ಅನಧಿಕೃತ ಜಾನುವಾರು ಸಾಗಣೆ ತಡೆಗಟ್ಟಿ, ಎಎಸ್‌ಪಿ ರಾಮನಗೌಡ ಹಟ್ಟಿ ಸೂಚನೆ

ವಿಜಯಪುರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪ್ರಾಣಿ ಕಲ್ಯಾಣ ಮಂಡಳಿಯಿಂದ ಕರಪತ್ರಗಳನ್ನು ಬಿಡುಗಡೆಗೊಳಿಸಲಾಯಿತು. ಎಎಸ್‌ಪಿ ರಾಮಗೌಡ ಹಟ್ಟಿ, ಅಪರ ಜಿಲ್ಲಾಧಿಕಾರಿ ಡಾ. ಔದ್ರಾಮ್, ಡಾ. ಪ್ರಲ್ಹಾದ್ ಪಾಟೀಲ ಇತರರಿದ್ದಾರೆ.
ವಿಜಯಪುರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪ್ರಾಣಿ ಕಲ್ಯಾಣ ಮಂಡಳಿಯಿಂದ ಕರಪತ್ರಗಳನ್ನು ಬಿಡುಗಡೆಗೊಳಿಸಲಾಯಿತು. ಎಎಸ್‌ಪಿ ರಾಮಗೌಡ ಹಟ್ಟಿ, ಅಪರ ಜಿಲ್ಲಾಧಿಕಾರಿ ಡಾ. ಔದ್ರಾಮ್, ಡಾ. ಪ್ರಲ್ಹಾದ್ ಪಾಟೀಲ ಇತರರಿದ್ದಾರೆ.
Published on

ಪ್ರಮುಖ ಮುಖ್ಯಾಂಶಗಳು

  • ಬಕ್ರೀದ್ ಹಿನ್ನೆಲೆ ಅಧಿಕಾರಿಗಳ ಸಭೆ
  • ಕಾನೂನು ಪಾಲಿಸಲು ಸಾರ್ವಜನಿಕರಿಗೆ ಕರೆ
  • ಜಿಲ್ಲಾದ್ಯಂತ ತೀವ್ರ ನಿಗಾ ವಹಿಸಲು ಸೂಚನೆ
ವಿಜಯಪುರ: ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಚೆಕ್ ಪೋಸ್ಟ್ ಗಳಲ್ಲಿ ಅನಧಿಕೃತವಾಗಿ ಜಾನುವಾರು ಸಾಗಣೆಯಾಗದಂತೆ ಅಧಿಕಾರಿಗಳು ತೀವ್ರ ನಿಗಾ ವಹಿಸಬೇಕು ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಮಗೌಡ ಹಟ್ಟಿ ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಸಹಯೋಗದಲ್ಲಿ ಸೋಮವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ದಾಖಲೆಗಳಿಲ್ಲದೆ ಜಾನುವಾರು ಸಾಗಣೆ ಮಾಡುವುದು ಕಾನೂನಿನ ವಿರುದ್ಧವಾಗಿದೆ. ಹಾಗಾಗಿ ಅಕ್ರಮವಾಗಿ ಜಾನುವಾರು ಸಾಗಣೆಯಾಗದಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದರು.
ಜಾನುವಾರು ಖರೀದಿ ಹಾಗೂ ಮಾರಾಟ ಮಾಡುವ ವೇಳೆ ಜಾನುವಾರುವಿಗೆ ಕಿವಿಯೋಲೆ ಇರುವುದು ಕಡ್ಡಾಯ. ಸಾಗಾಣಿಕೆ ಸಂಬಂಧಪಟ್ಟಂತೆ ಸಂಬಂಧಪಟ್ಟ ಅಧಿಕಾರಿಗಳಿಂದ ಧೃಡೀಕರಣ ಪತ್ರ ಕಡ್ಡಾಯವಾಗಿದೆ. ಎಲ್ಲ ಜಾನುವಾರು ಮಾಲೀಕರಿಗೆ ಮನವೊಲಿಸಿ ಕಿವಿಯೋಲೆ ಹಾಕುವ ಪ್ರಕ್ರಿಯೆ ಜಾರಿಯಲ್ಲಿದೆ ಎಂದರು.
ಬಕ್ರೀದ್ ಹಬ್ಬದ ಮುನ್ನಾ ದಿನವಾದ ಮೇ 27 ಹಾಗೂ ಮೇ 28ರಂದು ಜಾನುವಾರು ಅಕ್ರಮ ವಧೆ ಹಾಗೂ ಸಾಗಣೆ ತಡೆಗಟ್ಟಲು ನಗರಪಾಲಿಕೆ, ಪಶುಪಾಲನಾ ಇಲಾಖೆ, ಪೊಲೀಸ್ ಇಲಾಖೆ ಅಧಿಕಾರಿಗಳ ತಂಡ ರಚಿಸಿ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಮಹಾನಗರ ಪಾಲಿಕೆ ಆಯುಕ್ತರು ತಂಡಗಳನ್ನು ರಚಿಸಿ ಅದರ ಮೇಲುಸ್ತುವಾರಿ ವಹಿಸಿಕೊಳ್ಳಬೇಕು ಎಂದು ಅವರು ಸಭೆಗೆ ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಡಾ. ಔದ್ರಾಮ್ ಮಾತನಾಡಿ, ಜಿಲ್ಲೆಯ ತಾಲೂಕು ವ್ಯಾಪ್ತಿಯಲ್ಲಿರುವ ತಹಸೀಲ್ದಾರ್ ನೇತೃತ್ವದಲ್ಲಿ ನಗರ, ಪುರಸಭೆ, ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಸಂಬಂಧಪಟ್ಟ ಆಯುಕ್ತರು ಹಾಗೂ ಮುಖ್ಯ ಅಧಿಕಾರಿಗಳ ನೇತೃತ್ವದಲ್ಲಿ, ಪಶು ಸಂಗೋಪನಾ ಇಲಾಖೆ ಮತ್ತು ಪೊಲೀಸ್ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಒಳಗೊಂಡಂತೆ ತಂಡಗಳನ್ನು ರಚಿಸಿ ಕಾರ್ಯಾಚರಣೆ ನಡೆಸಬೇಕು. ತಿಡಗುಂದಿ ಟೋಲ್ ಗೇಟ್, ಧೂಳಖೇಡ, ಸೊಲ್ಲಾಪುರ ನಾಕಾ ಹಾಗೂ ಜಮಖಂಡಿ ನಾಕಾಗಳಲ್ಲಿ ಹೆಚ್ಚುವರಿ ತಂಡಗಳನ್ನು ರಚಿಸಬೇಕು ಎಂದು ಸೂಚಿಸಿದರು.
ಒಂದು ವೇಳೆ ವಶಪಡಿಸಿಕೊಂಡ ಗೋವುಗಳನ್ನು ತಕ್ಷಣ ಹತ್ತಿರದ ಗೋಶಾಲೆಗಳಿಗೆ ಹಸ್ತಾಂತರಿಲು ಕ್ರಮ ವಹಿಸಬೇಕು. ಪಶು ಸಂಗೋಪನಾ ಇಲಾಖೆಯಲ್ಲಿ ವಾಹನಗಳ ಕೊರತೆ ಇದ್ದು ಈ ಸಂದರ್ಭದಲ್ಲಿ ಪ್ರತಿ ತಂಡಕ್ಕೆ ಒಂದರಂತೆ ವಾಹನಗಳನ್ನು ಒದಗಿಸಲು ಸಾರಿಗೆ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಯಿತು.
ಅನಧಿಕೃತವಾಗಿ ಜಾನುವಾರು ಸಾಗಣೆ ಮಾಡುವ ವಾಹನಗಳ ನೋಂದಣಿ ರದ್ದುಪಡಿಸಬೇಕು. ಕರ್ನಾಟಕ ಜಾನುವಾರು ಹತ್ಯೆ ಪ್ರಬಂಧಕ ಮತ್ತು ಸಂರಕ್ಷಣಾ ಕಾಯ್ದೆಯನ್ವಯ ಯಾವುದೇ ರೀತಿಯ ಜಾನುವಾರು ಎಲ್ಲ ವಯಸ್ಸಿನ ಆಕಳು, ಆಕಳ ಕರು, ಹೋರಿ, ಎತ್ತು ಅಲ್ಲದೆ 13 ವರ್ಷದೊಳಗಿನ ಎಮ್ಮೆ ಕೋಣಗಳನ್ನು ಹತ್ಯೆ ಮಾಡುವಂತಿಲ್ಲ. ಉಚ್ಚ ನ್ಯಾಯ್ಯಾಲಯದ ಆದೇಶದನ್ವಯ ಒಂಟೆಗಳನ್ನು ಕೂಡ ಬಕ್ರೀದ್ ಸಂದರ್ಭದಲ್ಲಿ ಹತ್ಯೆ ಮಾಡುವಂತಿಲ್ಲ. ಬಕ್ರೀದ್ ಹಿನ್ನೆಲೆಯಲ್ಲಿ ಜಾನುವಾರು ಅಕ್ರಮ ಸಾಗಣೆ ಹಾಗೂ ವಧೆಗಳ ಬಗ್ಗೆ ಸಾರ್ವಜನಿಕರು ಜಿಲ್ಲಾಡಳಿತಕ್ಕೆ ಇಲ್ಲವೇ ಹತ್ತಿರ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸಬೇಕು ಎಂದರು.
ಪ್ರಾಣಿ ಕಲ್ಯಾಣ ಮಂಡಳಿಯು ಭಾರತದ ಪ್ರಾಣಿ ಕಲ್ಯಾಣ ಮತ್ತು ಸಂರಕ್ಷಣಾ ಕಾನೂನು, ಪ್ರಾಣಿಗಳ ಜನನ ನಿಯಂತ್ರಣ ನಿಯಮ -2023 ಹಾಗೂ ಭಾರತದಲ್ಲಿ ತಿಳಿದಿರಲೇಬೇಕಾದಂಥಹ ಪ್ರಾಣಿಗಳ ಕಾನೂನು ಕುರಿತು ಕರ ಪತ್ರಗಳನ್ನು ಬಿಡುಗಡೆಗೊಳಿಸಲಾಯಿತು.
ಪ್ರಭಾರಿ ಉಪ ನಿರ್ದೇಶಕ ಡಾ. ಪ್ರಲ್ಹಾದ್ ಪಾಟೀಲ, ಮುಖ್ಯ ಪಶು ವೈದ್ಯಾಧಿಕಾರಿ ಡಾ. ಸುಜಾತಾ, ಡಾ. ಶಿವಾನಂದ ಮೇಟಿ, ಡಾ. ಯು.ಜೆ. ನಾಲಾ, ಡಾ. ಬಿ.ಎಸ್. ಕನಮಡಿ, ಡಾ. ವೆಂಕಟೇಶ ವಾಲಿಕಾರ, ಡಾ. ಶರಣಗೌಡ ಬಿರಾದಾರ, ಡಾ. ಧರಮಪ್ಪ ರಾಠೋಡ, ಡಾ. ತಜಪಶೆಟ್ಟಿ, ಡಾ. ರಾಮು ರಾಠೋಡ, ಡಾ. ಪ್ರವೀಣ ಸುರಪುರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net