ವಿಜಯಪುರದ ಶ್ರೀ ರವೀಂದ್ರನಾಥ ಠಾಗೋರ್ ಸಿಬಿಎಸ್‌ಇ ಶಾಲೆಯಲ್ಲಿ ಬೇಸಿಗೆ ರಜೆ ನಂತರ ಮೊದಲ ಬಾರಿಗೆ ಶಾಲೆಗೆ ಆರಂಭಿಸಿದ ಮಕ್ಕಳನ್ನು ವಿಶೇಷವಾಗಿ ಸ್ವಾಗತಿಸಲಾಯಿತು. ಶಿವಾಜಿ ಗಾಯಕವಾಡ, ರೀತಾ ಗಾಯಕವಾಡ ಮತ್ತಿತರರಿದ್ದಾರೆ.
ನಗರದ ಛತ್ರಪತಿ ಶಿವಾಜಿ ಮಹಾರಾಜ ಎಜ್ಯುಕೇಷನ್ ಸೊಸೈಟಿಯ ಶ್ರೀ ರವೀಂದ್ರನಾಥ ಠಾಗೋರ್ ಸಿಬಿಎಸ್‌ಇ ಶಾಲೆಯಲ್ಲಿ ಸೋಮವಾರ ಎರಡು ತಿಂಗಳ ಬೇಸಿಗೆ ರಜೆ ನಂತರ ಮೊದಲ ಬಾರಿಗೆ ಶಾಲೆಗೆ ಆರಂಭಿಸಿದ ಮಕ್ಕಳನ್ನು ವಿಶೇಷವಾಗಿ ಸ್ವಾಗತಿಸಲಾಯಿತು.
ಶಾಲೆಯ ಮೊದಲ ದಿನವೇ ವಿದ್ಯಾರ್ಥಿಗಳ ಸಂಭ್ರಮ, ಪೋಷಕರ ಖುಷಿ ಹಾಗೂ ಶಾಲಾ ಆಡಳಿತ ಮಂಡಳಿಯ ವಿಶೇಷ ಸ್ವಾಗತ ಕಾರ್ಯಕ್ರಮದಿಂದ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.
ಶಾಲಾ ಆವರಣವನ್ನು ಬಲೂನ್ ಮತ್ತು ಅಲಂಕಾರಿಕ ವಸ್ತುಗಳಿಂದ ಸಿಂಗರಿಸಲಾಗಿತ್ತು. ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳನ್ನು ಶಿಕ್ಷಕರು ಹಾಗೂ ಆಡಳಿತ ಮಂಡಳಿ ಸದಸ್ಯರು ಆರತಿ ಬೆಳಗಿ, ಪುಷ್ಪಾರ್ಚನೆಗೈದು, ನಂತರ ಸಿಹಿ ತಿನ್ನಿಸಿ ಆತ್ಮೀಯವಾಗಿ ಬರಮಾಡಿಕೊಂಡರು.
ಸಂಸ್ಥೆಯ ಅಧ್ಯಕ್ಷ ಶಿವಾಜಿ ಗಾಯಕವಾಡ ವಿದ್ಯಾ ಅಧಿದೇವತೆ ಸರಸ್ವತಿ ದೇವಿಯ ಪೂಜೆ ನೆರವೇರಿಸಿ, ವಿದ್ಯಾರ್ಥಿಗಳ ಶೈಕ್ಷಣಿಕ ವರ್ಷದ ಶುಭಾರಂಭಕ್ಕೆ ಚಾಲನೆ ನೀಡಿದರು.
ನಂತರ ವಿದ್ಯಾರ್ಥಿಗಳಿಗಾಗಿ ಮನರಂಜನಾ ಕಾರ್ಯಕ್ರಮಗಳು ನಡೆದವು. ಮಕ್ಕಳು ಹಾಡು, ನೃತ್ಯ ಹಾಗೂ ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಿ ಸಂಭ್ರಮಿಸಿದರು.
ಸಂಸ್ಥೆ ಕಾರ್ಯದರ್ಶಿ ರೀತಾ ಗಾಯಕವಾಡ, ಪ್ರಾಚಾರ್ಯ ಅಭಿಜಿತ್ ಗಾಯಕವಾಡ, ಸಾರ್ವಜನಿಕ ಸಂಪರ್ಕಾಽಕಾರಿ ವಿಜಯಕುಮಾರ ಸಾರವಾಡ ಮತ್ತಿತರರಿದ್ದರು.