ಕೆಡಿಪಿ ಸಭೆಯಲ್ಲೂ ಮಾಹಿತಿ ವಿಲೇವಾರಿಗೆ ಕ್ರಮ, ಆಯುಕ್ತ ರುದ್ರಣ್ಣ ಹರ್ತಿಕೋಟೆ

ವಿಜಯಪುರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕರ್ನಾಟಕ ಮಾಹಿತಿ ಆಯೋಗದ ಆಯುಕ್ತ ರುದ್ರಣ್ಣ ಹರ್ತಿಕೋಟೆ ಸುದ್ದಿಗೋಷ್ಠಿ ನಡೆಸಿದರು. ಆಯುಕ್ತರಾದ ರಾಜಶೇಖರ ಎಸ್ ಹಾಗೂ ಪ್ರಕಾಶ ನಾರಾಯಣ ಚನ್ನಾಳ ಇದ್ದಾರೆ.
ವಿಜಯಪುರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕರ್ನಾಟಕ ಮಾಹಿತಿ ಆಯೋಗದ ಆಯುಕ್ತ ರುದ್ರಣ್ಣ ಹರ್ತಿಕೋಟೆ ಸುದ್ದಿಗೋಷ್ಠಿ ನಡೆಸಿದರು. ಆಯುಕ್ತರಾದ ರಾಜಶೇಖರ ಎಸ್ ಹಾಗೂ ಪ್ರಕಾಶ ನಾರಾಯಣ ಚನ್ನಾಳ ಇದ್ದಾರೆ.
Published on

ಪ್ರಮುಖ ಮುಖ್ಯಾಂಶಗಳು

  • ಆಯೋಗದಿಂದ ಅಧಿಕಾರಿಗಳೊಂದಿಗೆ ಚರ್ಚೆ
  • ಜಿಲ್ಲಾಡಳಿತದಿಂದಲೂ ಸಕಾರಾತ್ಮಕ ಸ್ಪಂದನೆ
  • ಮಾಹಿತಿ ಹಕ್ಕು ಕಾಯ್ದೆ ಪರಿಣಾಮಕಾರಿ ಅನುಷ್ಟಾನ
ವಿಜಯಪುರ: ಸಾರ್ವಜನಿಕರಿಗೆ ಮಾಹಿತಿ ಒದಗಿಸುವುದು ಮತ್ತು ಆಡಳಿತದಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಜಾರಿಗೊಂಡಿರುವ ಮಾಹಿತಿ ಹಕ್ಕು ಕಾಯ್ದೆ ಕುರಿತು ರಾಜ್ಯದ 27 ಜಿಲ್ಲೆಗಳಲ್ಲಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದ್ದು, ಶೇ.85ರಿಂದ 90ರಷ್ಟು ಮಾಹಿತಿ ಸಾರ್ವಜನಿಕರಿಗೆ ಲಭ್ಯವಾಗುತ್ತಿದೆ ಎಂದು ಕರ್ನಾಟಕ ಮಾಹಿತಿ ಆಯೋಗದ ಆಯುಕ್ತ ರುದ್ರಣ್ಣ ಹರ್ತಿಕೋಟೆ ತಿಳಿಸಿದರು.
ಆಯೋಗದಿಂದ ಈವರೆಗೆ 10,881 ಜನರಿಗೆ ಮಾಹಿತಿ ಒದಗಿಸಿದ್ದು 10.45 ಕೋಟಿ ದಂಡ ವಿಧಿಸಿದೆ. ಅದರಲ್ಲಿ 3084 ಜನ 2.70 ಕೋಟಿ ದಂಡ ಕಟ್ಟಿದ್ದಾರೆ. ವಿಜಯಪುರ ಜಿಲ್ಲೆಯಲ್ಲಿ ಕಾಯ್ದೆ ಜಾರಿಯಾದಾಗಿನಿಂದ ಅಂದರೆ 21ವರ್ಷಗಳಲ್ಲಿ 228 ಜನರಿಗೆ 8.46 ಲಕ್ಷ ದಂಡ ವಿಧಿಸಲಾಗಿದೆ. ಆ ಪೈಕಿ 28 ಜನ ಮಾತ್ರ ದಂಡ ಕಟ್ಟಿದ್ದಾರೆ. ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ಕೆಡಿಪಿ ಸಭೆಗಳಲ್ಲಿಯೂ ಮಾಹಿತಿ ವಿಲೇವಾರಿ ಕುರಿತು ಚರ್ಚೆ ಮಾಡಲು ಸೂಚಿಸಲಾಗಿದ್ದು, ಜಿಲ್ಲಾಧಿಕಾರಿಗಳು ಸಹ ಒಪ್ಪಿದ್ದಾರೆ. ಬಹಳಷ್ಟು ಕಡೆ ಮಾಹಿತಿ ಅಧಿಕಾರಿಗಳ ನಾಮ ಫಲಕ ಇಲ್ಲ. ಹೀಗಾಗಿ ನಾಮ ಫಲಕ ಅಳವಡಿಸುವಂತೆ ತಿಳಿಸಲಾಗಿದೆ. ಬಹಳಷ್ಟು ಜನರಿಗೆ ಈ ಕಾಯ್ದೆಯಿಂದ ಅನುಕೂಲವಾಗಿದೆ. ಆಡಳಿತದಲ್ಲಿ ಪಾರದರ್ಶಕತೆ ಹೆಚ್ಚಾಗಿದೆ. ಭ್ರಷ್ಟಾಚಾರ ನಿಯಂತ್ರಣಕ್ಕೆ ಬಂದಿದೆ. ಅನೇಕ ಕಡೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ, ಮೇಲ್ಮನವಿ ಬಂದರೂ ಸಕಾಲಕ್ಕೆ ಮಾಹಿತಿ ನೀಡುತ್ತಿಲ್ಲ. ಹೀಗಾಗಿ ಸಾರ್ವಜನಿಕರಿಗೆ ಮಾಹಿತಿ ಒದಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಮಾಹಿತಿ ಹಕ್ಕು ಕಾಯ್ದೆ ಬಹಳಷ್ಟು ಅನುಕೂಲವಾಗಿದೆ. ಇದೊಂದು ಪರಿಣಾಮಕಾರಿ ಕಾಯ್ದೆ. ಕೇವಲ 10 ರೂಪಾಯಿ ಶುಲ್ಕದಲ್ಲಿ ಮಾಹಿತಿ ಒದಗಿಸಲಾಗುತ್ತಿದ್ದು, ಇದೀಗ ಬೆಲೆ ಏರಿಕೆಯಿಂದಾಗಿ ಶುಲ್ಕ ಪರಿಷ್ಕರಿಸಬೇಕೆಂಬ ವಿಚಾರ ನಡೆದಿದೆ. ವಿಜಯ ಭಾಸ್ಕರ್ ನೇತೃತ್ವದ ಆಡಳಿತ ಸುಧಾರಣಾ ಆಯೋಗ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದು, ಆ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕಿದೆ ಎಂದರು.
ಆಯುಕ್ತ ರಾಜಶೇಖರ ಎಸ್ ಮಾತನಾಡಿ, ಆರ್‌ಟಿಐ ದುರುಪಯೋಗ ಆಗದಂತೆ ಕಾರ್ಯಾಗಾರ ನಡೆಸಲಾಗುತ್ತಿದೆ. ಮೇಲಾಧಿಕಾರಿಗಳ ಜೊತೆಯೂ ಚರ್ಚಿಸಲಾಗುತ್ತಿದೆ. ಕರ್ತವ್ಯ ಲೋಪ ಎಸಗಿದ ಅಧಿಕಾರಿ ಮೇಲೂ ಕ್ರಮ ಕೈಗೊಳ್ಳಲಾಗುತ್ತಿದೆ. ಅರ್ಜಿದಾರರಿಗೆ ಪರಿಹಾರ ಕೂಡ ಕಲ್ಪಿಸಲಾಗಿದೆ ಎಂದರು.
ಬೆಳಗಾವಿ ಪೀಠದಡಿ 7 ಜಿಲ್ಲೆಗಳು ಬರಲಿದ್ದು, ಈವರೆಗೆ 42.32 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಬೆಳಗಾವಿ-12.10 ಲಕ್ಷ, ಬಾಗಲಕೋಟೆ-9.41, ಧಾರವಾಡ-7.72, ವಿಜಯಪುರ 6.50 ಲಕ್ಷ, ಹಾವೇರಿ-2.68, ಉತ್ತರ ಕನ್ನಡ-2.35 ಲಕ್ಷ, ಗದಗ-1.46 ಲಕ್ಷ ರೂ. ದಂಡ ವಿಧಿಸಲಾಗಿದೆ. ಹಂತ ಹಂತಾಗಿ ಬೆಳಗಾವಿ ವಿಭಾಗದ ಎಲ್ಲ ಅರ್ಜಿಗಳನ್ನು ಇತ್ಯರ್ಥಗೊಳಿಸಲಾಗುತ್ತಿದೆ ಎಂದರು.
ಪ್ರಕಾಶ ನಾರಾಯಣ ಚನ್ನಾಳ ಮಾತನಾಡಿ, ಮಾಹಿತಿ ಕೊಡದೇ ಇದ್ದರೆ ದಂಡ ಹಾಕುವುದಾಗಿ ಅಧಿಕಾರಿಗಳಿಗೆ ಸ್ಪಷ್ಟ ಸಂದೇಶ ರವಾನಿಸಲಾಗಿದೆ. ಜೊತೆಗೆ ಕ್ರಮ ಕೈಗೊಳ್ಳಲು ಅವಕಾಶ ಇದ್ದು, ಆ ಹಂತಕ್ಕೆ ತಲುಪುದಂತೆ ಅಧಿಕಾರಿಗಳಿಗೆ ಸೂಚಿಸಲಾಗುತ್ತಿದೆ. ಪಾರದರ್ಶಕತೆ, ಹೊಣೆಗಾರಿಗೆ ಹಾಗೂ ಉತ್ತಮ ಆಡಳಿತಕ್ಕಾಗಿಯೇ ಮಾಹಿತಿ ಹಕ್ಕು ಜಾರಿಗೊಳಿಸಲಾಗಿದೆ. ಮಾಹಿತಿ ಕೇಳಲು ಯಾವುದೇ ಕಾರಣ ಕೊಡಬೇಕಿಲ್ಲ. ಕೆಲವರು ಬ್ಯ್ಲಾಕ್ ಮೇಲ್ ಮಾಡುತ್ತಿದ್ದಾರೆ. ದುರುಪಯೋಗ ಆಗದಂತೆ ನೋಡಿಕೊಳ್ಳಲಾಗುತ್ತಿದೆ ಎಂದರು.
ಜಿಲ್ಲಾಧಿಕಾರಿ ಡಾ.ಆನಂದ ಕೆ ಹಾಗೂ ಸಿಇಒ ರಿಷಿ ಆನಂದ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net