ವಿಜಯಪುರ ನಗರದ ರಾಣಿ ಚನ್ನಮ್ಮ ಸಮುದಾಯ ಭವನದಲ್ಲಿ ರಾಣಿ ಚನ್ನಮ್ಮ ಮೂರ್ತಿ ಪ್ರತಿಷ್ಟಾಪನೆ ಸಮಿತಿ ಅಧ್ಯಕ್ಷ ಉಮೇಶ ಕೋಳಕೂರ ಸುದ್ದಿಗೋಷ್ಠಿ ನಡೆಸಿದರು. ಎಸ್.ಎಸ್. ಆಲೂರ, ಪುಟ್ಟು ಸಾವಳಗಿ, ರವಿ ತೊರವಿ ಮತ್ತಿತರರಿದ್ದಾರೆ.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಸಮಿತಿ ಅಧ್ಯಕ್ಷ ಉಮೇಶ ಕೋಳಕೂರ ಹೇಳಿಕೆ
ಕೇಂದ್ರ ಬಸ್ ನಿಲ್ದಾಣಕ್ಕೆ ನಾಮಕರಣ
ದರಬಾರ್ ಮೈದಾನದಲ್ಲಿ ಸಮಾವೇಶ
ವಿಜಯಪುರ: ಐತಿಹಾಸಿಕ ನಗರಿಯ ಕೇಂದ್ರ ಬಸ್ ನಿಲ್ದಾಣದ ಎದುರು `ರಾಣಿ ಚನ್ನಮ್ಮ ಮೂರ್ತಿ ಪ್ರತಿಷ್ಟಾಪನೆ ಸಮಿತಿ'ಯಿಂದ ಪ್ರತಿಷ್ಟಾಪನೆಗೊಂಡಿರುವ ಸ್ವಾತಂತ್ರ‍್ಯ ಹೋರಾಟಗಾರ್ತಿ ವೀರರಾಣಿ ಕಿತ್ತೂರು ಚನ್ನಮ್ಮನವರ ಭವ್ಯ ಮೂರ್ತಿ ಲೋಕಾರ್ಪಣೆ ಜ.9ರಂದು ಭವ್ಯವಾಗಿ ನೆರವೇರಲಿದೆ ಎಂದು ಸಮಿತಿ ಅಧ್ಯಕ್ಷ ಉಮೇಶ ಕೋಳಕೂರ ತಿಳಿಸಿದರು
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಸೇರಿ ಜಿಲ್ಲೆಯ ಸಚಿವರು, ಸಂಸದರು, ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ಸೇರಿ ಪ್ರಮುಖರು ಪಾಲ್ಗೊಳ್ಳಲಿದ್ದು, ಕಾರ್ಯಕ್ರಮ ಐತಿಹಾಸಿಕ ಮೈಲಿಗಲ್ಲು ಸ್ಥಾಪಿಸಲಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ಅಂದಾಜು 2 ಕೋಟಿ ರೂಪಾಯಿ ವೆಚ್ಚದಲ್ಲಿ ಒಟ್ಟು 32 ಅಡಿ ಎತ್ತರದ ಮೂರ್ತಿ ಲೋಕಾರ್ಪಣೆಗೊಳ್ಳಲಿದ್ದು, ಅಂದು ಬೆಳಗ್ಗೆ 7ಕ್ಕೆ ಜಂಬಗಿಯಲ್ಲಿರುವ ಕಿತ್ತೂರು ಚನ್ನಮ್ಮಾಜಿ ವಂಶಸ್ಥರಿಂದ ಆಗಮಿಸುವ ವೀರಜ್ಯೋತಿ ಯಾತ್ರೆಗೆ ಅದ್ದೂರಿಯಾಗಿ ಸ್ವಾಗತಿಸಿಕೊಳ್ಳಲಾಗುವುದು. ಬಳಿಕ 3000 ಸುಮಂಗಲಿಯರಿಂದ ಕುಂಭ ಮೇಳ ಮೆರವಣಿಗೆಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಚಾಲನೆ ನೀಡುವರು. ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಗಣ್ಯರು ಪ್ರತಿಮೆ ಲೋಕಾರ್ಪಣೆಗೊಳಿಸುವರು. ರಾಷ್ಟ್ರ ಧ್ವಜಾರೋಹಣದ ಮೂಲಕ ಧ್ವಜಸ್ತಂಭ ಉದ್ಘಾಟಿಸಲಾಗುವುದು. ನಂತರ ದರಬಾರ್ ಮೈದಾನದಲ್ಲಿ ಬಹಿರಂಗ ಸಮಾವೇಶ ನಡೆಯಲಿದ್ದು ಲಕ್ಷಾಂತರ ಜನ ಪಾಲ್ಗೊಳ್ಳುವರೆಂದು ಕೋಳಕೂರ ತಿಳಿಸಿದರು.
ಗುತ್ತಿಗೆದಾರ ಎಸ್.ಎಸ್. ಆಲೂರ ಮಾತನಾಡಿ, ಎಲ್ಲರೂ ಒಗ್ಗಟ್ಟಿನಿಂದ ಈ ಸಮಾವೇಶ ನಡೆಸುತ್ತಿದ್ದೇವೆ. ಯಾವುದೇ ಭಿನ್ನಾಭಿಪ್ರಾಯವಿಲ್ಲದೇ ಅತ್ಯಂತ ವೈಭವದಿಂದ ಈ ಕಾರ್ಯಕ್ರಮ ನೆರವೇರುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲರಾದಿಯಾಗಿ ಎಲ್ಲ ಗಣ್ಯರೂ ಈ ಸಮಾವೇಶಕ್ಕೆ ಸಹಾಯ-ಸಹಕಾರ ನೀಡಿದ್ದಾರೆ ಎಂದರು.
ಸಮಿತಿಯ ಮುಖಂಡರಾದ ಪುಟ್ಟು ಸಾವಳಗಿ, ರವಿ ತೊರವಿ, ಬಿ.ಎಸ್. ಬಿರಾದಾರ, ಶಿವರಾಜ ಪಾಟೀಲ, ಆರ್.ಜಿ. ಯರನಾಳ, ವಿದ್ಯಾರಾಣಿ ತುಂಗಳ ಮತ್ತಿತರರಿದ್ದರು.