ಜೀವ ಜಲಕ್ಕಾಗಿ ಮತ್ತೊಂದು ಯೋಜನೆ, ವಿಜಯಪುರ ನಗರ ನೀರು ಪೂರೈಕೆಗೆ ಭಗೀರಥ ಯತ್ನ

M-B-PATIL
M-B-PATIL
Published on

ಪ್ರಮುಖ ಮುಖ್ಯಾಂಶಗಳು

  • ಸಚಿವ ಎಂ.ಬಿ. ಪಾಟೀಲ ಹೇಳಿಕೆ
  • ಅಂದಾಜು ಪಟ್ಟಿ ಸಿದ್ಧಪಡಿಸಲು ಸೂಚನೆ
  • ನಗರಕ್ಕೆ ನೀರು ಪೂರೈಸಲು ಪ್ರಯತ್ನ
ವಿಜಯಪುರ: ಮಹಾನಗರ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಈಗಾಗಲೇ ಅನೇಕ ಕಂದಾಯ ಗ್ರಾಮಗಳನ್ನು ವಿಜಯಪುರ ನಗರ ವ್ಯಾಪ್ತಿಗೆ ಸೇರ್ಪಡೆಗೊಳಿಸಲಾಗಿದೆ. ಜನಸಂಖ್ಯೆ ಕೂಡ ಹೆಚ್ಚಾಗಿದ್ದು, ನೀರು ಪೂರೈಕೆಗೆ ಹೊಸ ಯೋಜನೆ ಕೈಗೆತ್ತಿಕೊಳ್ಳುತ್ತಿರುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ತಿಳಿಸಿದರು.
ಈಗಾಗಲೇ ಹಲವು ಯೋಜನೆಗಳ ಮೂಲಕ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲಾಗಿದೆ. ಆದರೆ, ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಮುಂದಾಲೋಚನೆಯನ್ನಿಟ್ಟುಕೊಂಡು ಹೊಸದೊಂದು ಯೋಜನೆ ರೂಪಿಸಲಾಗುತ್ತಿದ್ದು, ಈಗಾಗಲೇ ಈ ಕುರಿತು ಸಮಾಲೋಚಿಸಲಾಗಿದೆ. ಅಂದಾಜು ಪತ್ರಿಕೆ ಸಿದ್ಧಪಡಿಸಲು ಸೂಚಿಸಲಾಗಿದ್ದು, ಶೀಘ್ರದಲ್ಲೇ ಯೋಜನೆ ಕಾರ್ಯಗತಗೊಳ್ಳಲಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

2.3 ಟಿಎಂಸಿ ನೀರು ಹರಿಸಲು ಕ್ರಮ

ಶನಿವಾರದಿಂದಲೇ ಕಾಲುವೆಗಳಿಗೆ 2.3 ಟಿಎಂಸಿ ನೀರು ಹರಿಸಲಾಗುತ್ತಿದೆ. ಕೆರೆಗಳಿಗೆ ನೀರು ಹರಿಸುವ ಸಂದರ್ಭದಲ್ಲಿ ನಿಗಾವಹಿಸಿ ಕೊನೆಯ ಹಂತದವರೆಗೂ ನೀರು ತಲುವಂತೆ ನೋಡಿಕೊಳ್ಳಬೇಕು. ಕಾಲುವೆಯ ಕೊನೆಯ ಹಂತದವರೆಗೆ ನೀರು ತಲುಪುವಂತೆ ನಿರ್ವಹಣೆ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಕುಡಿಯುವ ಉದ್ಧೇಶಕ್ಕೆ ನೀರು ಹರಿಸಲಾಗುತ್ತಿದ್ದು, ಎಲ್ಲೂ ಪೋಲು ಆಗದಂತೆ ನೋಡಿಕೊಳ್ಳಬೇಕು. ಈ ವಿಷಯದಲ್ಲಿ ಪೊಲೀಸ್ ಇಲಾಖೆ, ಸಂಬಂಧಿಸಿದ ಇಲಾಖೆ ಸಮನ್ವಯತೆ ಸಾಧಿಸಲು ಸೂಚಿಸಲಾಗಿದೆ ಎಂದರು.

ಸದ್ಯಕ್ಕಿಲ್ಲ ನೀರಿನ ಸಮಸ್ಯೆ

ಜಿಲ್ಲೆಯಲ್ಲಿ ಶೇ. 53 ರಷ್ಟು ಹೆಚ್ಚುವರಿಯಾಗಿ ಮಳೆಯಾಗಿದೆ. ಜಲಾಶಯಗಳಲ್ಲಿಯೂ ನೀರಿನ ಪ್ರಮಾಣ ಹೆಚ್ಚಾಗಿದೆ. ಪ್ರಸಕ್ತ ಆಲಮಟ್ಟಿ ಜಲಾಶಯದಲ್ಲಿ 34 ಟಿಎಂಸಿ ನೀರಿನ ಸಂಗ್ರಹವಿದೆ. ನಾರಾಯಣಪುರ ಜಲಾಶಯದಲ್ಲಿ ಕೂಡ 21 ಟಿಎಂಸಿ ನೀರಿನ ಸಂಗ್ರಹವಿದೆ. ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ನೀರಿನ ಪೂರೈಕೆ ಸಮರ್ಪಕವಾಗಿದೆ. ಜಲಧಾರೆ ಯೋಜನೆ ಪೂರ್ಣಗೊಳಿಸಲು ಗಡುವು ನೀಡಲಾಗಿದೆ. ಮೊದಲ ಹಂತದ ಯೋಜನೆಗೆ ಆರು ತಿಂಗಳು ಹಾಗೂ ಮುಂದಿನ ಬೇಸಿಗೆಗೆ ಎರಡನೇ ಹಂತದ ಯೋಜನೆ ಪೂರ್ಣಗೊಳಿಸಲು ಸೂಚಿಸಲಾಗಿದೆ ಎಂದರು.

ಬಹುಹಳ್ಳಿ ಕುಡಿಯುವ ನೀರಿನ ಯೋಜನೆ

ಒಟ್ಟು 40 ಬಹು ಹಳ್ಳಿ ಕುಡಿಯುವ ನೀರಿನ ಯೋಜನೆಗಳಿದ್ದು, ಅದರಲ್ಲಿ ಭೀಮಾ ನದಿ ಅವಲಂಬಿತ ಯೋಜನೆಗಳು ಸ್ವಲ್ಪ ಸಂಕಷ್ಟದಲ್ಲಿವೆ. ಕಾರಣ ಮಹಾರಾಷ್ಟ್ರ ದಿಂದ ನೀರಿನ ಹರಿವಿನ ಕೊರತೆ ಉಂಟಾಗಿದೆ. ಈ ಬಗ್ಗೆ ಉನ್ನತ ಮಟ್ಟದಲ್ಲಿ ಚರ್ಚೆ ನಡೆಸಲಾಗುವುದು. ನದಿಗೆ ನೈಸರ್ಗಿಕ ನೀರಿನ ಹರಿವಿನ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಚಡಚಣ -13, ಇಂಡಿ-22, ವಿಜಯಪುರ- 3, ತಿಕೋಟಾ-5, ತಾಳಿಕೋಟಿ-2 ಹಾಗೂ ದೇವರಹಿಪ್ಪರಗಿ -1ಸೇರಿ ಸುಮಾರು 50 ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗುವ ಸಾಧ್ಯತೆ ಇದ್ದು ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ನಗರ ಪ್ರದೇಶದಲ್ಲಿ ನೀರು ಸರಬರಾಜು ಒಳಮಂಡಳಿ ಹಾಗೂ ಪಾಲಿಕೆಯವರು ಜಂಟಿಯಾಗಿ ನೀರಿನ ಸಮಸ್ಯೆ ನೀಗಿಸಲು ಸೂಚಿಸಲಾಗಿದೆ ಎಂದರು.
ಜಾನುವಾರುವಿಗೆ ಮೇವಿನ ಕೊರತೆ ಇಲ್ಲ, ಅಕಾಲಿಕ ಮಳೆಯಿಂದ ಉಂಟಾದ ಕೃಷಿ ಹಾಗೂ ತೋಟಗಾರಿಕೆ ಬೆಳೆ ಹಾನಿ ಕುರಿತು ಸಮೀಕ್ಷೆ ನಡೆಸಲಾಗುತ್ತಿದೆ. ಹೆಚ್ಚಾಗಿ ಶೆಡ್‌ಗಳು ಹಾನಿಯಾಗಿವೆ. ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುತ್ತಿದೆ ಎಂದರು.
ಅನುದಾನದ ಕೊರತೆ ಇಲ್ಲ. ಕಾಲವೆ ಕೊನೆ ಹಂತಕ್ಕೆ ನೀರು ಪೂರೈಕೆಯಾಗುತ್ತಿಲ್ಲ ಎಂಬ ಆರೋಪ ಇದೆ. ಈ ಕುರಿತು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಶಾಸಕರಾದ ಅಶೋಕ ಮನಗೂಳಿ, ವಿಠಲ ಕಟಕದೊಂಡ, ಜಿಲ್ಲಾಧಿಕಾರಿ ಡಾ.ಆನಂದ ಕೆ, ಸಿಇಒ ರಿಷಿ ಆನಂದ, ಎಸ್‌ಪಿ ಲಕ್ಷ್ಮಣ ನಿಂಬರಗಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net