ವಿಜಯಪುರ: ಬಿಹಾರನಲ್ಲಿ ಎನ್‌ಡಿಎ ಮೈತ್ರಿಕೂಟ ಭರ್ಜರಿ ಜಯಭೇರಿ ಸಾಧಿಸಿದ ಹಿನ್ನೆಲೆ ಬಿಜೆಪಿ ಜಿಲ್ಲಾಘಟಕದಿಂದ ಸಂಸದ ರಮೇಶ ಜಿಗಜಿಣಗಿ ನೇತೃತ್ವದಲ್ಲಿ ಶುಕ್ರವಾರ ಭರ್ಜರಿ ವಿಜಯೋತ್ಸವ ಆಚರಿಸಲಾಯಿತು.
ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಜಮಾಯಿಸಿದ ನೂರಾರು ಕಾರ್ಯಕರ್ತರು ಬಿಜೆಪಿ ಬಾವುಟ ಹಿಡಿದು ಜಯಘೋಷ ಮೊಳಗಿಸಿದರು. ಪಟಾಕಿ ಸಿಡಿಸಿ, ಪರಸ್ಪರ ಸಿಹಿ ತಿನ್ನಿಸಿ ಸಂಭ್ರಮಿಸಿದರು. ಪ್ರಧಾನಿ ನರೇಂದ್ರ ಮೋದಿ ಸಾಧನೆ ಕೊಂಡಾಡಿದರು.
ಸಂಸದ ರಮೇಶ ಜಿಗಜಿಣಗಿ ಮಾತನಾಡಿ, ಬಿಜೆಪಿಯ ಜನಪರ ನಿಲುವಿಗೆ ಬಿಹಾರ ಜನತೆ ಗೆಲುವಿನ ಉಡುಗೊರೆ ನೀಡಿದ್ದಾರೆ. ಬಿಹಾರ ಸರ್ವತೋಮುಖ ವಿಕಾಸವನ್ನು ಕೇಂದ್ರವಾಗಿರಿಸಿಕೊಂಡು ಚುನಾವಣೆ ಎದುರಿಸಿದ್ದ ಬಿಜೆಪಿಗೆ ಬಿಹಾರ ಜನತೆ ಮತ್ತೊಮ್ಮೆ ಆಶೀರ್ವದಿಸಿದ್ದಾರೆ. ವಿನಾಕಾರಣ ಕೇಂದ್ರ ಸರ್ಕಾರಕ್ಕೆ ಮಸಿ ಬಳಿಯುವ ಪ್ರಯತ್ನ ಮಾಡಿರುವ ಕಾಂಗ್ರೆಸ್ ಮೊದಲಾದ ಪಕ್ಷಗಳಿಗೆ ಜನತೆ ತಕ್ಕ ಪಾಠ ಕಲಿಸಿದ್ದಾರೆ ಎಂದರು.
ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮಾತನಾಡಿ, ಜನತೆ ಬಿಜೆಪಿಯೊಂದಿಗೆ ಇದ್ದಾರೆ ಎಂಬುದು ಇನ್ನೊಮ್ಮೆ ಸಾಬೀತಾಗಿದೆ. ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ಈ ಬಿಹಾರ ಚುನಾವಣೆಯೇ ದಿಕ್ಸೂಚಿ, ಇಲ್ಲಿಯೂ ಬಿಜೆಪಿ ಅತ್ಯಂತ ದಾಖಲೆಯೊಂದಿಗೆ ವಿಜಯ ಸಾಧಿಸಲಿದೆ. ಪ್ರಧಾನಿ ನರೇಂದ್ರ ಮೋದಿ, ಅಭಿವೃದ್ಧಿ ಉಸಿರಾಗಿಸಿಕೊಂಡಿರುವ ನಿತೀಶ್‌ಕುಮಾರ ಅವರ ನಾಯಕತ್ವಕ್ಕೆ ಬಿಹಾರ ಜನತೆ ಮನ್ನಣೆ ನೀಡಿದ್ದಾರೆ ಎಂದರು.
ಮುಖಂಡರಾದ ಚಂದ್ರಶೇಖರ ಕವಟಗಿ, ಭೀಮಾಶಂಕರ ಹದನೂರ, ಮಳುಗೌಡ ಪಾಟೀಲ, ಸಾಬು ಮಾಶ್ಯಾಳ, ಈರಣ್ಣ ರಾವೂರ, ಬಸವರಾಜ್ ಬೈಚಬಾಳ, ಕೃಷ್ಣ ಗುನ್ನಾಳಕರ, ಮಹೇಂದ್ರ ನಾಯಕ, ಸಂಜಯ ಪಾಟೀಲ್ ಕನಮಡಿ, ಚಿದಾನಂದ ಚಲವಾದಿ, ಸಂದೀಪ್ ಪಾಟೀಲ, ಶಿವರುದ್ರ ಬಾಗಲಕೋಟ, ಪಾಪುಸಿಂಗ್ ರಜಪೂತ, ಮಲ್ಲು ಕಲಾದಗಿ, ವಿಜಯ ಜೋಶಿ, ಚಿನ್ನು ಚಿನಗುಂಡಿ, ಕಾಂತು ಶಿಂಧೆ, ವಿನಾಯಕ ದಹಿಂಡೆ, ರಾಘವೇಂದ್ರ, ಅಶೋಕ ರಾಠೋಡ, ಶ್ರೀಧರ ಬಿಜ್ಜರಗಿ, ಗಿರೀಶ ಪಾಟೀಲ, ಆನಂದ ಮುಚ್ಚಂಡಿ, ಜಗದೀಶ ಮುಚ್ಚಂಡಿ ಇತರರಿದ್ದರು.