ಪಲ್ಸ್ ಪೊಲಿಯೋ ಲಸಿಕೆ ತಪ್ಪದೇ ಹಾಕಿಸಿ; ಜಿಲ್ಲಾಧಿಕಾರಿ ಡಾ.ಆನಂದ ಕೆ ಮನವಿ

ವಿಜಯಪುರ ನಗರದ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಡಾ.ಆನಂದ ಕೆ ಸಭೆ ನಡೆಸಿದರು.  ಡಾ.ಮುಕುಂದ ಗಲಗಲಿ, ಡಿಎಚ್‌ಒ ಸಂಪತ್ ಗುಣಾರಿ, ಜಿಲ್ಲಾ ಶಸ್ತ್ರಚಿಕಿತ್ಸಕ ಶಿವಾನಂದ ಮಾಸ್ತಿಹೊಳಿ ಮತ್ತಿತರರಿದ್ದಾರೆ.
ವಿಜಯಪುರ ನಗರದ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಡಾ.ಆನಂದ ಕೆ ಸಭೆ ನಡೆಸಿದರು. ಡಾ.ಮುಕುಂದ ಗಲಗಲಿ, ಡಿಎಚ್‌ಒ ಸಂಪತ್ ಗುಣಾರಿ, ಜಿಲ್ಲಾ ಶಸ್ತ್ರಚಿಕಿತ್ಸಕ ಶಿವಾನಂದ ಮಾಸ್ತಿಹೊಳಿ ಮತ್ತಿತರರಿದ್ದಾರೆ.
Published on

ಪ್ರಮುಖ ಮುಖ್ಯಾಂಶಗಳು

  • ಪಲ್ಸ್ ಪೊಲಿಯೋ ಸಮಿತಿ ಸಭೆ
  • ಡಿ.21 ರಿಂದ 24ರವರೆಗೆ ಲಸಿಕಾ ಕಾರ್ಯಕ್ರಮ
  • ಜಿಲ್ಲಾದ್ಯಂತ 1331 ಬೂತ್ ಸ್ಥಾಪನೆ
ವಿಜಯಪುರ: ಜಿಲ್ಲೆಯಾದ್ಯಂತ ಡಿ.21 ರಿಂದ 24ರವರೆಗೆ ನಡೆಯಲಿರುವ ಪಲ್ಸ್ ಪೊಲಿಯೋ ಲಸಿಕಾ ಕಾರ್ಯಕ್ರಮ ಯಶಸ್ವಿಗೊಳಿಸಲು 5 ವರ್ಷದೊಳಗಿನ ಮಕ್ಕಳಿಗೆ ತಪ್ಪದೇ ಲಸಿಕೆ ಹಾಕಿಸುವಂತೆ ಜಿಲ್ಲಾಧಿಕಾರಿ ಡಾ.ಆನಂದ ಕೆ ಮನವಿ ಮಾಡಿದರು.
ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ‘ಪಲ್ಸ್ ಪೊಲಿಯೋ ಸಮಿತಿ ಸಭೆ’ಯ ಅಧ್ಯಕ್ಷತೆ ವಹಿಸಿ ಅವರು
ಮಾತನಾಡಿದರು.
ಜಿಲ್ಲೆಯಲ್ಲಿ ಪಲ್ಸ್ ಪೊಲಿಯೋ ಲಸಿಕಾ ಕಾರ್ಯಕ್ರಮ ಯಶಸ್ವಿಗೊಳಿಸಲು ಡಿ.21ರಂದು ಬೂತ್ ಮಟ್ಟದಲ್ಲಿ ಸಭೆ ನಡೆಸಲಾಗುತ್ತಿದ್ದು, ನಂತರದ ಮೂರು ದಿನ ಮನೆ-ಮನೆಗೆ ತೆರಳಿ ಲಸಿಕೆ ಹಾಕಲಾಗುತ್ತಿದೆ ಎಂದು ತಿಳಿಸಿದರು.
ಪೊಲಿಯೋ ಒಂದು ಮಾರಕ ರೋಗವಾಗಿದ್ದು, 5 ವರ್ಷದೊಳಗಿನ ಯಾವುದೇ ಮಗು ಈ ಕಾರ್ಯಕ್ರಮದಿಂದ ಹೊರಗುಳಿಯದಂತೆ ನೋಡಿಕೊಳ್ಳಬೇಕು. ಈ ಲಸಿಕಾ ಕಾರ್ಯಕ್ರಮಕ್ಕೆ ಗ್ರಾಪಂ ಮತ್ತು ನಗರ ಸ್ಥಳೀಯ ಸಂಸ್ಥೆಗಳು ಹೆಚ್ಚಿನ ಕಾಳಜಿ ವಹಿಸಿ, ಸಾರ್ವಜನಿಕರು ಸ್ವಯಂ ಪ್ರೇರಿತವಾಗಿ ಲಸಿಕೆ ಕೊಡಿಸಬೇಕು. ಸಂಬಂಧಿಸಿದ ಅಧಿಕಾರಿಗಳು ವಿಶೇಷ ಗಮನ ಹರಿಸಬೇಕು. ಐದು ವರ್ಷದೊಳಗಿನ ಮಕ್ಕಳು ಲಸಿಕೆಯಿಂದ ವಂಚಿತರಾಗದಂತೆ ಕ್ರಮವಹಿಸಬೇಕು. ಸಂಘ ಸಂಸ್ಥೆಗಳ ಸಹಕಾರ ಪಡೆದು ಕಾರ್ಯಕ್ರಮ ಯಶಸ್ವಿಗೊಳಿಸಲು ಹೇಳಿದರು.

1331 ಬೂತ್ ಸ್ಥಾಪನೆ

ಜಿಲ್ಲಾದ್ಯಂತ ಒಟ್ಟು 295156 ಮಕ್ಕಳು ಲಸಿಕೆ ಪಡೆಯಲಿದ್ದು, ಲಸಿಕಾ ಕಾರ್ಯಕ್ಕೆ ಒಟ್ಟು 1331 ಬೂತ್‌ಗಳನ್ನು ಸ್ಥಾಪಿಸಲಾಗಿದೆ. ಅಲ್ಲದೇ 23 ಮೊಬೈಲ್ ಟೀಮ್ ಕೂಡ ಸ್ಥಾಪಿಸಲಾಗಿದೆ. ಪ್ರತಿ ಬೂತ್‌ಗೆ ಇಬ್ಬರು ಸದಸ್ಯರು, ಐದು ತಂಡಕ್ಕೆ ಒಬ್ಬ ಮೇಲ್ವಿಚಾರಕರು ಕಾರ್ಯನಿರ್ವಹಿಸಲಿದ್ದು, ಪ್ರತಿ ಬೂತ್ ಮಟ್ಟದ ವ್ಯಾಪ್ತಿಯಲ್ಲಿ ಬರುವ ಮನೆಗಳಿಗೆ ತೆರಳಿ ತಪ್ಪದೇ ಪೊಲಿಯೋ ಹನಿ ಹಾಕಲಿದ್ದಾರೆ ಎಂದರು.
ಲಸಿಕಾ ಕಾರ್ಯಕ್ರಮಕ್ಕೆ 2778 ಸಿಬ್ಬಂದಿ, 278 ಮೇಲ್ವಿಚಾರಕರು ಹಾಗೂ ಹೆಚ್ಚುವರಿಯಾಗಿ 183 ಮೇಲ್ವಿಚಾರಕರನ್ನು ನೇಮಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 61 ಪ್ರಾಥಮಿಕ ಆರೋಗ್ಯ ಕೇಂದ್ರಗಳಿದ್ದು, ಎಲ್ಲ ಕೇಂದ್ರಗಳಿಗೆ ಲಸಿಕೆ ಪೂರೈಸಲು ಕ್ರಮವಹಿಸಲು ವಾಹನ ಒದಗಿಸುವಂತೆ ಪ್ರಾದೇಶಿಕ ಸಾರಿಗೆ ಆಯುಕ್ತರಿಗೆ ಸೂಚಿಸಲಾಯಿತು.

ಮಕ್ಕಳಿಂದ ಜಾಥಾ

ಪೊಲಿಯೋ ಲಸಿಕೆ ಕುರಿತು ಶಾಲಾ ಮಕ್ಕಳಿಂದ ಜಾಥಾ ಹಮ್ಮಿಕೊಳ್ಳುವಂತೆಯೂ, ಪಾಲಕರ ಸಭೆ ಏರ್ಪಡಿಸಲು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ವಲಸೆ ಕಾರ್ಮಿಕರ ಮಕ್ಕಳು ಪೊಲಿಯೋ ಲಸಿಕೆಯಿಂದ ವಂಚಿತರಾಗದಂತೆ ನಿಗಾ ವಹಿಸಲು ಕಾರ್ಮಿಕ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಲಸಿಕಾ ಅಭಿಯಾನದ ಎರಡು ದಿನ ಮುನ್ನ ಎಲ್ಲ ಲಸಿಕಾ ಕೇಂದ್ರಗಳಲ್ಲಿ ವಿದ್ಯುತ್ ವ್ಯತ್ಯಯವಾಗದಂತೆ ಕ್ರಮವಹಿಸಲು ಹೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು, ಪ್ರತಿ ಗ್ರಾಮಗಳಲ್ಲಿ ಕರಪತ್ರ, ಡಂಗೂರ ಸಾರುವ ಮೂಲಕ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿ ಲಸಿಕಾ ಅಭಿಯಾನ ಯಶಸ್ವಿಗೊಳಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಡಬ್ಲೂಎಚ್‌ಒ ಸಂಯೋಜಕ ಡಾ.ಮುಕುಂದ ಗಲಗಲಿ, ಡಿಎಚ್‌ಒ ಸಂಪತ್ ಗುಣಾರಿ, ಜಿಲ್ಲಾ ಶಸ್ತ್ರಚಿಕಿತ್ಸಕ ಶಿವಾನಂದ ಮಾಸ್ತಿಹೊಳಿ, ಮಹಾನಗರ ಪಾಲಿಕೆಯ ಆಯುಕ್ತ ವಿಜಯಕುಮಾರ ಮೆಕ್ಕಳಕಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಕೆ.ಕೆ. ಚವಾಣ್, ಪ್ರಾದೇಶಿಕ ಸಾರಿಗೆ ಆಯುಕ್ತ ವಸೀಂ ಬಾಬಾ ಮುದ್ದೇಬಿಹಾಳ, ಡಾ. ಎಸ್.ಎಲ್. ಲಕಣ್ಣವರ, ಡಾ. ಎಲ್.ಎಚ್. ಬಿದರಿ, ಪೀಟರ್ ಅಲೆಕ್ಸಾಂಡರ್, ಡಾ. ಪರಶುರಾಮ ಹಿಟ್ನಳ್ಳಿ, ಡಾ.ಜಾನ್ ಕಟವಟೆ, ಡಾ.ಅಪ್ಪಾಸಾಹೇಬ ಇನಾಮದಾರ, ಡಾ. ಶಶಿಕಾಂತ ಬಾಗೇವಾಡಿ, ಡಾ.ಕೇಸರಸಿಂಗ್ ಗುಂಡಬಾವಡಿ, ಡಾ.ಕವಿತಾ ದೊಡಮನಿ, ಡಾ.ಸತೀಶ್ ತಿವಾರಿ, ಡಾ. ರವಿ ನಾಗನೂರ, ಡಾ.ಪ್ರಶಾಂತ ದುಮಗೊಂಡ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net