ಬಸವಾದಿಶರಣರ ಹಿಂದು ಸಮಾವೇಶಕ್ಕೆ ಬಬಲೇಶ್ವರ ಸಜ್ಜು, ಕುತೂಹಲ ಹೆಚ್ಚಿಸಿದ ‘ಶ್ರೀಗಳ ಪುರ ಪ್ರವೇಶ’

ಬಬಲೇಶ್ವರದ ಶಾರದಾ ಶಾಲಾ ಮೈದಾನದಲ್ಲಿ ‘ಬಸವಾದಿಶರಣರ ಹಿಂದು ಸಮಾವೇಶ’ದ ಸಿದ್ಧತೆ ಕುರಿತು ಸಮಿತಿ ಸದಸ್ಯರು ಪರಿಶೀಲಿಸಿದರು. ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ವಿಜುಗೌಡ ಪಾಟೀಲ, ರವಿಕಾಂತ ಬಗಲಿ, ಉಮೇಶ ಕೋಳಕೂರ ಮತ್ತಿತರರಿದ್ದಾರೆ.
ಬಬಲೇಶ್ವರದ ಶಾರದಾ ಶಾಲಾ ಮೈದಾನದಲ್ಲಿ ‘ಬಸವಾದಿಶರಣರ ಹಿಂದು ಸಮಾವೇಶ’ದ ಸಿದ್ಧತೆ ಕುರಿತು ಸಮಿತಿ ಸದಸ್ಯರು ಪರಿಶೀಲಿಸಿದರು. ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ವಿಜುಗೌಡ ಪಾಟೀಲ, ರವಿಕಾಂತ ಬಗಲಿ, ಉಮೇಶ ಕೋಳಕೂರ ಮತ್ತಿತರರಿದ್ದಾರೆ.
Published on

ಪ್ರಮುಖ ಮುಖ್ಯಾಂಶಗಳು

  • ಬಸವಾದಿಶರಣರ ಹಿಂದು ಸಮಾವೇಶ
  • ಬಬಲೇಶ್ವರದ ಶಾರದಾ ಮೈದಾನದಲ್ಲಿ ಸಿದ್ಧತೆ
  • 60*100 ಅಳತೆಯ ಬೃಹತ್ ವೇದಿಕೆ ನಿರ್ಮಾಣ
  • 10 ಸಾವಿರ ಆಸನಗಳ ವ್ಯವಸ್ಥೆ
ವಿಜಯಪುರ: ‘ಬಸವಾದಿಶರಣರ ಹಿಂದು ಸಮಾವೇಶ’ದ ಹೆಸರಲ್ಲಿ ಬಬಲೇಶ್ವರದಲ್ಲಿ ಹಮ್ಮಿಕೊಂಡಿರುವ ಬೃಹತ್ ಸಮಾವೇಶಕ್ಕೆ ಕ್ಷಣಗಣನೆ ಆರಂಭಗೊಂಡ ಬೆನ್ನಲ್ಲೇ ‘ಶ್ರೀಗಳ ಪುರಪ್ರವೇಶ’ ತೀವ್ರ ಕುತೂಹಲ ಸೃಷ್ಠಿಸಿದೆ.

ಸಮಾವೇಶಕ್ಕೆ ವಿಜಯಪುರದಿಂದ 2 ಸಾವಿರಕ್ಕೂ ಹೆಚ್ಚು ಬೈಕ್‌ಗಳು ರ‌್ಯಾಲಿ ಮೂಲಕ ಆಗಮಿಸಲಿವೆ. ಬಬಲೇಶ್ವರದ ಶಾಂತವೀರ ವೃತ್ತದಿಂದ 4 ಸಾವಿರ ಮಹಿಳೆಯರು ಪೂರ್ಣಕುಂಭ ಹೊತ್ತು ಮೆರವಣಿಗೆಯಲ್ಲಿ ಭಾಗವಹಿಸಲಿದ್ದು, ಅಣ್ಣ ಬಸವೇಶ್ವರ ವೃತ್ತ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೇರಿದಂತೆ ಅನೇಕ ಮಾರ್ಗದಲ್ಲಿ ಈ ಕುಂಭ ಮೆರವಣಿಗೆ ಸಾಗಲಿದೆ. ಹಿಂದೂ ಧರ್ಮ ಸಂಘಟನೆಯ ಏಕೈಕ ಉದ್ದೇಶದೊಂದಿಗೆ ಈ ಸಮಾವೇಶ ಆಯೋಜಿಸಲಾಗುತ್ತಿದೆ, ಅನೇಕ ಪೂರ್ವಭಾವಿ ಸಭೆಗಳನ್ನು ಬೆಳಗಾವಿ, ವಿಜಯಪುರ, ಬಬಲೇಶ್ವರದಲ್ಲಿ ನಡೆಸಲಾಗಿದೆ, ಸಾವಿರಾರು ಜನರು ಈ ಸಮಾವೇಶದಲ್ಲಿ ಭಾಗವಹಿಸುತ್ತಾರೆ.

— ರವಿಕಾಂತ ಬಗಲಿ, ಸಮಾವೇಶದ ಸಂಚಾಲಕ

ಮೂಲಗಳ ಪ್ರಕಾರ ಕನ್ಹೇರಿಯ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿಗಳು ಪಾಲ್ಗೊಳ್ಳಲಿದ್ದು, ಇವರ ಜೊತೆಗೆ ಚಕ್ರವರ್ತಿ ಸೂಲಿಬೆಲೆ, ಕೆ.ಎಸ್. ಈಶ್ವರಪ್ಪ ಸೇರಿದಂತೆ ಅನೇಕ ಹಿರಿಯ ಮಠಾಧೀಶರು ವೇದಿಕೆ ಹಂಚಿಕೊಳ್ಳಲಿದ್ದಾರೆ. ಬಸವಾದಿಶರಣರ ಹೆಸರಲ್ಲಿ ನಡೆಯುತ್ತಿರುವ ಪ್ರಪ್ರಥಮ ಹಿಂದು ಸಮಾವೇಶ ಇದಾಗಿದ್ದರಿಂದ ಸೈದ್ಧಾಂತಿಕ ಚರ್ಚೆಗೆ, ಸಿದ್ಧಾಂತಗಳ ಸ್ಪಷ್ಟತೆಗೆ, ಗೊಂದಲ-ವಿವಾದಗಳಿಗೆ ಪ್ರತ್ಯುತ್ತರವಾಗಿ ಈ ಸಮಾವೇಶ ಐತಿಹಾಸಿಕ ಮೈಲಿಗಲ್ಲು ಸ್ಥಾಪಿಸಲಿದೆ.

ಶಾರದಾ ಶಾಲಾ ಮೈದಾನದಲ್ಲಿ ಸಿದ್ಧತೆ ಪೂರ್ಣ

ಬಬಲೇಶ್ವರದ ಶಾರದಾ ಶಾಲಾ ಮೈದಾನದಲ್ಲಿ ‘ಬಸವಾದಿಶರಣರ ಹಿಂದು ಸಮಾವೇಶ’ಕ್ಕೆ 60*100 ಅಳತೆಯ ಬೃಹತ್ ವೇದಿಕೆ ನಿರ್ಮಾಣಗೊಂಡಿದೆ. 10 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ. 

ಇದೀಗ 500 ಕ್ಕೂ ಹೆಚ್ಚು ಮಠಾಧೀಶರು ಭಾಗವಹಿಸುವ ನಿರೀಕ್ಷೆ ಇದ್ದು, ಹಿಂದು ಧರ್ಮ ಚಿಂತಕರಾದ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಸೇರಿದಂತೆ ಅನೇಕರು ಭಾಗವಹಿಸಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಕನ್ಹೇರಿಯ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿಗಳಿಗೂ ಸಮಾವೇಶದಲ್ಲಿ ಭಾಗವಹಿಸುವಂತೆ ಕೋರಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ಈ ಹಿಂದೆ ಲಿಂಗಾಯತ ಮಠಾಧೀಶರಿಂದ ಆಯೋಜನೆಗೊಂಡಿದ್ದ ‘ಬಸವಸಾಂಸ್ಕೃತಿಕ ಅಭಿಯಾನ’ದಲ್ಲಿ ಕೇಳಿ ಬಂದಿದ್ದ ಹೇಳಿಕೆಗಳು, ವಚನಗಳ ವಿಚಾರಗಳಿಗೆ ಈ ವೇದಿಕೆ ಉತ್ತರವಾಗಿ ನಿಲ್ಲುವ ಸಾಧ್ಯತೆ ದಟ್ಟವಾಗಿದೆ. ಈಗಾಗಲೇ ಕನ್ಹೇರಿ ಶ್ರೀಗಳ ಮೇಲೆ ನಿರ್ಬಂಧ ವಿಧಿಸಿರುವ ಬಗ್ಗೆ ಸಾಕಷ್ಟು ಚರ್ಚೆಯಾಗಿ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದ್ದು, ಇದೀಗ ಸಾಂವಿಧಾನಿಕ ಚೌಕಟ್ಟಿನಲ್ಲಿಯೇ ಉತ್ತರ ನೀಡುವ ಲಕ್ಷಣಗಳು ಗೋಚರಿಸುತ್ತಿವೆ. ಹೀಗಾಗಿ ಈ ಸಮಾವೇಶ ಅತ್ಯಂತ ಮಹತ್ವ ಪಡೆದುಕೊಂಡಿದೆ.

ಸಿದ್ಧತೆ ಪೂರ್ಣಗೊಳಿಸಿ ಸಂಭ್ರಮ

 ಕಳೆದೊಂದು ತಿಂಗಳಿನಿಂದ ಸಮಾವೇಶಕ್ಕೆ ಸಿದ್ಧತೆ ನಡೆಸಿದ್ದ ‘ಬಸವಾದಿಶರಣರ ಹಿಂದು ಸಮಾವೇಶ ಸಮತಿ’ಯ ಪದಾಧಿಕಾರಿಗಳು ಭಾನುವಾರ ಸಂಜೆ ಸಿದ್ಧತೆ ಪೂರ್ಣಗೊಳ್ಳುತ್ತಿದ್ದಂತೆ ಸಂಭ್ರಮಿಸಿದರು.

ವೇದಿಕೆ ಸಿದ್ಧತೆ, ಪಾರ್ಕಿಂಗ್ ಸೌಲಭ್ಯ, ಮೆರವಣಿಗೆ ಮಾರ್ಗ ಸ್ವಚ್ಛತೆ ಸೇರಿದಂತೆ ಹಲವು ಸಿದ್ಧತೆ ಪೂರ್ಣಗೊಳಿಸಿ ವೇದಿಕೆ ಮುಂಭಾಗದಲ್ಲಿ ಸಂಭ್ರಮಿಸಿದರು.ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಪ್ರಮುಖರಾದ ವಿಜುಗೌಡ ಪಾಟೀಲ, ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಉಮೇಶ ಕೋಳಕೂರ, ಚಂದ್ರಶೇಖರ ಕವಟಗಿ, ಭೀಮಾಶಂಕರ ಹದನೂರ, ರಾಜು ಬಿರಾದಾರ, ಪ್ರಭು ಹಿರೇಮಠ, ಮಲ್ಲು ಕನ್ನೂರ, ಈರಣ್ಣ ಶಿರಮಗೊಂಡ, ಕಲ್ಲಪ್ಪ ಕೊಡಬಾಗಿ, ವಿಜಯ್ ಜೋಶಿ, ಸಿದ್ದು ಮಲ್ಲಿಕಾರ್ಜುನಮಠ, ವಿಕಾಸ್ ಪದಕಿ, ಬಾಲರಾಜ ರೆಡ್ಡಿ, ಸಂಪತ್ ಕಾಳೆ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net