ಹಿಂದೂ ಧರ್ಮ ರಕ್ಷಣೆಗೆ ಸದಾ ಸಿದ್ಧ

 ಬಸವನಬಾಗೇವಾಡಿ ಪಟ್ಟಣದ ವೀರಭದ್ರೇಶ್ವರ ನಗರದ ಉದ್ಯಾನವನದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಅಭಿನವ ಸಂಗನಬಸವ ಶಿವಾಚಾರ್ಯ ಮಾತನಾಡಿದರು. ಮುತ್ತಗಿಯ ನರಹರಿ ಆಚಾರ್ಯರು, ಶ್ರೀಕಾಂತ ಮಹಾರಾಜರು ಮತ್ತಿತರರಿದ್ದರು.
ಬಸವನಬಾಗೇವಾಡಿ ಪಟ್ಟಣದ ವೀರಭದ್ರೇಶ್ವರ ನಗರದ ಉದ್ಯಾನವನದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಅಭಿನವ ಸಂಗನಬಸವ ಶಿವಾಚಾರ್ಯ ಮಾತನಾಡಿದರು. ಮುತ್ತಗಿಯ ನರಹರಿ ಆಚಾರ್ಯರು, ಶ್ರೀಕಾಂತ ಮಹಾರಾಜರು ಮತ್ತಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಅಭಿನವ ಸಂಗನಬಸವ ಶಿವಾಚಾರ್ಯರ ಹೇಳಿಕೆ
  • ಬೃಹತ್ ಸಮ್ಮೇಳನ
ವಿಜಯವಾಣಿ ಸುದ್ದಿಜಾಲ ಬಸವನಬಾಗೇವಾಡಿ
ಭಾರತದಲ್ಲಿ ಹಿಂದೂಗಳ ಮತ್ತು ಧರ್ಮದ ರಕ್ಷಣೆಗಾಗಿ, ಗೋವುಗಳ ಸಂರಕ್ಷಣೆಗಾಗಿ ನಾನು ಮಠ ತ್ಯಾಗ ಮಾಡಲೂ ಸಿದ್ಧ ಎಂದು ಮನಗೂಳಿ ಹಿರೇಮಠದ ಅಭಿನವ ಸಂಗನಬಸವ ಶಿವಾಚಾರ್ಯರು ಹೇಳಿದರು.
ಪಟ್ಟಣದ ಶ್ರೀ ವೀರಭದ್ರೇಶ್ವರ ನಗರದ ಉದ್ಯಾನವನದಲ್ಲಿ ಹಿಂದೂ ಸಮ್ಮೇಳನ ಸಂಚಾಲನ ಸಮಿತಿಯಿಂದ ಭಾನುವಾರ ಸಂಜೆ ಆಯೋಜಿಸಿದ್ದ `ಬೃಹತ್ ಹಿಂದೂ ಸಮ್ಮೇಳನ'ದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಹಿಂದೂಗಳು ಒಂದಾದಾಗ ಮಾತ್ರ ಹಿಂದೂ ಧರ್ಮ ಉಳಿಯುತ್ತದೆ. ದೇಶ ಹಾಗೂ ಹಿಂದೂಗಳ ಧರ್ಮದ ರಕ್ಷಣೆ, ಗೋವುಗಳ ಸಂರಕ್ಷಣೆಗಾಗಿ ನನ್ನ ಜೀವ ಹಾಗೂ ಮಠವನ್ನು ತ್ಯಾಗ ಮಾಡುತ್ತೇನೆ. ಧನ, ಆಸ್ತಿ, ಬಂಗಾರ ಶಾಶ್ವತ ಅಲ್ಲ, ಸಮಾಜಕ್ಕೆ ಮಾಡಿದ ಕೆಲಸ ಶಾಶ್ವತ ಎಂದು ಹೇಳಿದರು.
ಕೆಲವು ರಾಜಕೀಯ ಪಕ್ಷಗಳ ಮುಖಂಡರು ತಮ್ಮ ರಾಜಕೀಯ ಅಸ್ತಿತ್ವವನ್ನು ಉಳಿಸಿಕೊಳ್ಳಲು ಬೆಂಗಳೂರಿನ ಒಂದೇ ಮತ ಕ್ಷೇತ್ರದಲ್ಲಿ 20 ರಿಂದ 25 ಸಾವಿರ ಬಾಂಗ್ಲಾದೇಶಿ ವಲಸಿಗರು ಮತದಾನದ ಹಕ್ಕು ನೀಡಿದ್ದಾರೆ. ಕೇವಲ ಕರ್ನಾಟಕ ರಾಜ್ಯ ಮಾತ್ರವಲ್ಲ ದೇಶದ ದೆಹಲಿ, ರಾಜಸ್ಥಾನ, ಪಂಜಾಬ್, ಹರಿಯಾಣ, ಉತ್ತರಪ್ರದೇಶ ಎಲ್ಲೆಡೆ ಇದ್ದಾರೆ.
ಅಂದರೆ ಇನ್ನೂ ಈ ದೇಶದಲ್ಲಿ ಎಷ್ಟು ಬಾಂಗ್ಲಾ ದೇಶದ ವಲಸಿಗರು ಮತದಾನ ಹಕ್ಕು ಪಡೆದಿದ್ದರೆ ಎಂಬುದನ್ನು ಒಂದು ಬಾರಿ ಆಲೋಚನೆ ಮಾಡಿ. ಅವರಿಗೆ ಈ ದೇಶದ ಅನ್ನ, ನೀರು, ಗಾಳಿ ಮತ್ತು ಆಸರೆ ಬೇಕು. ಆದರೆ ಭಾರತ್ ಮಾತಾ ಕಿ ಜೈ ಎಂಬ ಘೋಷಣೆ ಬೇಕಾಗಿಲ್ಲ ಎಂದರು.
18-20 ವರ್ಷ ಹಿಂದೆ ಹಿಂದೂಗಳು ಶೇ.20, ಮುಸ್ಲಿಂರು ಶೇ. 2ರಷ್ಟು ಇದ್ದರು. ಈಗ ಹಿಂದೂಗಳು ಶೇ. 2, ಮುಸ್ಲಿಂರು ಶೇ. 20 ಇದ್ದಾರೆ. ಹಾಗಾದರೆ ಶೇ. 18 ರಷ್ಟು ಹಿಂದೂಗಳು ಎಲ್ಲಿ ಹೋದರು ಎಂದು ಪ್ರಶ್ನಿಸಿ, ದೇಶದ ಪ್ರತಿಯೊಬ್ಬ ಪ್ರಜೆಯೂ ದೇಶ ಕಟ್ಟುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಗೋ ರಕ್ಷಣೆ ಮಾಡಬೇಕು. ರೈತರು ಗೋವುಗಳು ವಯೋವೃದ್ಧ ಆದ ಬಳಿಕವೂ ಅವುಗಳನ್ನು ಸಂರಕ್ಷಣೆ ಮಾಡಿ. ಅಲ್ಪ ಹಣದಾಸೆಗೆ ಮಾರಬೇಡಿ. ವೃದ್ಧ, ಅಶಕ್ತ ದನಗಳನ್ನು ವ್ಯಾಪಾರಿಗಳಿಗೆ ಕೊಡಬೇಡಿ ನಿಮ್ಮಗೆ ಸಾಕಲು ಸಾಧ್ಯವಾಗದಿದ್ದರೆ ಅವುಗಳನ್ನು ಗೋಶಾಲೆಗೆ ನೀಡಿ ಎಂದು ಮನವಿ ಮಾಡಿದರು.
ಹಿಂದೂ ಜಾಗರಣ ವೇದಿಕೆ ಕರ್ನಾಟಕ ಉತ್ತರ ಪ್ರಾಂತ ಸಹ ಸಂಯೋಜಕ ಶ್ರೀಕಾಂತ್ ಹೊಸಕೇರಾ ಮಾತನಾಡಿ, ಹಿಂದೂ ಧರ್ಮದ ನಾಶಕ್ಕೆ ಅನೇಕ ಶತ್ರುಗಳು ಭಾರತ ದೇಶದ ಮೇಲೆ ದಾಳಿ ನಡೆಸಿ ತಮ್ಮ ಅಟ್ಟಹಾಸ ಮೆರೆದಿದ್ದಾರೆ. ಇನ್ನೂ ಅಟ್ಟಹಾಸ ಮೆರೆಯಲು ನಿರಂತರವಾಗಿ ಹೊಂಚು ಹಾಕುತ್ತಿದ್ದಾರೆ. ಅದಕ್ಕೆ ನಾವು ಆಸ್ಪದ ನೀಡುತ್ತಿಲ್ಲ ಎಂದು ಹೇಳಿದರು.
ವಿರಕ್ತಮಠದ ಸಿದ್ಧಲಿಂಗ ಶ್ರಿಗಳು, ಮುತ್ತಗಿಯ ನರಹರಿ ಆಚಾರ್ಯರು, ನರಸಲಗಿಯ ರಾಮಕೃಷ್ಣ ಆಶ್ರಮದ ಶ್ರೀಕಾಂತ ಮಹಾರಾಜರು, ಹುಣಿಶ್ಯಾಳದ ಶಿವಪುತ್ರ ಶರಣರು, ಹಿಂದೂ ಸಮ್ಮೇಳನ ಸಂಚಾಲನ ಸಮಿತಿ ಅಧ್ಯಕ್ಷ ಚಂದ್ರಕಾತ ಪಟ್ಟಣಶೆಟ್ಟಿ ಮತ್ತಿತರರಿದ್ದರು. ಚಿಕ್ಕ ಮಕ್ಕಳಿಂದ ಶ್ರೀ ರಾಮಾಯಣ ಕಿರು ನಾಟಕ ದೃಶ್ಯ ಅದ್ಭುತವಾಗಿ ಪ್ರದರ್ಶನ ಮಾಡಿದರು. ಕಾರ್ಯಕ್ರಮಕ್ಕೂ ಮುನ್ನ ಶ್ರೀ ಬಸವೇಶ್ವರ ದೇವಸ್ಥಾನದಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಂಸ್ಕೃತಿಕ ಶೋಭಾಯಾತ್ರೆ ಜರುಗಿತ್ತು. ಸ್ವರೂಪರಾಣಿ ಬಿಂಜಲಬಾವಿ ಸ್ವಾಗತಿಸಿದರು. ಕೃಷ್ಣಾ ಬಡಿಗೇರ ನಿರೂಪಿಸಿದರು. ಶಶಿಕಾಂತ ಸ್ಥಾವರಮಠ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net