ಚಡಚಣ ಪಟ್ಟಣದಲ್ಲಿನ ಸರ್ವೇ ನಂ.132 (ಕ್ಷೇತ್ರ 31 ಗುಂಟೆ) ಸರ್ಕಾರಿ ಜಾಗವನ್ನು ತಹಸೀಲ್ದಾರ್ ಸಂಜಯ ಇಂಗಳೆ, ಪ.ಪಂ. ಮುಖ್ಯಾಧಿಕಾರಿ ಬಿ.ಕೆ. ತಾವಸೆ, ಪ.ಪಂ. ಸದಸ್ಯರು ಸ್ಥಳ ಪರಿಶೀಲನೆ ನಡೆಸಿದರು.
Published on:
Copied
Follow Us
ಪಟ್ಟಣದ ಸರ್ವೇ ನಂ.132 (ಕ್ಷೇತ್ರ 31 ಗುಂಟೆ) ಸರ್ಕಾರಿ ಜಾಗವನ್ನು ಕೆಲ ಖಾಸಗಿ ವ್ಯಕ್ತಿ ಅತಿಕ್ರಮಣಕ್ಕೆ ಮುಂದಾಗಿದ್ದು ಬೆಳಕಿಗೆ ಬಂದಿದ್ದು, ತಕ್ಷಣ ಅದನ್ನು ತೆರವುಗೊಳಿಸಿ ಜಾಗವನ್ನು ಪಪಂಗೆ ಹಸ್ತಾಂತರಿಸಬೇಕೆಂದು ಆಗ್ರಹಿಸಿ ಪಪಂ ಸದಸ್ಯರು ತಹಸೀಲ್ದಾರ್‌ಗೆ ಗುರುವಾರ ಮನವಿ ಸಲ್ಲಿಸಿದರು.
ಪ.ಪಂ. ಅಧ್ಯಕ್ಷ ಮಲ್ಲಿಕಾರ್ಜುನ ಧೊತ್ರೆ ಮಾತನಾಡಿ, ಇಂಡಿ ಮುಖ್ಯ ರಾಜ್ಯ ಹೆರಿ ಸಮೀಪದ ಕೋಟ್ಯಂತರ ರೂ. ಮೌಲ್ಯದ ಜಾಗದಲ್ಲಿ ಕೆಲವರು ಅನಧಿಕೃತವಾಗಿ ರಸ್ತೆ ನಿರ್ಮಿಸಿ ಅತಿಕ್ರಮಿಸಿದ್ದಾರೆ ಎಂದು ಆರೋಪಿಸಿದರು. ಈ ಜಾಗವನ್ನು ಪ.ಪಂ.ಗೆ ನೀಡಿದರೆ ಇಲ್ಲಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸುವ ಮೂಲಕ ವರ್ಷಕ್ಕೆ ಲಕ್ಷಾಂತರ ರೂ. ಆದಾಯ ಪಡೆಯಬಹುದಾಗಿದೆ ಎಂದರು.
ತಹಸೀಲ್ದಾರ್ ಸಂಜಯ ಇಂಗಳೆ ಮನವಿಗೆ ಸ್ಪಂದಿಸಿ ಪ.ಪಂ. ಮುಖ್ಯಾಧಿಕಾರಿ ಬಿ.ಕೆ. ತಾವಸೆ ಅವರೊಂದಿಗೆ ಸ್ಥಳ ಪರಿಶೀಲಿಸಿ, ಅಪ್ಪಾಸಾಹೇಬ ಸಿಂಧೆ ಅವರ ಜಮೀನಿನಿಂದ ಇಂಡಿಯನ್ ಆಯಿಲ್ ಟ್ರೋಲ್ ಬಂಕ್‌ವರೆಗೂ 31 ಗುಂಟೆ ಸರ್ಕಾರಿ ಜಾಗವಿರುವುದನ್ನು ದೃಢಪಡಿಸಲಾಯಿತು. ಅಲ್ಲದೆ, ಖಾಸಗಿ ವ್ಯಕ್ತಿಗಳಿಂದ ಅನಧಿಕೃತ ರಸ್ತೆ ನಿರ್ಮಾಣ ಸಹ ಪತ್ತೆಯಾಯಿತು.
ಸ್ಥಳದಲ್ಲಿ ಕ್ರಮ ಕೈಗೊಂಡ ತಹಸೀಲ್ದಾರರು, ಪ.ಪಂ. ಜೆಸಿಬಿ ಮೂಲಕ ಜಾಗ ಸುತ್ತ ತಗ್ಗು ತೋಡಿಸುವ ಕಾರ್ಯಕ್ಕೆ ಚಾಲನೆ ನೀಡಿದರು.
ಜಾಗವನ್ನು ಮತ್ತೇ ಸರ್ವೇ ಮಾಡಿಸಿ, ಸಿಮೆಂಟ್ ಕಂಬ ಮತ್ತು ತಂತಿ ಬೇಲಿ ಹಾಕಿಸಿ ಜಾಗ ರಕ್ಷಿಸಿಕೊಳ್ಳುತ್ತೇವೆ. ಯಾವ ರೀತಿಯ ಒತ್ತಡ ಬಂದರೂ ಜಾಗ ರಕ್ಷಿಸುವ ದೃಢ ಸಂಕಲ್ಪ ಹೊಂದಿದ್ದೇನೆ ಎಂದು ತಹಸೀಲ್ದಾರರರು ಸ್ಪಷ್ಟ ಸಂದೇಶ ನೀಡಿದರು.
ಪ.ಪಂ. ಸದಸ್ಯ ಪ್ರಕಾಶಗೌಡ ಪಾಟೀಲ, ರಾಜು ಕೋಳಿ, ಬಾಲಾಜಿ ಗಾಡಿವಡ್ಡರ, ಧರ್ಮಣ್ಣ ಬನಸೋಡೆ, ವಾಸೀಮ್ ಮುಲ್ಲಾ ಕೆ.ಆರ್.ಎಸ್. ಪಕ್ಷದ ಕಾರ್ಯಕರ್ತ ಅಣ್ಣಪ್ಪ ಪೂಜಾರಿ ಇತರರಿದ್ದರು.