ಕಾಕ್ಲಿಯರ್ ಇಂಪ್ಲಾಂಟ್ ಸ್ವಿಚ್ ಆನ್ ಕಾರ್ಯಕ್ರಮ ಯಶಸ್ವಿ

 ವಿಜಯಪುರದ ಬಿಎಲ್‌ಡಿಇ ಆಸ್ಪತ್ರೆಯಲ್ಲಿ ಕಾಕ್ಲಿಯರ್ ಇಂಪ್ಲಾಂಟ್ ಸ್ವಿಚ್ ಆನ್ ಕಾರ್ಯಕ್ರಮ ಯಶಸ್ವಿ ನಡೆಯಿತು. ಅರುಣ ಇನಾಮದಾರ, ತೇಜಶ್ವಿನಿ ವಲ್ಲಭ, ಲತಾದೇವಿ ಎಚ್.ಟಿ. ಮತ್ತಿತರರಿದ್ದಾರೆ.
ವಿಜಯಪುರದ ಬಿಎಲ್‌ಡಿಇ ಆಸ್ಪತ್ರೆಯಲ್ಲಿ ಕಾಕ್ಲಿಯರ್ ಇಂಪ್ಲಾಂಟ್ ಸ್ವಿಚ್ ಆನ್ ಕಾರ್ಯಕ್ರಮ ಯಶಸ್ವಿ ನಡೆಯಿತು. ಅರುಣ ಇನಾಮದಾರ, ತೇಜಶ್ವಿನಿ ವಲ್ಲಭ, ಲತಾದೇವಿ ಎಚ್.ಟಿ. ಮತ್ತಿತರರಿದ್ದಾರೆ.
Published on

ಪ್ರಮುಖ ಮುಖ್ಯಾಂಶಗಳು

  • ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ವಿಭಾಗದಲ್ಲಿ ಇಎನ್‌ಟಿ ಆಯೋಜನೆ
  • ಶಸ್ತ್ರಚಿಕಿತ್ಸೆ ಯಶಸ್ವಿ
 ವಿಜಯಪುರನಗರದ ಬಿಎಲ್‌ಡಿಇ ಆಸ್ಪತ್ರೆಯಲ್ಲಿ ಕಾಕ್ಲಿಯರ್ ಇಂಪ್ಲಾಂಟ್ ಸ್ವಿಚ್ ಆನ್ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಶುಕ್ರವಾರ, ನಗರದ ಬಿಎಲ್‌ಡಿಇ ಡೀಮ್ಡ್ ವಿಶ್ವವಿದ್ಯಾಲಯದ ಬಿ.ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಕಿವಿ, ಮೂಗು ಮತ್ತು ಗಂಟಲು (ಇಎನ್‌ಟಿ) ವಿಭಾಗದಲ್ಲಿ ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆಗೆ ಒಳಗಾದ ಮಗುವಿನ ಸ್ವಿಚ್ ಆನ್ ಮಾಡಲಾಯಿತು.
ಡೀಮ್ಡ್ ವಿವಿ ಕುಲಪತಿ ಅರುಣ ಇನಾಮದಾರ, ಪ್ರಾಚಾರ್ಯೆ ತೇಜಸ್ವಿನಿ ವಲ್ಲಭ, ಆಸ್ಪತ್ರೆಯ ಅಧೀಕ್ಷಕ ಸಂಜೀವ ಬೆಂಟೂರ, ಹಿರಿಯ ಉಪ ಪ್ರಾಚಾರ್ಯ ವಿಜಯಕುಮಾರ ಕಲ್ಯಾಣಪ್ಪಗೋಳ, ಕಾಕ್ಲಿಯರ್ ಇಂಪ್ಲಾಂಟ್ ಸಮನ್ವಯಾಧಿಕಾರಿ ಎಚ್.ಟಿ. ಲತಾದೇವಿ ಹಾಗೂ ಇಎನ್‌ಟಿ ವಿಭಾಗದ ಮುಖ್ಯಸ್ಥ ರವೀಂದ್ರ ಕರಡಿ ಉಪಸ್ಥಿತರಿದ್ದರು.
ಹುಟ್ಟು ಕಿವುಡುತನದಿಂದ ಬಳಲುತ್ತಿದ್ದ ಈ ಮಗುವಿಗೆ ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನೆರವೇರಿಸಲಾಗಿದ್ದು, ಸ್ವಿಚ್ ಆನ್ ಪ್ರಕ್ರಿಯೆಯ ಮೂಲಕ ಮೊದಲ ಬಾರಿಗೆ ಧ್ವನಿಯನ್ನು ಆಲಿಸುವ ಅನುಭವ ಮಗು ಪಡೆಯಿತು.
ಕುಲಪತಿ ಡಾ. ಅರುಣ ಇನಾಮದಾರ ಮಾತನಾಡಿ, ವೈದ್ಯರ ಪರಿಣತಿ, ಪಾಲಕರ ಸಹಕಾರ ಹಾಗೂ ಆಸ್ಪತ್ರೆಯ ಸೌಲಭ್ಯಗಳ ಸಮನ್ವಯದಿಂದ ಇಂತಹ ಜೀವಿತ ಪರಿವರ್ತನೆಯ ಚಿಕಿತ್ಸೆಗಳು ಸಾಧ್ಯವಾಗುತ್ತಿವೆ ಎಂದು ತಿಳಿಸಿದರು.
ಕಾಕ್ಲಿಯರ್ ಇಂಪ್ಲಾಂಟ್ ಸಮನ್ವಯಾಧಿಕಾರಿ ಎಚ್.ಟಿ. ಲತಾದೇವಿ ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆಯ ಕುರಿತು ಮಾಹಿತಿ ನೀಡಿ, ಶಸ್ತ್ರಚಿಕಿತ್ಸೆಯ ನಂತರ ಎರಡು ವರ್ಷಗಳ ಕಾಲ ವಾಕ್-ಶ್ರವಣ ತರಬೇತಿ ನೀಡಲಾಗುತ್ತದೆ. ಅದರ ಮೂಲಕ ಮಗು ಸಾಮಾನ್ಯ ಮಕ್ಕಳಂತೆ ಶಿಕ್ಷಣ ಪಡೆದು ಜೀವನದ ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿ, ಪಾಲಕರಿಗೆ ಅಗತ್ಯ ಮಾರ್ಗದರ್ಶನ ಮತ್ತು ಸಲಹೆಗಳನ್ನು ನೀಡಿದರು. ಅಲ್ಲದೆ, ಕಾಕ್ಲಿಯರ್ ಇಂಪ್ಲಾಂಟ್ ಕಿಟ್ ಅನ್ನು ಹಸ್ತಾಂತರಿಸಿ ಮಗುವಿನ ಮುಂದಿನ ಜೀವನ ಸುಖಮಯವಾಗಿರಲಿ ಎಂದು ಶುಭ ಹಾರೈಸಿದರು.
ಪ್ರಾಚಾರ್ಯೆ ತೇಜಸ್ವಿನಿ ವಲ್ಲಭ ಮಾತನಾಡಿ, ಕಾಕ್ಲಿಯರ್ ಇಂಪ್ಲಾಂಟ್ ಸೌಲಭ್ಯದ ಕುರಿತು ಜನರಲ್ಲಿ ಹೆಚ್ಚಿನ ಅರಿವು ಮೂಡಿಸುವ ಅಗತ್ಯವಿದೆ. ಬಿಎಲ್‌ಡಿಇ ಆಸ್ಪತ್ರೆಯಲ್ಲಿ ಇಂತಹ ಅತ್ಯಾಧುನಿಕ ಚಿಕಿತ್ಸೆ ಸೇವೆಗಳನ್ನು ಇನ್ನಷ್ಟು ವಿಸ್ತರಿಸಲಾಗುವುದು ಎಂದು ತಿಳಿಸಿದರು.
ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆಗೆ ಸಾಮಾನ್ಯವಾಗಿ 7.50 ಲಕ್ಷ  ರೂ.ಗಳಿಂದ 15 ಲಕ್ಷ ರೂ.ವರೆಗೆ ವೆಚ್ಚವಾಗುತ್ತದೆ. ಆದರೆ, ಸರ್ಕಾರದ ವಿವಿಧ ಯೋಜನೆಗಳಡಿ ಅರ್ಹ ಫಲಾನುಭವಿಗಳು ಈ ಸೌಲಭ್ಯವನ್ನು ಪಡೆಯಬಹುದಾಗಿದೆ. ಇಂತಹ ಶಸ್ತ್ರಚಿಕಿತ್ಸೆಗಳನ್ನು ನೆರವೇರಿಸಲು ಅಗತ್ಯವಿರುವ ಎಲ್ಲ ಆಧುನಿಕ ಸೌಲಭ್ಯಗಳು ಬಿಎಲ್ಡಿಇ ಆಸ್ಪತ್ರೆಯಲ್ಲಿ ಲಭ್ಯವಿವೆ.
ಆಸ್ಪತ್ರೆಯ ವಾಕ್-ಶ್ರವಣ ವಿಭಾಗದಲ್ಲಿ ನಡೆದ ಸ್ವಿಚ್ ಆನ್ ಕಾರ್ಯಕ್ರಮದಲ್ಲಿ ಒಂದೂವರೆ ವರ್ಷದ ಮಗುವಿಗೆ ಮೊದಲ ಬಾರಿಗೆ ಧ್ವನಿ ಕೇಳಿಸಿದಾಗ ಮಗು ಸಂತಸದಿಂದ ಪ್ರತಿಕ್ರಿಯಿಸಿತು. ವಾಕ್-ಶ್ರವಣ ತಜ್ಞರಾದ ಸಂತೋಷ ಹಾಗೂ ರಕ್ಷಿತಾ ಅವರು ಈ ಪ್ರಕ್ರಿಯೆಯನ್ನು ಯಶಸ್ವಿಯಾಗಿ ನಿರ್ವಹಿಸಿದರು.
ಶಸ್ತ್ರಚಿಕಿತ್ಸೆ ಪಡೆದ ಮಗುವಿನ ಪಾಲಕರು ಮಾತನಾಡಿ, ನಮ್ಮ ಮಗುವಿನ ಜೀವನದಲ್ಲಿ ಹೊಸ ಆಶಾಕಿರಣ ಮೂಡಿದೆ. ಬಿಎಲ್ಡಿಇ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಯ ಸೇವೆಯಿಂದ ನಮ್ಮ ಮಗುವಿನ ಭವಿಷ್ಯದ ಬಗ್ಗೆ ಹೊಸ ಭರವಸೆ ಮೂಡಿದೆ ಎಂದು ಕೃತಜ್ಞತೆ ಸಲ್ಲಿಸಿದರು.
ಕೊನೆಯಲ್ಲಿ ಮಗುವಿಗೆ ಕೇಕ್ ಹಾಗೂ ಭಾವಚಿತ್ರ ನೀಡಿ ಸಂಭ್ರಮಿಸಲಾಯಿತು. ಮಗುವಿನ ಪಾಲಕರು ವೈದ್ಯರು ಹಾಗೂ ಆಸ್ಪತ್ರೆಯ ಸಿಬ್ಬಂದಿಗೆ ಹೃತ್ಪೂರ್ವಕ ಧನ್ಯವಾದ ಸಲ್ಲಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net