ಬಾಗಲಕೋಟೆ ವಿವಿಗೆ ಪದವಿ ಕಾಲೇಜ್ ಸೇರಿಸಿ, ಎಬಿವಿಪಿಯಿಂದ ಬೃಹತ್ ಪ್ರತಿಭಟನೆ

ವಿಜಯಪುರ ಜಿಲ್ಲಾಡಳಿತ ಕಚೇರಿ ಎದುರು ಎಬಿವಿಪಿ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು. ವಿಭಾಗ ಸಂಘಟನಾ ಕಾರ್ಯದರ್ಶಿ ಹರ್ಷ ನಾಯಕ, ಬಾಲಾಜಿ ಬಿರಾದಾರ, ಬಸನಗೌಡ ರೆಡ್ಡಿ ಇತರರಿದ್ದಾರೆ.
ವಿಜಯಪುರ ಜಿಲ್ಲಾಡಳಿತ ಕಚೇರಿ ಎದುರು ಎಬಿವಿಪಿ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು. ವಿಭಾಗ ಸಂಘಟನಾ ಕಾರ್ಯದರ್ಶಿ ಹರ್ಷ ನಾಯಕ, ಬಾಲಾಜಿ ಬಿರಾದಾರ, ಬಸನಗೌಡ ರೆಡ್ಡಿ ಇತರರಿದ್ದಾರೆ.
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ
  • ಬೆಳಗಾವಿ ವಿಶ್ವ ವಿದ್ಯಾಲಯ ದೂರ
  • ವಿದ್ಯಾರ್ಥಿ-ಪ್ರಾಚಾರ್ಯರಿಗೆ ತೀವ್ರ ಸಮಸ್ಯೆ
ವಿಜಯಪುರ: ಬಾಗಲಕೋಟೆ ವಿಶ್ವ ವಿದ್ಯಾಲಯಕ್ಕೆ ವಿಜಯಪುರದ ಪದವಿ ಕಾಲೇಜುಗಳನ್ನು ಸೇರ್ಪಡೆಗೊಳಿಸಲು ಆಗ್ರಹಿಸಿ ಗುರುವಾರ ಎಬಿವಿಪಿ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ವಿಭಾಗ ಸಂಘಟನಾ ಕಾರ್ಯದರ್ಶಿ ಹರ್ಷ ನಾಯಕ ಮಾತನಾಡಿ, ಈ ಹಿಂದಿನ ಸರ್ಕಾರ ಜಿಲ್ಲೆಗೊಂದು ನೂತನ ವಿಶ್ವ ವಿದ್ಯಾಲಯ ಸ್ಥಾಪಿಸಲು ನಿರ್ಧರಿಸಿತ್ತು. ಆ ಪ್ರಕಾರ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಅಡಿಯಲ್ಲಿರುವ ಸಂಯೋಜಿತ ಕಾಲೇಜುಗಳನ್ನು ಬಾಗಲಕೋಟೆ ಜಿಲ್ಲೆಯಿಂದ ಬೇರ್ಪಡಿಸಿ ಜಮಖಂಡಿಯಲ್ಲಿ ನೂತನ ವಿಶ್ವವಿದ್ಯಾಲಯ ಸ್ಥಾಪನೆ ಮಾಡಿದರು. ಕೇವಲ 73 ಕಾಲೇಜುಗಳಿಗೆ ಜಮಖಂಡಿಯಲ್ಲಿ ವಿಶ್ವವಿದ್ಯಾಲಯ ಮಾಡಲಾಗಿದೆ. ಆದರೆ, ವಿಜಯಪುರ ಜಿಲ್ಲೆಯಲ್ಲಿ ಸುಮಾರು 130 ಕ್ಕಿಂತ ಹೆಚ್ಚು ಪದವಿ ಮಹಾವಿದ್ಯಾಲಯಗಳಿದ್ದು, ಅದಕ್ಕಾಗಿ ಪ್ರಸ್ತುತ ಅಸ್ತಿತ್ವದಲ್ಲಿರುವ ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದಲ್ಲಿರುವ ವಿಶ್ವವಿದ್ಯಾಲಯಕ್ಕೆ ಸೇರ್ಪಡೆಗೊಳಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಸಂಚಾಲಕ ಸಂದೀಪ ಅರಳಗುಂಡಿ ಮಾತನಾಡಿ, ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ ಒಂದು ದಿನದಲ್ಲಿ ಹೋಗಿ ಬರಲು ನಮ್ಮ ಬಡ ವಿದ್ಯಾರ್ಥಿಗಳಿಗೆ ಅದರಲ್ಲೂ ಮಹಿಳಾ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ. ಚಡಚಣ, ಇಂಡಿ, ಸಿಂದಗಿ, ಆಲಮೇಲ ಹಾಗೂ ತಾಳಿಕೋಟಿ ನಗರಗಳಿಂದ ಬೆಳಗಾವಿಯು 300 ಕಿ.ಮೀ. ದೂರವಿದ್ದು, ಒಂದು ದಿನದಲ್ಲಿ ಮಹಾವಿದ್ಯಾಲಯದ ಕಾರ್ಯಗಳನ್ನು ಮುಗಿಸಿಕೊಂಡು ಬರಲು ಸಾಧ್ಯವಿಲ್ಲ. ಪ್ರಸ್ತುತ ಬೆಳಗಾವಿಯ ವಿಶ್ವವಿದ್ಯಾಲಯವು ಬೆಳಗಾವಿ ನಗರದ ಹೊರವಲಯದಲ್ಲಿದ್ದು, ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ವಾಹನ ಸೌಲಭ್ಯದ ಕೊರತೆಯಿದೆ ಎಂದು ಹೇಳಿದರು.
ಮಂಜುನಾಥ ಹಳ್ಳಿ ಮಾತನಾಡಿ, ವಿದ್ಯಾರ್ಥಿಗಳಿಗೆ ಮೈಗ್ರೇಶನ್ ಪ್ರಮಾಣಪತ್ರ, ಮೂಲ ಅಂಕಪಟ್ಟಿಗಳು, ವರ್ಗಾವಣೆ ಪ್ರಮಾಣ ಪತ್ರ, ಘಟಿಕೋತ್ಸವ ಪ್ರಮಾಣಪತ್ರ ಇತರೆ ದಾಖಲೆಗಳು ಬೇಕಾದಲ್ಲಿ ಬೆಳಗಾವಿಗೆ ಹೋಗಿ ಬರುವ ಸಮಯ, ವೆಚ್ಚ ಅಧಿಕವಾಗುತ್ತದೆ. ಮಾತ್ರವಲ್ಲ, ಭಾವನಾತ್ಮಕವಾಗಿ ಮತ್ತು ಮಾನಸಿಕವಾಗಿಯೂ ಪ್ರಾಚಾರ್ಯರು ಪರೀಕ್ಷಾ ಕಾರ್ಯಕ್ಕೆ, ಮೌಲ್ಯಮಾಪನ ಕಾರ್ಯಕ್ಕೆ ತೆರಳುವ ಹಲವು ಸಿಬ್ಬಂದಿ ಖಿನ್ನತೆ ಅನುಭವಿಸಬೇಕಾಗುತ್ತದೆ ಎಂದರು.
ಪ್ರಮುಖರಾದ ಬಾಲಾಜಿ ಬಿರಾದಾರ, ಬಸನಗೌಡ ರೆಡ್ಡಿ, ಶಶಿಕುಮಾರ ಮಲಿಪಾಟೀಲ, ಸ್ನೇಹಾ ಚವಾಣ್, ಮಾಳಪ್ಪ ಸಿದ್ನಾತ, ಪ್ರಕಾಶ ನಾಟಿಕಾರ, ಸೌಂದರ್ಯ ಬಳೇಗಾರ, ಮಹೇಶ ಅವಳ್ಳಿ, ಗಣೇಶ ಲಿಂಗದಳ್ಳಿ, ಮಲ್ಲಿಕಾರ್ಜುನ ಅಗಸರ, ಮಹೇಶ ಬುಯ್ಯರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net