

ಪ್ರಮುಖ ಮುಖ್ಯಾಂಶಗಳು
ವಿಜಯಪುರ: ವಿಶ್ವಕರ್ಮ ಸಮಾಜವನ್ನು ಪರಿಶಿಷ್ಟ ಪಂಗಡ (ಎಸ್‌ಟಿ) ಪಟ್ಟಿಗೆ ಸೇರ್ಪಡೆ ಮಾಡುವ ನಿಟ್ಟಿನಲ್ಲಿ ಸರ್ಕಾರದ ಗಮನ ಸೆಳೆಯಲು ಆ.28 ರಂದು ಜಿಲ್ಲೆಯ ವಿವಿಧ ಭಾಗಗಳಲ್ಲಿ ಜನಜಾಗೃತಿ ಸಮಾವೇಶ ನಡೆಯಲಿದೆ ಎಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ಜಿಲ್ಲಾ ಉಪಾಧ್ಯಕ್ಷ ಪ್ರಮೋದ ಬಡಿಗೇರ ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಕೆ.ಪಿ.ನಂಜುಂಡಿ ನೇತೃತ್ವದಲ್ಲಿ ಸಮಾವೇಶ ನಡೆಯಲಿದ್ದು, ಆ.28 ರಂದು ವಿಜಯಪುರ ಜಿಲ್ಲೆಗೆ ಆಗಮಿಸಲಿದ್ದಾರೆ. ರಾಜ್ಯಾದ್ಯಂತ ಎಸ್‌ಟಿ ಮೀಸಲಾತಿಗಾಗಿ ಹೋರಾಟ ಕೈಗೊಂಡಿದ್ದು, ಅಂದು ಬೆಳಗ್ಗೆ 9ಕ್ಕೆ ವಿಜಯಪುರ ನಗರದ ಗುಂಡಬಾವಡಿ ಹತ್ತಿರ ಇರುವ ಶ್ರೀ ಕಾಳಿಕಾದೇವಿ ದೇವಾಲಯಕ್ಕೆ ಭೇಟಿ ನೀಡಲಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಅದೇ ದಿನ ಬೆಳಗ್ಗೆ 11 ಕ್ಕೆ ನಾಗಠಾಣ ಹೋಬಳಿ ಜನಜಾಗೃತಿ ಸಭೆ, ತದನಂತರ ಮಧ್ಯಾಹ್ನ 1ಕ್ಕೆ ಇಂಡಿ ಪಟ್ಟಣದ ಶಂಕರಪಾರ್ವತಿ ಮಂಗಲ ಕಾರ್ಯಾಲಯದಲ್ಲಿ ತಾಲೂಕುಮಟ್ಟದ ಜನಜಾಗೃತಿ ಸಭೆ ನಡೆಯಲಿದ್ದು, ಸಂಜೆ 4ಕ್ಕೆ ಚಡಚಣದಲ್ಲಿ ನೂತನ ತಾಲೂಕು ಮಹಾಸಭಾದ ಉದ್ಘಾಟನೆ ಹಾಗೂ ಜನಜಾಗೃತಿ ಸಭೆ, ರಾತ್ರಿ 7ಕ್ಕೆ ಹೋರ್ತಿಯಲ್ಲಿ ಜನಜಾಗೃತಿ ಸಭೆಗಳು ನಡೆಯಲಿವೆ ಎಂದರು.
ರಾಜ್ಯದಲ್ಲಿ 45 ಲಕ್ಷಕ್ಕೂ ಅಧಿಕ ಜನಸಂಖ್ಯೆಯನ್ನು ಹೊಂದಿರುವ ವಿಶ್ವಕರ್ಮ ಸಮಾಜವೂ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆಯಲು ಕಳೆದ 25 ವರ್ಷಗಳಿಂದ ನಂಜುಂಡಿ ಅವರ ನೇತೃತ್ವದಲ್ಲಿ ಹೋರಾಟ ನಡೆಸಿಕೊಂಡು ಬರಲಾಗಿದೆ ಎಂದರು.
ಸಮಾಜದ ಸಮಾವೇಶ ಮತ್ತು ಪಾದಯಾತ್ರೆ, ಹೋರಾಟಗಳ ಮುಖಾಂತರ ಸರ್ಕಾರದ ವತಿಯಿಂದ ವಿಶ್ವಕರ್ಮ ಜಯಂತಿ, ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮ ಹಾಗೂ ಅಮರಶಿಲ್ಪಿ ಜಕಣಾಚಾರಿ ಸಂಸ್ಕರಣಾ ದಿನಾಚರಣೆಯಂತಹ ಕೊಡುಗೆಗಳನ್ನು ದೊರಕಿಸಿ, ವಿಶ್ವಕರ್ಮ ಜನಾಂಗದ ಗೌರವವನ್ನು ಹೆಚ್ಚಿಸಿದ್ದಾರೆ. ಗ್ರಾಮೀಣ ಭಾಗದಲ್ಲಿ ವಿಶ್ವಕರ್ಮ ಸಮಾಜ ತೀರಾ ಬಡತನ ಹೊಂದಿದೆ. ರೈತ ದೇಶದ ಬೆನ್ನೆಲುಬು ಆದರೆ ರೈತರ ಬೆನ್ನೆಲುಬು ವಿಶ್ವಕರ್ಮ ಬಾಂಧವರು. ಅವರ ಹೊಲಗಳಿಗೆ ಹೋಗಿ ಕೃಷಿ ಉಪಕರಣಗಳನ್ನು ನೀಡುವ ಈ ಸಮಾಜ ಇನ್ನೂ ಪ್ರಗತಿಯಾಗಬೇಕಿದೆ ಎಂದು ತಿಳಿಸಿದರು.
ಬಡಿಗತನ, ಕಬ್ಬಿಣ ಕೆಲಸ, ಶಿಲ್ಪಿಗಳು ವೃತ್ತಿಗಳನ್ನು ಮಾಡುವವರು ತುಂಬಾ ಬಡತನದಲ್ಲಿದ್ದು ಅದರಂತೆ ಚಿನ್ನ-ಬೆಳ್ಳಿ ಕೆಲಸ ಮಾಡುವ ಅಕ್ಕಸಾಲಿಗರು ಕೂಡ ತೊಂದರೆಯಲ್ಲಿದ್ದಾರೆ. ವಿಶ್ವಕರ್ಮ ಸಮುದಾಯವು ಪ್ರವರ್ಗ 2ಎ ದಲ್ಲಿ ಬರುತ್ತಿದ್ದು, ಅದರಲ್ಲಿ 102 ಜಾತಿಗಳಿವೆ. ಅದರಲ್ಲಿ ಬರುವ ಇನ್ನುಳಿದ ಪ್ರಬಲ ಜಾತಿಗಳಿಂದ ಶೈಕ್ಷಣಿಕ, ಉದ್ಯೋಗ, ರಾಜಕೀಯವಾಗಿ ಮತ್ತು ಆರ್ಥಿಕವಾಗಿ ವಿಶ್ವಕರ್ಮ ಸಮಾಜದ ಜನರು ಸಾಮಾಜಿಕ ನ್ಯಾಯದಿಂದ ವಂಚಿತರಾಗುತ್ತಿದ್ದಾರೆ. ಆದ್ದರಿಂದ ವಿಶ್ವಕರ್ಮ ಜಾತಿಯನ್ನು ಎಸ್.ಟಿ ಮೀಸಲಾತಿ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಪ್ರಮುಖರಾದ ಬಾಳು ಗಿರಗಾಂವಕರ, ಎಂ.ಕೆ. ಪತ್ತಾರ, ಸಂತೋಷ ವಿಶ್ವಕರ್ಮ, ವಿಶ್ವನಾಥ ಕುಂದನಗಾರ, ಗಿರೀಶ ಕಮ್ಮಾರ, ಶಿವಾನಂದ ಪತ್ತಾರ ಇತರರು ಸುದ್ದಿಗೋಷ್ಠಿಯಲ್ಲಿದ್ದರು.