

ವಿಜಯಪುರ: ‘ಬರಗಾಲದ ಸಂದರ್ಭದಲ್ಲಿ ಜನರ ನೆರವಿಗೆ ಧಾವಿಸದ ಸಿಎಂ, ಡಿಸಿಎಂ, ಸಚಿವರು ಹಾಗೂ ಶಾಸಕರು ಜಂತರ್‌ಮಂತರ್‌ಗೆ ತೆರಳುವುದಾಗಿ ಹೇಳುತ್ತಿರುವುದು ಈ ರಾಜ್ಯದ ಜನರ ದೌರ್ಭಾಗ್ಯ’ ಎಂದು ಸಂಸದ ರಮೇಶ ಜಿಗಜಿಣಗಿ ಟೀಕೆ ಮಾಡಿದ್ದಾರೆ.
‘ಸಕಾಲಕ್ಕೆ ಮಳೆ-ಬೆಳೆ ಬಾರದೇ ರೈತ ಕಂಗಾಲಾಗಿದ್ದಾನೆ. ಬರ ವೀಕ್ಷಣೆಗಾಗಿ ರಾಜ್ಯ ಪ್ರವಾಸ ಕೈಗೊಳ್ಳಬೇಕಿದ್ದ ಸಿಎಂ ಮತ್ತು ಡಿಸಿಎಂ ಆದಿಯಾಗಿ ಎಲ್ಲ ಸಚಿವರು ದೆಹಲಿಯಲ್ಲಿ ನಡೆಯುತ್ತಿರುವ ಅಸಂವಿಧಾನಿಕ ಹೋರಾಟದಲ್ಲಿ ಭಾಗಿಯಾಗುವ ಕುರಿತು ಹೇಳಿಕೆ ನೀಡುತ್ತಿದ್ದಾರೆ. ಬರ ವೀಕ್ಷಣೆಗೆ ಹೆಲಿಕಾಪ್ಟರ್‌ನಲ್ಲಿ ಸುತ್ತಾಡುವ ಸಿಎಂ ಡಿ.ಕೆ. ಶಿವಕುಮಾರಗೆ ಇದೀಗ ದೆಹಲಿಗೆ ತೆರಳಲು ಎಲ್ಲಿಂದ ಸಮಯ ಸಿಕ್ಕಿತೋ ನಾ ಕಾಣೆ’ ಎಂದಿದ್ದಾರೆ.
‘ಸಿಜೆಪಿ ಹೋರಾಟ ಕಾಂಗ್ರೆಸ್ ಪ್ರೇರಿತವಾಗಿದ್ದು, ದೇಶದಲ್ಲಿ ಅರಾಜಕತೆ ಸೃಷ್ಟಿಸಿ ಅಧಿಕಾರಕ್ಕೆ ಬರಬಹುದು ಎಂಬ ಭ್ರಮೆಯಲ್ಲಿ ಕಾಂಗ್ರೆಸ್ ನಾಯಕರಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಸರ್ಕಾರದ ನೀತಿಗಳನ್ನು ಪ್ರಶ್ನಿಸುವುದು, ಪ್ರತಿಭಟನೆ ನಡೆಸುವುದು ಮತ್ತು ಸಾರ್ವಜನಿಕ ಸಮಸ್ಯೆಗಳ ಕುರಿತು ಧ್ವನಿ ಎತ್ತುವುದು ನಾಗರಿಕರ ಹಕ್ಕು. ಆದರೆ, ಅದು ಸಂವಿಧಾನ ಬದ್ಧವಾಗಿರಬೇಕು. ನ್ಯಾಯಯುತವಾದ ಮಾರ್ಗದಲ್ಲಿರಬೇಕು. ಆದರೆ, ಜಂತರ್-ಮಂತರ್‌ನಲ್ಲಿ ನಡೆಯುತ್ತಿರುವ ಹೋರಾಟ ಅಸಾಂವಿಧಾನಿಕ. ಪ್ರತಿಭಟನೆಯ ಹಿಂದೆ ರಾಜಕೀಯ ದುರುದ್ದೇಶ ಅಡಗಿದೆ’ ಎಂದು ಜಿಗಜಿಣಗಿ ತಿಳಿಸಿದ್ದಾರೆ.
‘ಎಸ್‌ಐಆರ್ ಪ್ರಕ್ರಿಯೆ ದೇಶಾದ್ಯಂತ ಅತ್ಯಂತ ವ್ಯವಸ್ಥಿತವಾಗಿ ನಡೆಯುತ್ತಿದೆ. ಲೋಪಗಳಿದ್ದರೆ ನ್ಯಾಯ ಕಂಡುಕೊಳ್ಳಲು ನ್ಯಾಯಾಂಗ ವ್ಯವಸ್ಥೆ ಇದೆ. ಅದನ್ನು ಬಿಟ್ಟು ಈ ರೀತಿ ಅಡ್ಡ ದಾರಿ ಹಿಡಿದರೆ ಸಂವಿಧಾನ ವಿರೋಧಿ, ದೇಶವಿರೋಧಿ ಕೃತ್ಯವಲ್ಲದೇ ಮತ್ತಿನ್ನೇನು? ಹೋರಾಟದಲ್ಲಿ ಭಾಗಿಯಾಗುವವರಿಗೆ ಸಂವಿಧಾನದ ಮೇಲೆ, ಈ ದೇಶದ ನ್ಯಾಯಾಂಗ ವ್ಯವಸ್ಥೆ ಮೇಲೆ ನಂಬಿಕೆ ಇದ್ದರೆ ಅರಾಜಕೃತೆ ಸೃಷ್ಠಿಸುವುದನ್ನು ಬಿಟ್ಟು ನ್ಯಾಯಯುತ ಮಾರ್ಗದಲ್ಲಿ ಪ್ರತಿಭಟಿಸಲಿ. ನ್ಯಾಯಾಂಗದ ಮೂಲಕ ವ್ಯವಸ್ಥಿತವಾಗಿ ಸಮಸ್ಯೆ ಬಗೆ ಹರಿಸಿಕೊಳ್ಳಲಿ. ಇಲ್ಲದೇ ಹೋದರೆ, ಹೋರಾಟಗಾರರು ಮತ್ತು ಹೋರಾಟಕ್ಕೆ ಬೆಂಬಲಿಸುವವರ ಉದ್ದೇಶ ಸರಿಯಿಲ್ಲ ಎಂಬುದು ಸಾಬೀತಾಗುತ್ತದೆ. ಈಗಾಗಲೇ ದೇಶದ ಜನ ಈ ಅತಾರ್ಕಿಕ, ಅಸಾಂವಿಧಾನಿಕ ಹೋರಾಟವನ್ನು ಗಮನಿಸುತ್ತಿದ್ದು, ಇದೇ ವರ್ತನೆ ಮುಂದುವರಿದರೆ ಜನರೇ ತಕ್ಕ ಪಾಠ ಕಲಿಸುವುದು ನಿಶ್ಚಿತ’ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.