ಸಿದ್ಧೇಶ್ವರ ಜಾತ್ರೆಗೆ ಸಕಲ ಸಿದ್ಧತೆ ಪೂರ್ಣ

ವಿಜಯಪುರ ನಗರದ ಸಿದ್ಧೇಶ್ವರ ದೇವಸ್ಥಾನ ಆವರಣದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿದರು. ಬಸಯ್ಯ ಹಿರೇಮಠ, ಸಂ.ಗು. ಸಜ್ಜನ, ಗುರು ಗಚ್ಚಿನಮಠ ಮತ್ತಿತರರಿದ್ದಾರೆ.
ವಿಜಯಪುರ ನಗರದ ಸಿದ್ಧೇಶ್ವರ ದೇವಸ್ಥಾನ ಆವರಣದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿದರು. ಬಸಯ್ಯ ಹಿರೇಮಠ, ಸಂ.ಗು. ಸಜ್ಜನ, ಗುರು ಗಚ್ಚಿನಮಠ ಮತ್ತಿತರರಿದ್ದಾರೆ.
Published on

ಪ್ರಮುಖ ಮುಖ್ಯಾಂಶಗಳು

  • ಬಸಯ್ಯ ಹಿರೇಮಠ ಮಾಹಿತಿ
  • 13ರಂದು ಅಕ್ಷತಾರ್ಪಣೆ-ಭೋಗಿ ಕಾರ್ಯಕ್ರಮ
ವಿಜಯಪುರ: ಉತ್ತರ ಕರ್ನಾಟಕದ ಭಾಗದಲ್ಲಿಯೇ ಖ್ಯಾತಿ ಪಡೆದ ಶ್ರೀ ಸಿದ್ಧೇಶ್ವರ ಸಂಕ್ರಮಣ ಜಾತ್ರಾ ಮಹೋತ್ಸವ ಜ. 11 ರಿಂದ ಜ. 17 ರವರೆಗೆ ಅತ್ಯಂತ ವೈಭವದಿಂದ ನಡೆಯಲಿದ್ದು, ಜಾತ್ರಾ ಮಹೋತ್ಸವಕ್ಕೆ ಈಗಾಗಲೇ ಸಕಲ ಸಿದ್ಧತೆ ಪೂರ್ಣಗೊಂಡಿವೆ ಎಂದು ಸಿದ್ಧೇಶ್ವರ ಸಂಸ್ಥೆಯ ಚೇರ್ಮನ್ ಬಸಯ್ಯ ಹಿರೇಮಠ ಹೇಳಿದರು.
ನಗರದ ಸಿದ್ಧೇಶ್ವರ ದೇವಸ್ಥಾನ ಆವರಣದಲ್ಲಿರುವ ಶಿವಾನುಭವ ಮಂಟಪದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಜಾತ್ರಾ ಮಹೋತ್ಸವದಲ್ಲಿ ಹಮ್ಮಿಕೊಂಡ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು.
11ರಂದು ಶ್ರೀ ಸಿದ್ಧೇಶ್ವರ ದೇವಸ್ಥಾನದಿಂದ ನಂದಿ ಧ್ವಜ ಹಾಗೂ ಗೋಮಾತೆಯ ಮೆರವಣಿಗೆಯ ಮೂಲಕ ಜಾತ್ರಾ ಮಹೋತ್ಸವಕ್ಕೆ ಅದ್ದೂರಿಯಾಗಿ ಚಾಲನೆ ದೊರೆಯಲಿದೆ. ಮೆರವಣಿಗೆ ಸಿದ್ಧೇಶ್ವರ ದೇವಸ್ಥಾನದಿಂದ ಅಟಲ್‌ ಬಿಹಾರಿ ವಾಜಪೇಯಿ ರಸ್ತೆ ಮಾರ್ಗವಾಗಿ ಸಾಗಿ ಚತುರ್ಮುಖ ಗಣಪತಿ ದೇವಾಲಯಕ್ಕೆ ತಲುಪಲಿದೆ. ಆ ಮೂಲಕ ಜಾತ್ರಾ ಮಹೋತ್ಸವದ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಲಿವೆ ಎಂದರು.
12ರಂದು ನಂದಿ ಧ್ವಜಗಳ ಉತ್ಸವ ಹಾಗೂ 770 ಲಿಂಗಗಳಿಗೆ ಎಣ್ಣೆ ಮಜ್ಜನದೊಂದಿಗೆ ಅಭಿಷೇಕ ನಡೆಯಲಿದೆ. ರಾತ್ರಿ 8 ಕ್ಕೆ ದೇವಾಲಯದ ಆವರಣದಲ್ಲಿ ಭಜನೆ ನಡೆಯಲಿದೆ. 13 ರಂದು ಮಧ್ಯಾಹ್ನ 12.30ಕ್ಕೆ ಅಕ್ಷತಾರ್ಪಣೆ- ಭೋಗಿ ಕಾರ್ಯಕ್ರಮ ಜರುಗಲಿದ್ದು, ಶ್ರೀ ಸಿದ್ಧೇಶ್ವರ ದೇವಾಲಯದ ಮುಂಭಾಗದಲ್ಲಿ ಧಾರ್ಮಿಕ ಪೂಜಾ ಕೈಂಕರ್ಯಗಳೊಂದಿಗೆ ಚರಿತ್ರೆ ಓದುವ ಕಾರ್ಯಕ್ರಮ ಹಾಗೂ ನಂತರ ಯೋಗ ದಂಡಕ್ಕೆ ಅಕ್ಷತೆ ಕಾರ್ಯಕ್ರಮ, ಪ್ರಸಾದ ವಿತರಣೆ ನಡೆಯಲಿದೆ ಎಂದು ಮಾಹಿತಿ ನೀಡಿದರಲ್ಲದೆ, ಅಂದೇ ರಾತ್ರಿ 8 ಕ್ಕೆ ದೇವಾಲಯದ ಆವರಣದಲ್ಲಿ ಅರ್ಥಪೂರ್ಣ ಮನರಂಜನಾ ಕಾರ್ಯಕ್ರಮಗಳು ಜರುಗಲಿವೆ ಎಂದು ತಿಳಿಸಿದರು.
14ರಂದು ಹೋಮ-ಹವನ ಹಾಗೂ ಪಲ್ಲಕ್ಕಿಯೊಂದಿಗೆ ನಂದಿ ಧ್ವಜಗಳ ಉತ್ಸವ ಹಾಗೂ 15 ರಂದು ನಂದಿ ಧ್ವಜಗಳ ಭವ್ಯ ಮೆರವಣಿಗೆ ನಡೆಯಲಿದ್ದು, ರಾತ್ರಿ 8 ಗಂಟೆಗೆ ಸಿದ್ಧೇಶ್ವರ ದೇವಸ್ಥಾನದ ಬಳಿ ಸಾಂಕೇತಿಕವಾಗಿ ಚಿತ್ತಾಕರ್ಷಕ ಮದ್ದು ಸುಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 16ರಂದು ಬೆಳಗ್ಗೆ 11 ಕ್ಕೆ ಭಾರ ಎತ್ತುವ ಸ್ಪರ್ಧೆ, 17ರಂದು ಮಧ್ಯಾಹ್ನ 3 ಕ್ಕೆ ಎಸ್‌ಎಸ್ ಹೈಸ್ಕೂಲ್ ಮೈದಾನದಲ್ಲಿ ಕುಸ್ತಿ ಪಂದ್ಯಾವಳಿಗಳು ಜರುಗಲಿವೆ ಎಂದು ವಿವರಿಸಿದರು.
1898ರಲ್ಲಿ ಆರಂಭವಾದ ಸಿದ್ದೇಶ್ವರ ಸಂಸ್ಥೆ ಶತಮಾನೋತ್ಸವ ಕಂಡ ಸಂಸ್ಥೆಯಾಗಿದೆ. ಪ್ರಸ್ತುತ 108ನೇ ವರ್ಷದ ಜಾತ್ರಾ ಮಹೋತ್ಸವ ವೈಭವದಿಂದ ನಡೆಯಲಿದೆ. ಜಾತ್ರಾ ಮಹೋತ್ಸವ ಅರ್ಥಪೂರ್ಣವಾಗಿ ಆಯೋಜಿಸಲು ಹಲವು ದಿನಗಳಿಂದ ತಯಾರಿ ನಡೆದಿದ್ದು, ಈಗಾಗಲೇ ಅನೇಕ ಸಮಿತಿ, ಉಪ ಸಮಿತಿ ಸಹ ರಚಿಸಲಾಗಿದೆ ಎಂದರು.
17 ರಂದು ಅಂತಾರಾಷ್ಟ್ರಿಯ ಜಂಗಿ ನಿಕಾಲಿ ಕುಸ್ತಿ : ಈ ಬಾರಿ ಜಾತ್ರಾ ಮಹೋತ್ಸವ ಪ್ರಯುಕ್ತ ನಗರದ ಎಸ್‌ಎಸ್ ಹೈಸ್ಕೂಲ್ ಮೈದಾನದಲ್ಲಿ 17 ರಂದು ಮಧ್ಯಾಹ್ನ 3 ಗಂಟೆಗೆ ಅಂತಾರಾಷ್ಟ್ರಿಯ ಜಂಗಿ ನಿಕಾಲಿ ಕುಸ್ತಿ ಪಂದ್ಯಾವಳಿಗಳು ನಡೆಯಲಿದೆ. ರಷ್ಯಾದ ತಾಪಸಿವ್ ಟ್ಯಾಮರಲಾನ್, ಕುಬೇವ್ ಮುರ್ಟೋವಿಚ್, ಪಂಜಾಬ್‌ದ ರಸ್ಸಿ ಸಿಂಗ, ಅಯೋಧ್ಯಾದ ಹರೀಶಕುಮಾರ, ಬೆಳಗಾವಿಯ ಕಾಮೇಶ ಪಾಟೀಲ, ವಿಕ್ರಾಂತ ಮಹಾನ್ ಸೇರಿ ಹಲವು ಪ್ರಸಿದ್ಧ ಕುಸ್ತಿಪಟುಗಳು ಪಾಲೊಳ್ಳಲಿದ್ದಾರೆ. ಅಲ್ಲದೆ, ಸ್ಥಳೀಯ ಸೇರಿದಂತೆ ನೆರೆಯ ಜಿಲ್ಲೆಯ ಹಲವು ಕುಸ್ತಿ ಪಟುಗಳು ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದಾರೆ ಎಂದರು.
ಸಂಸ್ಥೆ ಅಧ್ಯಕ್ಷ ಬಸನಗೌಡ ಪಾಟೀಲ ಯತ್ನಾಳ, ಪ್ರಮುಖರಾದ ಸಿದ್ಧರಾಮಪ್ಪ ಉಪ್ಪಿನ, ಸಂಸ್ಥೆ ಉಪಾಧ್ಯಕ್ಷ ಸಂ.ಗು. ಸಜ್ಜನ, ನಿರ್ದೇಶಕರಾದ ಗುರು ಗಚ್ಚಿನಮಠ, ಸದಾನಂದ ದೇಸಾಯಿ, ಬಸವರಾಜ ಸೂಗುರ, ಮಲ್ಲಿಕಾರ್ಜುನ ಸಜ್ಜನ, ಶಿವಾನಂದ ನೀಲಾ, ಸಂಗನಗೌಡ ನಾಡಗೌಡ, ಪಾಲಿಕೆ ಸದಸ್ಯ ರಾಜಶೇಖರ ಮಗಿಮಠ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

ಮದ್ದು ಸುಡುವ ಕಾರ್ಯಕ್ರಮಕ್ಕೆ ಪರ್ಯಾಯ ಸ್ಥಳಕ್ಕೆ ಹುಡುಕಾಟ

ಶ್ರೀ ಸಿದ್ಧೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವದಲ್ಲಿ ಆಯೋಜನೆಯಾಗುವ ಮದ್ದು ಸುಡುವ ಕಾರ್ಯಕ್ರಮ ರಾಜ್ಯದಲ್ಲಿಯೇ ಪ್ರಸಿದ್ಧಿ ಪಡೆದಿದೆ. ಎರಡು ಲಕ್ಷಕ್ಕೂ ಅಧಿಕ ಜನರು ಭಾಗವಹಿಸುತ್ತಿದ್ದರು. ಆದರೆ ಡಾ. ಬಿ.ಆರ್. ಅಂಬೇಡ್ಕರ ಜಿಲ್ಲಾ ಕ್ರೀಡಾಂಗಣದಲ್ಲಿ ಮದ್ದು ಸುಡುವ ಕಾರ್ಯಕ್ರಮ ಆಯೋಜನೆ ಸಾಧ್ಯವಾಗುತ್ತಿಲ್ಲ, ಹೀಗಾಗಿ, ಬಿಎಲ್‌ಡಿಇ ಬಳಿ ಇರುವ 28 ಎಕರೆ ಜಮೀನು ಪ್ರದೇಶದಲ್ಲಿ ಪರ್ಯಾಯ ಕ್ರೀಡಾಂಗಣ ನಿರ್ಮಿಸುವ ಯೋಜನೆ ಇದ್ದು, ಅಲ್ಲಿ ಮುಂಬರುವ ದಿನಗಳಲ್ಲಿ ಈ ಮದ್ದು ಸುಡುವ ಕಾರ್ಯಕ್ರಮದ ವೈಭವ ಮರುಕಳಿಸುವ ಕಾರ್ಯ ಪುನರುಜ್ಜೀವನಗೊಳಿಸಲಾಗುವುದು ಎಂದರು.

ವೈದ್ಯಕೀಯ, ಕೃಷಿ ಮಹಾವಿದ್ಯಾಲಯ ಆರಂಭಕ್ಕೆ ಯತ್ನ

ವಿಜಯಪುರ : ಶ್ರೀ ಸಿದ್ಧೇಶ್ವರ ಸಂಸ್ಥೆ ಧಾರ್ಮಿಕ, ಸಾಮಾಜಿಕ ಕಾರ್ಯದ ಜತೆಗೆ ಶೈಕ್ಷಣಿಕ ಪ್ರಸಾರದಲ್ಲಿ ತೊಡಗಿಸಿಕೊಂಡಿದೆ. ಸಂಸ್ಥೆಯ ನೇತೃತ್ವದಲ್ಲಿ ವೈದ್ಯಕೀಯ ಮಹಾವಿದ್ಯಾಲಯ, ಕೃಷಿ ಮಹಾವಿದ್ಯಾಲಯ ಆರಂಭಿಸುವ ಪ್ರಯತ್ನ ನಡೆಯುತ್ತಿದೆ ಎಂದು ಶ್ರೀ ಸಿದ್ಧೇಶ್ವರ ಸಂಸ್ಥೆಯ ಅಧ್ಯಕ್ಷ, ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಧಾರ್ಮಿಕ, ಸಾಮಾಜಿಕ ಕಾರ್ಯಗಳ ಜತೆಗೆ ಶೈಕ್ಷಣಿಕ ಕೇತ್ರದಲ್ಲಿಯೂ ಸೇವೆ ಸಲ್ಲಿಸಲು ಸಿದ್ಧೇಶ್ವರ ಸಂಸ್ಥೆ ಅಣಿಯಾಗಿದ್ದು, ಈಗಾಗಲೇ ಗುಣಮಟ್ಟದ ಶಿಕ್ಷಣ ಒದಗಿಸುವ ಸಿಬಿಎಸ್‌ಐ ಸ್ಕೂಲ್‌, ಕಾನೂನು ಮಹಾವಿದ್ಯಾಲಯ ಆರಂಭಗೊಂಡಿದೆ. ಮುಂದಿನ ದಿನಗಳಲ್ಲಿ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಕೃಷಿ ಮಹಾವಿದ್ಯಾಲಯ ಆರಂಭಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆ ಎಂದು ತಿಳಿಸಿದರು. ಸಿದ್ಧೇಶ್ವರ ಸಂಸ್ಥೆಯ ಆಸ್ತಿ ಈ ಹಿಂದೆ ಒಂದೂವರೆ ಕೋಟಿ ರೂ. ಮೌಲ್ಯ ಹೊಂದಿತ್ತು. ಸದ್ಯ ಸಂಸ್ಥೆಯ ಆಸ್ತಿ ಮೌಲ್ಯ 450 ಕೋಟಿ ರೂ.ಗೆ ತಲುಪಿದೆ. 150 ಎಕರೆ ವಿಶಾಲವಾದ ಜಮೀನು, 1500 ಕ್ಕೂ ಹೆಚ್ಚು ರಾಸುಗಳಿರುವ ಬಹುತೇಕ ಕರ್ನಾಟಕದ ದೊಡ್ಡ ಗೋಶಾಲೆ ನಿರ್ಮಿಸಲಾಗಿದೆ. ಅಲ್ಲದೆ, 15 ಕೋಟಿ ರೂ. ವೆಚ್ಚದಲ್ಲಿ ಶಿವಾನುಭವ ಕಟ್ಟಡ ನಿರ್ಮಿಸಿದ್ದು, ಅಲ್ಲಿ ನಿತ್ಯ ದಾಸೋಹ ವ್ಯವಸ್ಥೆ ಮಾಡಲಾಗಿದೆ. ಸಾವಿರಾರು ಜನರು ನಿತ್ಯ ಪ್ರಸಾದ ಸೇವನೆ ಮಾಡುತ್ತಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net