ವಿಜಯಪುರ ನಗರದಲ್ಲಿ ಬಸವ ತಿಳಿವಳಿಕೆ ಕೇಂದ್ರದ ಡಾ. ಶಶಿಕಾಂತ ಪಟ್ಟಣ ಸುದ್ದಿಗೋಷ್ಠಿ ನಡೆಸಿದರು. ಡಾ.ಸರಸ್ವತಿ ಪಾಟೀಲ, ರೇಣುಕಾ ಪಾಟೀಲ, ಆರ್.ಎಸ್. ಬಿರಾದಾರ ಇತರರಿದ್ದಾರೆ.
Published on:
Copied
Follow Us
ವಿಜಯಪುರ: ಅಕ್ಕಮಹಾದೇವಿ ಮಹಿಳಾ ವಿಶ್ವ ವಿದ್ಯಾಲಯದಲ್ಲಿ ಅಕ್ಕ ಮಹಾದೇವಿಯ ಅರೆಬೆತ್ತಲೆ ಪ್ರತಿಮೆ ಸ್ಥಾಪನೆ ಮಾಡಿರುವುದು ಸ್ತ್ರೀ ಕುಲಕ್ಕೆ ಅಗೌರವ, ಕೂಡಲೇ ಆ ಪ್ರತಿಮೆ ತೆರವುಗೊಳಿಸಿ ಗೌರವ ತರುವ ರೀತಿಯಲ್ಲಿ ಅಕ್ಕಮಹಾದೇವಿ ಪ್ರತಿಮೆ ಸ್ಥಾಪಿಸಿ ಎಂದು ಪುಣೆಯ ಬಸವ ತಿಳಿವಳಿಕೆ ಸಂಶೋಧನಾ ಕೇಂದ್ರದ ಡಾ. ಶಶಿಕಾಂತ ಪಟ್ಟಣ ಹೇಳಿದರು.
ಅಕ್ಕ ಮಹಾದೇವಿ ಬಟ್ಟೆ ಉಡುವುದನ್ನು ಬಿಟ್ಟಿರಲೇ ಇಲ್ಲ, ಕೆಲವು ಸನಾತನಿಗಳ ಕುತಂತ್ರಿಯಿಂದ ಅಕ್ಕಮಹಾದೇವಿ ಗೌರವಕ್ಕೆ ಚ್ಯುತಿ ಬರುವ ಕೆಲಸ ಮಾಡುತ್ತಿದೆ. ಹೀಗಾಗಿ ಕೂಡಲೇ ಅಕ್ಕಮಹಾದೇವಿ ಮಹಿಳಾ ವಿವಿ ಆವರಣದಲ್ಲಿರುವ ಪ್ರತಿಮೆಯನ್ನು ಕೂಡಲೇ ಸ್ಥಳಾಂತರಿಸಿ ಹೊಸ ಪ್ರತಿಮೆ ಸ್ಥಾಪಿಸಿ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಒತ್ತಾಯಿಸಿದರು.
ಬಸವ ಜನ್ಮ ಭೂಮಿಯಲ್ಲಿರುವ ಅಕ್ಕಮಹಾದೇವಿ ಮಹಿಳಾ ವಿವಿಯಲ್ಲಿಯೇ ಬಸವ ಅಧ್ಯಯನ ಪೀಠ ಇಲ್ಲದಿರುವುದು ನೋವಿನ ಸಂಗತಿ, ಅನೇಕ ಬಾರಿ ಮನವಿ ಸಲ್ಲಿಸಿದರೂ ಸರ್ಕಾರ ಈ ನಿಟ್ಟಿನಲ್ಲಿ ಶೇ. ೧ರಷ್ಟು ಸಹ ದಿಟ್ಟ ಹೆಜ್ಜೆ ಇರಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ವಿಷಯವಾಗಿ ಹೋರಾಟ ನಡೆಸಿದರೂ ಸಹ ಆ ಸಮಯದಲ್ಲಿ ನಮ್ಮ ಹೋರಾಟವನ್ನು ದಮನಗೊಳಿಸುವ ಕಾರ್ಯ ನಡೆಯುತ್ತಿದೆ. ವಚನ ಸಾಹಿತ್ಯದಲ್ಲಿ ಕೆಲವು ವಿನಾಕಾರಣ ಶಬ್ದ ಸೇರಿಸಿ ಅವುಗಳ ತಾತ್ಪರ್ಯ ತಿದ್ದುವ ಕೆಲಸ ನಡೆಯುತ್ತಿದೆ, ಇದು ನಿಲ್ಲಬೇಕು, ಕಲಬೆರಕೆ ಸಂಪೂರ್ಣ ನಿಲ್ಲಬೇಕಿದೆ, ಹೀಗಾಗಿ ವಚನ ಪರಿಷ್ಕರಣೆ ಹಾಗೂ ಶುದ್ಧೀಕರಣ ನಡೆಯಬೇಕು ಎಂದರು.
ಮತಗಳ ಓಲೈಕೆಗಾಗಿ ಶರಣರ ಜಯಂತಿ ನಡೆಯುತ್ತಿದೆ, ಆದರೆ ಅರ್ಥಪೂರ್ಣ ಶರಣರಿಗೆ ಗೌರವ ನೀಡುವ ಕೆಲಸ ಆಗುತ್ತಿಲ್ಲ ಎಂದರು.
೨೫ರಂದು ಬಸವ ಜಯಂತಿ
ಬಸವ ತಿಳಿವಳಿಕೆ ಹಾಗೂ ಸಂಶೋಧನಾ ಕೇಂದ್ರದ ವತಿಯಿಂದ ಏ. ೨೫ರಂದು ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಮಂಗಲ ಕಾರ್ಯಾಲಯದಲ್ಲಿ ಬೆಳಗ್ಗೆ ೧೦ ಕ್ಕೆ ಬಸವ ಜಯಂತಿ ಹಮ್ಮಿಕೊಳ್ಳಲಾಗಿದೆ. ವಿಡಿಎ ಅಧ್ಯಕ್ಷ ಡಾ. ಗಂಗಾಧರ ಸಂಬಣ್ಣಿ, ಅರೋಬಾ ವಿವಿ ಡೀನ್ ಡಾ. ಅಜೀತ್ ರಾಂಪೂರೆ, ಕೊಡಗು ವಿವಿ ಡಾ. ಅಶೋಕ ಆಲೂರ ಸೇರಿ ಅನೇಕ ಗಣ್ಯರು ಭಾಗವಹಿಸಲಿ
ದ್ದಾರೆ.ಕ್ರಾಂತಿ ಗಂಗೋತ್ರಿ, ವಚನ ಗಾನ ಕೋಗಿಲೆ, ಬಸವ ಸೇವಾ ಪ್ರಶಸ್ತಿ ಪ್ರದಾನ ಸಹ ನಡೆಯಲಿದೆ ಎಂದರು.
ಅಲ್ಪಸಂಖ್ಯಾತ ಸ್ಥಾನಮಾನಕ್ಕೆ ಆಗ್ರಹ
ಜೈನ ಧರ್ಮ ಪ್ರತ್ಯೇಕ ಧರ್ಮ ಸ್ಥಾನಮಾನ ದೊರಕುವ ಮುನ್ನವೂ ಕೆಲವು ರಾಜ್ಯಗಳಲ್ಲಿ ಅಲ್ಪಸಂಖ್ಯಾತ ಸ್ಥಾನಮಾನ ನೀಡಲಾಗಿತ್ತು, ಹೀಗಾಗಿ ರಾಜ್ಯದಲ್ಲಿಯೂ ಲಿಂಗಾಯತರಿಗೆ ಅಲ್ಪಸಂಖ್ಯಾತ ಸ್ಥಾನಮಾನ ನೀಡುವ ನಿಟ್ಟಿನಲ್ಲಿ ಸರ್ಕಾರ ಮೀನಮೇಷ ಎಣಿಸಬಾರದು ಎಂದರು.
ಡಾ. ಸರಸ್ವತಿ ಪಾಟೀಲ, ರೇಣುಕಾ ಪಾಟೀಲ, ಆರ್.ಎಸ್. ಬಿರಾದಾರ, ರತ್ನಕ್ಕ ಬಿರಾದಾರ, ಸಿದ್ಪಪ್ಪ ಪಡನಾಡ, ಪ್ರಮುಖರಾದ ಗಂಗಾಧರ ಸಾಲಕ್ಕಿ, ಶರಣು ಸಬರದ ಇದ್ದರು.