ಸಕಾಲಕ್ಕೆ ಶುದ್ಧ ಕುಡಿಯುವ ನೀರು ಪೂರೈಸಿ, ಅಧಿಕಾರಿಗಳಿಗೆ ಸಿಇಒ ರಿಷಿ ಆನಂದ ಕಟ್ಟುನಿಟ್ಟಿನ ಸೂಚನೆ
ಇಂಡಿ ತಾಲೂಕಿನ ಹೊರ್ತಿಯಲ್ಲಿ ಬಹುಹಳ್ಳಿ ಕುಡಿಯುವ ನೀರಿನ ಯೋಜನೆಯನ್ನು ಜಿಪಂ ಸಿಇಒ ರಿಷಿ ಆನಂದ ಪರಿಶೀಲಿಸಿದರು. ಅಭಿಯಂತರ ಸಂಜಯ ಕೋಟೆನ್ನವರ, ರಾಮಚಂದ್ರ ಬಂಡಿ, ಶಾಖಾಧಿಕಾರಿ ಚಂದ್ರಶೇಖರ ಚವಾಣ್ ಇದ್ದಾರೆ.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಭೀಮಾತೀರದಲ್ಲಿ ಮಿಂಚಿನ ಸಂಚಲನ
ಎಂವಿಎಸ್‌ಗಳ ಸ್ಥಿತಿಗತಿ ಪರಿಶೀಲನೆ
ಜಲಮೂಲಗಳ ಉಳಿವಿಗೆ ಕ್ರಮ
ವಿಜಯಪುರ: ‘ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಅಧಿಕಾರಿಗಳು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ರಿಷಿ ಆನಂದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇಂಡಿ ತಾಲೂಕಿನ ಹೊರ್ತಿ ಮತ್ತು ಇತರೆ 31 ಗ್ರಾಮಗಳಿಗೆ ಹಾಗೂ ಚಡಚಣ ತಾಲೂಕಿನ ಇಂಚಗೇರಿ ಮತ್ತು ಇತರೆ 41 ಗ್ರಾಮಗಳಿಗೆ ನೀರು ಪೂರೈಸುವ ಬಹುಹಳ್ಳಿ ಕುಡಿಯುವ ನೀರು ಸರಬರಾಜು ಯೋಜನೆಗಳ ಜಲಮೂಲಗಳು ಹಾಗೂ ನೀರು ಸಂಸ್ಕರಣಾ ಘಟಕಗಳಿಗೆ ಸೋಮವಾರ ಭೇಟಿ ನೀಡಿ ಪರಿಶೀಲಿಸಿ ಅವರು ಈ ಸೂಚನೆ ನೀಡಿದರು.
ಇಂಡಿ ತಾಲೂಕಿನ ಅರ್ಜನಾಳ ಮತ್ತು ಹಂಜಗಿ ಕೆರೆಗಳಿಗೆ ಭೇಟಿ ನೀಡಿದ ಅವರು, ಬಹುಹಳ್ಳಿ ಕುಡಿಯುವ ನೀರು ಸರಬರಾಜು ಯೋಜನೆಗಳ ಪ್ರಮುಖ ಜಲಮೂಲಗಳಾದ ಕೆರೆ ಹಾಗೂ ಜಲಾಶಯ ಒತ್ತುವರಿ ಹಾಗೂ ಸಂಗ್ರಹವಾಗಿರುವ ನೀರಿನ ಪ್ರಮಾಣವನ್ನು ಪರಿಶೀಲಿಸಿದರು.
ಮುಂಬರುವ ದಿನಗಳಲ್ಲಿ ನೀರಿನ ಕೊರತೆ ಉಂಟಾಗದಂತೆ ಭೀಮಾ ನದಿ ಹಾಗೂ ಇಂಡಿ ಶಾಖಾ ಕಾಲುವೆ ಮೂಲಕ ಸಮರ್ಪಕ ಪ್ರಮಾಣದಲ್ಲಿ ನೀರನ್ನು ಸಂಗ್ರಹಿಸಿಕೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ನಂತರ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ನೀರು ಸಂಸ್ಕರಣಾ ಘಟಕಕ್ಕೆ ಭೇಟಿ ನೀಡಿದ ಸಿಇಒ ಅವರು, ಪಂಪ್ ಹೌಸ್, ಕ್ಲಾರಿನೇಶನ್ ಘಟಕ ಸೇರಿ ವಿವಿಧ ತಾಂತ್ರಿಕ ಘಟಕಗಳ ಕಾರ್ಯವೈಖರಿಯನ್ನು ಪರಿಶೀಲಿಸಿದರು. ಎಲ್ಲಾ ಘಟಕಗಳು ಸುಸೂತ್ರವಾಗಿ ಕಾರ್ಯನಿರ್ವಹಿಸುವಂತೆ ನಿರ್ವಹಣೆ ಮಾಡಬೇಕು ಎಂದರು.
ಇಂಡಿ ತಾಲೂಕಿನ ಹೊರ್ತಿಯಲ್ಲಿ ಬಹುಹಳ್ಳಿ ಕುಡಿಯುವ ನೀರಿನ ಯೋಜನೆಯನ್ನು ಜಿಪಂ ಸಿಇಒ ರಿಷಿ ಆನಂದ ಪರಿಶೀಲಿಸಿದರು. ಅಭಿಯಂತರ ಸಂಜಯ ಕೋಟೆನ್ನವರ, ರಾಮಚಂದ್ರ ಬಂಡಿ, ಶಾಖಾಧಿಕಾರಿ ಚಂದ್ರಶೇಖರ ಚವಾಣ್ ಇದ್ದಾರೆ.
ಯಾವುದೇ ತಾಂತ್ರಿಕ ದೋಷ ಕಂಡುಬಂದಲ್ಲಿ ತಕ್ಷಣ ಸರಿಪಡಿಸಿ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಇಂಡಿ ತಾಲೂಕಿನ ಹೊರ್ತಿ ಸೇರಿ 31 ಗ್ರಾಮಗಳು ಹಾಗೂ ಚಡಚಣ ತಾಲೂಕಿನ ಇಂಚಗೇರಿ ಸೇರಿ 41 ಗ್ರಾಮಗಳಿಗೆ ಶುದ್ಧ ಕುಡಿಯುವ ನೀರನ್ನು ನಿರಂತರವಾಗಿ ಪೂರೈಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ ಅವರು, ಯಾವುದೇ ಗ್ರಾಮದಲ್ಲಿ ಸಮಸ್ಯೆ ಉಂಟಾಗದಂತೆ ಈಗಿನಿಂದಲೇ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ತಿಳಿಸಿದರು.
ಗ್ರಾಮಗಳಲ್ಲಿ ನೀರಿನ ಕೊರತೆ ಉಂಟಾಗುವ ಸಾಧ್ಯತೆಯಿರುವ ಪ್ರದೇಶಗಳನ್ನು ಮುಂಚಿತವಾಗಿ ಗುರುತಿಸಿ ಪರ್ಯಾಯ ವ್ಯವಸ್ಥೆಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕು. ಪೈಪ್‌ಲೈನ್, ಮೋಟಾರ್ ದುರಸ್ತಿ, ವಿದ್ಯುತ್ ವ್ಯತ್ಯಯ ಸೇರಿ ತಾಂತ್ರಿಕ ಸಮಸ್ಯೆಗಳನ್ನು ತಕ್ಷಣ ಬಗೆಹರಿಸಬೇಕು. ಸಾರ್ವಜನಿಕರಿಂದ ಕುಡಿಯುವ ನೀರಿನ ಸಮಸ್ಯೆ ಕುರಿತು ದೂರುಗಳು ಬಂದಲ್ಲಿ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ತ್ವರಿತ ಪರಿಹಾರ ಕ್ರಮ ಕೈಗೊಳ್ಳಬೇಕು. ಈ ವಿಷಯದಲ್ಲಿ ಯಾವುದೇ ನಿರ್ಲಕ್ಷ್ಯ ತೋರಬಾರದು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರ ಸಂಜಯ ಕೋಟೆನ್ನವರ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ರಾಮಚಂದ್ರ ಬಂಡಿ, ಶಾಖಾಧಿಕಾರಿ ಚಂದ್ರಶೇಖರ ಚವಾಣ್, ಗುಲ್ನಾಜ ಜಮಾದಾರ, ಶಶಿಧರ ಮೇಡೇದಾರ ಇತರರಿದ್ದರು.