ಶಾಲೆಗಳ ಪ್ರಥಮ ಮಾನ್ಯತೆ ಹಾಗೂ ಮಾನ್ಯತೆ ನವೀಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯಿತಿಯಿಂದ ರಚಿಸಲಾಗಿರುವ ಐವರ ತಂಡ 2-3 ಬಾರಿ ಶಾಲೆಗಳಿಗೆ ಹಾಗೂ ಶಿಕ್ಷಣ ಇಲಾಖೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಆನ್‌ಲೈನ್‌ನಲ್ಲಿ ಕೂಡ ಪರಿಶೀಲಿಸಿದ್ದು ದಾಖಲೆಗಳು ಅಸಮರ್ಪಕವಾಗಿರುವುದು ಕಂಡು ಬಂದಿದೆ. 2023-24 ಹಾಗೂ 2025-26ನೇ ಸಾಲಿನಲ್ಲಿ ಪ್ರಥಮ ಮಾನ್ಯತೆ ನೀಡಿರುವ ಹಾಗೂ ಮಾನ್ಯತೆ ನವೀಕರಿಸಿರುವ ದಾಖಲೆ ಪರಿಶೀಲನೆ ನಡೆಸಲಾಗಿದೆ. ಒಟ್ಟು 411 ಅನುದಾನ ರಹಿತ ಶಾಲೆಗಳ ಪ್ರಾರಂಭಕ್ಕೆ ಪ್ರಥಮ ಮಾನ್ಯತೆ ನೀಡಲು ಅರ್ಜಿಗಳು ಸಲ್ಲಿಕೆಯಾಗಿದ್ದು, ಅಂದಾಜು 274 ಅರ್ಜಿಗಳು ಪುರಸ್ಕೃತವಾಗಿರುವುದು ಕಂಡು ಬಂದಿದೆ. ಸುಮಾರು 133 ಅರ್ಜಿಗಳು ತಿರಸ್ಕೃತಗೊಂಡಿದ್ದು, 4 ಅರ್ಜಿಗಳು ಬಾಕಿ ಇವೆ. ಅನುದಾನಿತ ಶಾಲೆಗಳಿಂದ 284 ಅರ್ಜಿ ಸಲ್ಲಿಕೆಯಾಗಿದ್ದು, ಅದರಲ್ಲಿ 215 ಪುರಸ್ಕೃತಗೊಂಡರೆ 28 ಅರ್ಜಿ ತಿರಸ್ಕೃತಗೊಂಡಿವೆ.