಸ್ಥಳವಲ್ಲ, ಅದು ವ್ಯಕ್ತಿತ್ವ ನಿರ್ಮಾಣದ ಪವಿತ್ರ ತಾಣ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಸಂಯೋಜಕಿ ಭಾರತಿ ಪಾಟೀಲ ಹೇಳಿದರು.
ನಗರದ ಬಿಎಲ್‌ಡಿಈ ಸಂಸ್ಥೆಯ ಬಂಗಾರಮ್ಮ ಸಜ್ಜನ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಿಳಾ ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಹಾಗೂ ಕ್ರೀಡಾ ಕಾರ್ಯಕ್ರಮಗಳ ಉದ್ಘಾಟನೆ, ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗಾಗಿ ನವಾರಂಭ ವಿಶೇಷ ಸ್ವಾಗತ ಸಮಾರಂಭದಲ್ಲಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಈ ಅವಧಿಯಲ್ಲಿ ಪಡೆಯುವ ಜ್ಞಾನ, ಬೆಳೆಸಿಕೊಳ್ಳುವ ಸ್ನೇಹ, ರೂಪಿಸಿಕೊಳ್ಳುವ ಮೌಲ್ಯಗಳು ಮತ್ತು ಬೆಳೆಸುವ ಕನಸುಗಳು ಭವಿಷ್ಯವನ್ನು ನಿರ್ಧರಿಸುತ್ತವೆ. ಹೀಗಾಗಿ, ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಶಿಸ್ತು, ಪರಿಶ್ರಮ ಮತ್ತು ಪ್ರಾಮಾಣಿಕತೆಯಿಂದ ಮುನ್ನಡೆಯಬೇಕೆಂದು ಸಲಹೆ ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪದ್ಮರಾಜ ವಿದ್ಯಾವರ್ಧಕ ಸಂಸ್ಥೆ ಆಡಳಿತಾಧಿಕಾರಿ ಡಾ. ಬಿ.ಜಿ. ಮಠ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಕೇವಲ ಪದವಿ ಪಡೆದರೆ ಸಾಲದು. ಕೌಶಲ, ಸಂವಹನ ಸಾಮರ್ಥ್ಯ, ತಂತ್ರಜ್ಞಾನದ ಜ್ಞಾನ, ಸೃಜನಶೀಲತೆ ಮತ್ತು ಮಾನವೀಯ ಮೌಲ್ಯಗಳು ವಿದ್ಯಾರ್ಥಿಗಳ ವ್ಯಕ್ತಿತ್ವದ ಅವಿಭಾಜ್ಯ ಭಾಗವಾಗಬೇಕು ಎಂದು ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ವೈ.ತಮ್ಮಣ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು.
ಮೇಜರ್ ಧ್ಯಾನಚಂದ್ ಅವರ ಜನ್ಮದಿನದ ನೆನಪಿಗಾಗಿ ರಾಷ್ಟ್ರೀಯ ಕ್ರೀಡಾ ದಿನವನ್ನು ಸಹ ಆಚರಿಸಲಾಯಿತು. ಕ್ರೀಡಾ ವಿಭಾಗದ ಮುಖ್ಯಸ್ಥೆ ಸವಿತಾ ಅಣ್ಣೆಪ್ಪನವರ ಮೇಜರ್ ಧ್ಯಾನಚಂದ್ ಅವರ ಸಾಧನೆಯ ಮೆಟ್ಟಿಲುಗಳನ್ನು ಮೆಲುಕು ಹಾಕಿದರು. ವಿ.ಎಸ್. ನಂದೇಶ ಸ್ವಾಗತಿಸಿ, ಪರಿಚಯಿಸಿದರು. ದೀಪಾ ಲಗಳಿಯವರು ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಚಂದ್ರಕಲಾ ದೊಡಮನಿ ನಿರೂಪಿಸಿದರು. ಸವಿತಾ ಅಣ್ಣೆಪ್ಪನವರ ವಂದಿಸಿದರು. ಕೊನೆಯಲ್ಲಿ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಐಕ್ಯೂಎಸಿ ಸಂಯೋಜಕಿ ಭಕ್ತಿ ಮಹೇಂದ್ರಕರ, ಎಸ್.ಡಿ. ಪಾಟೀಲ, ರಶ್ಮಿ ಪಾಟೀಲ, ವಿದ್ಯಾರ್ಥಿ ಪ್ರತಿನಿಧಿಗಳಾದ ರಾಧಿಕಾ ಕವಟಗಿ ಹಾಗೂ ತ್ರಿವೇಣಿ ಪತ್ತಾರ ಮತ್ತಿತರರಿದ್ದರು.