

ಪ್ರಮುಖ ಮುಖ್ಯಾಂಶಗಳು
ಬಬಲೇಶ್ವರದ ಶಾಂತೇಶ್ವರ ಮೈದಾನದಲ್ಲಿ ಡಿ. 29 ರಂದು ಸಂಜೆ 4ಕ್ಕೆ ‘ಬಸವಾದಿ ಶರಣರ ಹಿಂದು ಸಮಾವೇಶ’ ಹಮ್ಮಿಕೊಳ್ಳಲಾಗಿದೆ ಎಂದು ಶಿರೋಳದ ರಾಮಾರೂಢ ಮಠದ ಪೂಜ್ಯ ಶಂಕರಾರೂಢ ಸ್ವಾಮೀಜಿಗಳು ತಿಳಿಸಿದರು.
ಸನಾತನ ಹಿಂದು ಧರ್ಮದ ಉಳಿವಿಗಾಗಿ, ಧರ್ಮ ವಿಭಜನೆ ಹುನ್ನಾರದ ವಿರುದ್ಧ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಸಮಾವೇಶ ಹಮ್ಮಿಕೊಳ್ಳಲಾಗುತ್ತಿದ್ದು, ನಾಡಿನ ಅನೇಕ ಸಂತರು, ಶರಣರು ಹಾಗೂ ಮಠಾಧೀಶರು ಪಾಲ್ಗೊಳ್ಳಲಿದ್ದಾರೆ. ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಲಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ವಿಜಯಪುರದ ದರಬಾರ್ ಮೈದಾನದಲ್ಲಿ ಮೋಟರ್ ಸೈಕಲ್‌ಗಳ ಬೃಹತ್ ರ‌್ಯಾಲಿ ನಡೆಯಲಿದೆ. ಬಬಲೇಶ್ವರದವರೆಗೂ ಸಾಗಿ ರ‌್ಯಾಲಿ ಮುಕ್ತಾಯಗೊಳ್ಳಲಿದ್ದು, ರಾಜ್ಯದ ನಾನಾ ಭಾಗಗಳಿಂದ ಸಹಸ್ರ ಸಂಖ್ಯೆಯಲ್ಲಿ ಜನ ಆಗಮಿಸಲಿದ್ದಾರೆ ಎಂದು ಪೂಜ್ಯರು ತಿಳಿಸಿದರು.ಇತ್ತೀಚೆಗೆ ಹಿಂದು ಧರ್ಮ ವಿಭಜನೆ ಹುನ್ನಾರ ಕಂಡು ಬರುತ್ತಿದೆ. ಅನೇಕ ವಿಚಾರಗಳನ್ನು ಇಟ್ಟುಕೊಂಡು ಭಿನ್ನಭಾವ ಸೃಷ್ಠಿಸಲಾಗುತ್ತಿದೆ. ಹೀಗಾಗಿ ಹಿಂದುಗಳಲ್ಲಿ ಜಾಗೃತಿ ಮೂಡಿಸುವುದು ಇಂದಿನ ಅಗತ್ಯವಾಗಿದೆ. ವಿಜಯಪುರ- ಬಾಗಲಕೋಟೆ ಜಿಲ್ಲೆ ಶರಣರ ನಾಡಾದ್ದರಿಂದ ಬಬಲೇಶ್ವರನ್ನೇ ಆಯ್ಕೆ ಮಾಡಿಕೊಳ್ಳಲಾಗಿದೆ. ಕಾರ್ಯಕ್ರಮಕ್ಕೆ ಸಂಬಂಧಿಸಿದ ಹೆಚ್ಚಿನ ಸಂಗತಿ ಖುದ್ದಾಗಿಯೇ ಸಮಾವೇಶದಲ್ಲಿ ಪಾಲ್ಗೊಂಡು ಅರಿಯಬೇಕೆಂದ ಸ್ವಾಮೀಜಿಗಳು, ಕೆಲವು ವಿಚಾರಗಳನ್ನು ಗೌಪ್ಯವಾಗಿರಿಸಿದರು. ಅಲ್ಲದೇ, ಕೆಲವು ಪ್ರಶ್ನೆಗಳಿಗೆ ಪ್ರತಿಕ್ರಿಯಿಸಲು ನಕಾರ ವ್ಯಕ್ತಪಡಿಸಿದರು.
ಮಣ್ಣಿಕೇರಿಯ ವಿಜಯಸಿದ್ಧೇಶ್ವರ ಸ್ವಾಮೀಜಿ, ಹುಬ್ಬಳ್ಳಿಯ ಶಿವಶಂಕರ ಶಿವಾಚಾರ್ಯರು, ಬುದ್ನಿಯ ಸಿದ್ಧಾನಂದ ಸ್ವಾಮೀಜಿ ಇದ್ದರು.