ಮಕ್ಕಳಲ್ಲಿ ಮಕ್ಕಳಾಗಿ ಬೆರೆತ ಸಿಇಒ ರಿಷಿ ಆನಂದ ! ಪ್ರೇರಣಾದಾಯಿ ಮಾತಿನ ಮೂಲಕ ಮನಗೆದ್ದ ಅಧಿಕಾರಿ

ವಿಜಯಪುರ ತಾಲೂಕಿನ ಹಿಟ್ಟಿನಹಳ್ಳಿ ಗ್ರಾಮದಲ್ಲಿ ಸಿಇಒ ರಿಷಿ ಆನಂದ ಅವರು ಮಕ್ಕಳಲ್ಲಿ ಮಕ್ಕಳಾಗಿ ಬೆರೆತ ಕ್ಷಣ.
ವಿಜಯಪುರ ತಾಲೂಕಿನ ಹಿಟ್ಟಿನಹಳ್ಳಿ ಗ್ರಾಮದಲ್ಲಿ ಸಿಇಒ ರಿಷಿ ಆನಂದ ಅವರು ಮಕ್ಕಳಲ್ಲಿ ಮಕ್ಕಳಾಗಿ ಬೆರೆತ ಕ್ಷಣ.
Published on

ವಿಜಯಪುರ: ಮಕ್ಕಳೊಂದಿಗೆ ಆಟ, ಚರ್ಚೆ, ಸಂವಾದ, ಸಾಮೂಹಿಕ ಭೋಜನದಲ್ಲಿ ಬಿಸಿಯೂಟ ಸೇವನೆ ಮೂಲಕ ಮಕ್ಕಳೊಂದಿಗೆ ಮಕ್ಕಳಾಗಿ ಬೆರೆತ ಸಿಇಒ ರಿಷಿ ಆನಂದ ಅವರ ನಡೆ ಜನ ಮೆಚ್ಚುಗೆಗೆ ಪಾತ್ರವಾಯಿತು.

ತಾಲೂಕಿನ ಹಿಟ್ಟಿನಹಳ್ಳಿ ಹಾಗೂ ಬಬಲೇಶ್ವರ ತಾಲೂಕಿನ ಹೊನಗನಹಳ್ಳಿ, ಕಾರಜೋಳ ಮತ್ತು ಕಾಖಂಡಕಿ ಗ್ರಾಮ ಪಂಚಾಯಿತಿಗಳಿಗೆ ಶುಕ್ರವಾರ ಭೇಟಿ ನೀಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿದ ಅವರು, ವಿಬಿಜಿ ರಾಮ್‌ಜಿ ಯೋಜನೆ ಕುರಿತು ಜಾಗೃತಿ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಿದರು.
ಈ ವೇಳೆ ಕಾಖಂಡಕಿ ಎಲ್.ಟಿ. ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಬಿಸಿಯೂಟ ಸವಿದು, ಗ್ರಾಮಸ್ಥರೊಂದಿಗೆ ನೇರವಾಗಿ ಸಂವಾದ ನಡೆಸಿ ವಿಬಿಜಿ ರಾಮ್‌ಜಿ ಯೋಜನೆಯ ಕುರಿತು ಜಾಗೃತಿ ಮೂಡಿಸಿದ್ದು ವಿಶೇಷ ಗಮನ ಸೆಳೆಯಿತು.
ಬಳಿಕ ಮಕ್ಕಳೊಂದಿಗೆ ಸರಳವಾಗಿ ಬೆರೆತು ಆತ್ಮೀಯ ಕ್ಷಣಗಳನ್ನು ಹಂಚಿಕೊಂಡರು. ತಮ್ಮ ಸಾಧನೆಯ ಹಾದಿ ಕುರಿತು ವಿವರಿಸಿದರು. ಪ್ರೇರಣಾದಾಯಿ ಮಾತುಗಳ ಮೂಲಕ ಮಕ್ಕಳ ಮನಸ್ಸು ಗೆದ್ದರು. ತಮ್ಮ ಸರಳತೆ ಹಾಗೂ ಮಾನವೀಯತೆ ಮೂಲಕ ಗ್ರಾಮಸ್ಥರ ಗಮನ ಸೆಳೆದರು. ತರಗತಿ ಕೊಠಡಿಗೆ ತೆರಳಿ ಮಕ್ಕಳೊಂದಿಗೆ ಆತ್ಮೀಯವಾಗಿ ಸಂವಾದ ನಡೆಸಿದರು. ಶಿಕ್ಷಣದ ಮಹತ್ವ, ಶಿಸ್ತು ಹಾಗೂ ಪರಿಶ್ರಮದ ಕುರಿತು ಮಕ್ಕಳಿಗೆ ಪ್ರೇರಣೆ ನೀಡಿದರು. ಶಾಲೆಯ ಅಡುಗೆ ಕೋಣೆ, ಆವರಣ ಹಾಗೂ ಎಲ್ಲ ತರಗತಿ ಕೊಠಡಿಗಳನ್ನು ಶುಚಿತ್ವದಿಂದ ಹಾಗೂ ಅಚ್ಚುಕಟ್ಟಾಗಿ ಕಾಪಾಡಿಕೊಂಡಿರುವುದನ್ನು ಗಮನಿಸಿ, ಮುಖ್ಯೋಪಾಧ್ಯಾಯರು, ಶಿಕ್ಷಕರು ಹಾಗೂ ಸಿಬ್ಬಂದಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಹಿಟ್ಟಿನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿಬಿಜಿ ರಾಮ್‌ಜಿ ಯೋಜನೆಯಡಿ ಕೈಗೊಳ್ಳಲಾಗುತ್ತಿರುವ ಹಳ್ಳ ಮತ್ತು ಕೆರೆ ಪುನಃಶ್ಚೇತನ ಕಾಮಗಾರಿಗಳನ್ನು ವೀಕ್ಷಿಸಿದ ಸಿಇಒ ಅವರು, ಕಾಮಗಾರಿಯ ಪ್ರಗತಿ ಹಾಗೂ ಸ್ಥಳದಲ್ಲಿನ ವ್ಯವಸ್ಥೆಗಳ ಕುರಿತು ಪರಿಶೀಲನೆ ನಡೆಸಿದರು.
ಬಳಿಕ ಹೊನಗನಹಳ್ಳಿ, ಕಾರಜೊಳ ಹಾಗೂ ಕಾಖಂಡಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಕಾಮಗಾರಿಗಳನ್ನು ವೀಕ್ಷಿಸಿದರು. ಹಿಟ್ಟಿನಹಳ್ಳಿ ಪಿಡಿಒ ರಾಜಶೇಖರ ಬಿರಾದಾರ, ಕಾಖಂಡಕಿ ಪಿಡಿಒ ಸುರೇಶ ಕಳ್ಳಮನಿ, ತಾಂತ್ರಿಕ ಸಿಬ್ಬಂದಿ, ಗ್ರಾಮ ಕಾಯಕ ಮಿತ್ರ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net