ಶಾಸ್ತ್ರೋಕ್ತವಾಗಿ ನೆರವೇರಿದ ಭೋಗಿ

ವಿಜಯಪುರ ನಗರದ ಸಿದ್ಧೇಶ್ವರ ದೇವಸ್ಥಾನದ ಎದುರು ಶಾಸಕ ಬಸನಗೌಡ ಪಾಟೀಲ ಯತ್ನಾಳ ಕುಟುಂಬದ ಸಮ್ಮುಖದಲ್ಲಿ ಶಿವಯೋಗಿ ಸಿದ್ಧರಾಮರ ಯೋಗದಂಡಕ್ಕೆ ಅಕ್ಷತಾರ್ಪಣೆ-ಭೋಗಿ ಕಾರ್ಯಕ್ರಮ ಶಾಸ್ತ್ರೋಕ್ತವಾಗಿ ನೆರವೇರಿತು.
ವಿಜಯಪುರ ನಗರದ ಸಿದ್ಧೇಶ್ವರ ದೇವಸ್ಥಾನದ ಎದುರು ಶಾಸಕ ಬಸನಗೌಡ ಪಾಟೀಲ ಯತ್ನಾಳ ಕುಟುಂಬದ ಸಮ್ಮುಖದಲ್ಲಿ ಶಿವಯೋಗಿ ಸಿದ್ಧರಾಮರ ಯೋಗದಂಡಕ್ಕೆ ಅಕ್ಷತಾರ್ಪಣೆ-ಭೋಗಿ ಕಾರ್ಯಕ್ರಮ ಶಾಸ್ತ್ರೋಕ್ತವಾಗಿ ನೆರವೇರಿತು.
Published on

ಪ್ರಮುಖ ಮುಖ್ಯಾಂಶಗಳು

  • ಕಳೆಗಟ್ಟಿದ ಸಂಕ್ರಮಣದ ಜಾತ್ರೆ
  • ಸಿದ್ಧೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ
  • ನಂದಿ ಧ್ವಜಗಳ ಭವ್ಯ ಮೆರವಣಿಗೆ
ವಿಜಯಪುರ: ಉತ್ತರ ಕರ್ನಾಟಕದ ಅತ್ಯಂತ ಸುಪ್ರಸಿದ್ಧ ಸಂಕ್ರಮಣದ ಸಿದ್ಧೇಶ್ವರ ಜಾತ್ರೋತ್ಸವ ಸಡಗರ ಹಾಗೂ ಸಂಭ್ರಮದಿಂದ ಮತ್ತು ಭಕ್ತಿಭಾವದಿಂದ ನಡೆಯುತ್ತಿದ್ದು, ಜಾತ್ರೆಯ ಮೂರನೇ ದಿನವಾದ ಮಂಗಳವಾರ ಶಿವಯೋಗಿ ಸಿದ್ಧರಾಮರ ಯೋಗದಂಡಕ್ಕೆ ಅಕ್ಷತಾರ್ಪಣೆ-ಭೋಗಿ ಕಾರ್ಯಕ್ರಮ ಶ್ರದ್ಧೆಯಿಂದ ನೆರವೇರಿತು.
ಇಲ್ಲಿನ ಸಿದ್ಧೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಭೋಗಿ ಕಾರ್ಯಕ್ರಮ ಹಿನ್ನೆಲೆ ಹಮ್ಮಿಕೊಂಡ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಮನಸೂರೆ ಗೊಂಡವಲ್ಲದೇ ಅಪಾರ ಭಕ್ತರು ಕಾರ್ಯಕ್ರಮದಲ್ಲಿ ಭಾಗಿಯಾಗಿ ಪುನೀತರಾದರು. ಪುಷ್ಪಗಳಿಂದ ಅಲಂಕೃತ ಸಪ್ತ ನಂದಿಕೋಲುಗಳ ಮೆರವಣಿಗೆ, ಶ್ವೇತ ವ‌ಸ್ತ್ರಧಾರಿ ಭಕ್ತರ ಕುಣಿತ ಹಾಗೂ ಪಂಚ ಕಮಿಟಿ ಸದಸ್ಯರ ಸಮ್ಮುಖದಲ್ಲಿ ಭೋಗಿ ಕಾರ್ಯಕ್ರಮ ಸಾಂಗವಾಗಿ ನೆರವೇರಿತು.

ಶಾಸ್ತ್ರೋಕ್ತವಾಗಿ ನೆರವೇರಿದ ಮದುವೆ

ಶಿವಯೋಗಿ ಸಿದ್ಧರಾಮ ಹಾಗೂ ಕುಂಬಾರ ಕನ್ಯೆಯೊಬ್ಬಳ ಮೂರ್ತಿಗಳನ್ನು ಇರಿಸಿ ಶಾಸ್ತ್ರೋಕ್ತವಾಗಿ ಮದುವೆ ಸಮಾರಂಭ ನೆರವೇರಿಸಲಾಯಿತು. ಮದುಮಕ್ಕಳನ್ನು ಕೂರಿಸುವ ಮಾದರಿಯಲ್ಲಿ ಮೂರ್ತಿಗಳನ್ನಿಟ್ಟು ಶಿವಯೋಗಿಯ ಯೋಗ ದಂಡದೊಂದಿಗೆ ವಿವಾಹ ಸಾಂಕೇತಿಸಲು ಸಾಲಂಕೃತಗೊಂಡ 7 ನಂದಿಕೋಲಗಳು ಹಾಗೂ ಶ್ರೀ ಶಿವಯೋಗಿ ಸಿದ್ಧರಾಮೇಶ್ವರ ಉತ್ಸವ ಮೂರ್ತಿ ಮನಸೂರೆಗೊಂಡವು. ಸಂಪ್ರದಾಯದಂತೆ ವಿಜಯಪುರ ನಗರ ಶಾಸಕರೂ ಆಗಿರುವ, ಸಿದ್ಧೇಶ್ವರ ಸಂಸ್ಥೆಯ ಅಧ್ಯಕ್ಷ ಬಸನಗೌಡ ರಾ. ಪಾಟೀಲ (ಯತ್ನಾಳ) ನೇತೃತ್ವ ವಹಿಸಿದ್ದರು. ವೇದ ಮೂರ್ತಿ ಮುರಗಯ್ಯ ಗಚ್ಚಿನಮಠ ಶಿವಯೋಗಿ ಸಿದ್ಧರಾಮೇಶ್ವರ ಚರಿತ್ರೆ ಓದುವುದರೊಂದಿಗೆ ಶುಭ ಮಾಂಗಲ್ಯ ಧಾರಣ, ಅಕ್ಷತಾರ್ಪಣೆ ಕಾರ್ಯಕ್ರಮ ನೆರವೇರಿಸಿದರು. ಕುಂಬಾರ ಗುಂಡಮ್ಮನ ಮದುವೆ ಬಳಿಕ ಮಹಿಳೆಯರು ಪರಸ್ಪರ ಅರಿಶಿಣ-ಕುಂಕುಮ ಹಂಚಿಕೊಂಡರು. ಬಳಿಕ ನಗರದ ಪ್ರಮುಖ ಬೀದಿಗಳಲ್ಲಿ ಶ್ರೀ ಸಿದ್ಧೇಶ್ವರ ಉತ್ಸವ ಮೂರ್ತಿಯ ಮೆರವಣಿಗೆ ನಡೆಯಿತು.
ಮೇಯರ್ ಎಂ.ಎಸ್. ಕರಡಿ, ಸಂಸ್ಥೆಯ ಉಪಾಧ್ಯಕ್ಷ ಸಂಗು ಸಜ್ಜನ, ಚೇರಮನ್ ಬಸಯ್ಯ ಹಿರೇಮಠ, ಪದಾಧಿಕಾರಿಗಳಾದ ಸದಾನಂದ ದೇಸಾಯಿ, ಬಿ.ಎಸ್. ಸುಗೂರ, ಎಂ.ಎಂ. ಸಜ್ಜನ, ಶಿವಾನಂದ ನೀಲಾ, ರಮೇಶ ಹಳ್ಳದ, ಗುರು ಗಚ್ಚಿನಮಠ, ಪ್ರೇಮಾನಂದ ಬಿರಾದಾರ, ಎಸ್.ಎಂ. ಪಾಟೀಲ, ಸುರೇಶ ಇಟ್ಟಗಿ, ಅಮೃತ ತೋಸನಿವಾಲ್, ಪಾಂಡು ಸಾಹುಕಾರ ದೊಡಮನಿ, ರಾಹುಲ್ ಜಾಧವ, ಶಿವರುದ್ರ ಬಾಗಲಕೋಟ, ಕಿರಣ ಪಾಟೀಲ, ಪ್ರೇಮಾನಂದ ಬಿರಾದಾರ, ಎಸ್.ಸಿ. ಉಪ್ಪಿನ, ಎಸ್.ಎಚ್. ನಾಡಗೌಡ, ನಾಗಪ್ಪ ಗುಗ್ಗರಿ, ಬಸವರಾಜ ಗಣಿ, ಸುಧೀರ ಚಿಂಚಲಿ, ರಮೇಶ ಹಳ್ಳದ, ಶಿವಾನಂದ ನೀಲಾ, ಸಂತೋಷ ತಳಕೇರಿ, ವಿಠಲ ಹೊಸಪೇಠ, ಮಾದೇವ ಜಂಗಮಶೆಟ್ಟಿ, ಮುತ್ತಪ್ಪ ಹಳ್ಳಿ, ಬಸವರಾಜ ಕಂದಗಲ್ಲ, ಈರಣ್ಣ ಪಾಟೀಲ, ಮಲಕಪ್ಪಣ್ಣ ಗಾಣಿಗೇರ, ಮಲ್ಲಿಕಾರ್ಜುನ ಹಕ್ಕಾಪಕ್ಕಿ, ಎನ್.ಎಂ. ಗೋಲಾಯಿ, ಬಸವರಾಜ ಬಿರಾದಾರ, ರಾಜು ಕುರಿಯವರ, ರಾಜು ಗಣಿ, ಅನೀಲ ಸಬರದ, ವಿವೇಕ ಹುಂಡೇಕಾರ, ಶಂಕರ ಹೂಗಾರ, ನಂದು ಗಡಗಿ, ಶ್ರೀಶೈಲ ದೇವುರ, ಉಮೇಶ ಕೋರಿ, ಪ್ರವೀಣ ಬಿಜ್ಜರಗಿ. ಚಂದ್ರು ಚೌಧರಿ, ಶ್ರೀಶೈಲ ದೇವರ, ವಿಶಾಲ ಧಾರವಾಡಕರ, ವಿಜಯಕುಮಾರ ಮೆಂಡೆಗಾರ, ಶಿವಾನಂದ ಪಟ್ಟಣಶೆಟ್ಟಿ ಮತ್ತಿತರರಿದ್ದರು.

ಅಕ್ಷತಾರ್ಪಣೆ ಕಾರ್ಯಕ್ರಮದ ಧಾರ್ಮಿಕ ಹಿನ್ನೆಲೆ

ಕುಂಬಾರ ಕನ್ಯೆ ಗುಂಡವ್ವ ಹಾಗೂ ಸಿದ್ಧರಾಮರ ಯೋಗದಂಡದ ಮದುವೆಗೆ ತನ್ನದೇ ಆದ ಹಿನ್ನೆಲೆ ಇದೆ. ಶಿವಯೋಗಿ ಸಿದ್ಧರಾಮರು ಬಾಲಬ್ರಹ್ಮಚಾರಿಯಾಗಿದ್ದರು. ಕಾಯಕ ಯೋಗಿಗಳಾಗಿದ್ದರು. ಅವರ ಈ ಕಾಯಕ ನಿಷ್ಠೆಗೆ ಸಾವಿರಾರು ಜನ ಅನುಯಾಯಿಗಳಾಗಿದ್ದರು. ಅದರಲ್ಲಿ ಕುಂಬಾರ ಗುಂಡವ್ವ ಸಹ ಒಬ್ಬರು. ಒಂದು ದಿನ ಕುಂಬಾರ ಗುಂಡವ್ವಳ ಕಾಯಕ ನಿಷ್ಠೆ ಹಾಗೂ ಶ್ರದ್ಧೆ ಗಮನಿಸಿದ ಸಿದ್ಧರಾಮರು ನಿನಗೇನು ವರ ಬೇಕು ಕೇಳು ಎಂದರಂತೆ. ಆಗ ಗುಂಡವ್ವ `ಸ್ವಾಮಿ ನಾನು ನಿಮ್ಮ ಚರಣ ದಾಸಿಯಾಗಬೇಕು, ನನ್ನನ್ನು ತಮ್ಮ ಧರ್ಮಪತ್ನಿಯಾಗಿ ಸ್ವೀಕರಿಸಿ ಮುತ್ತೈದೆ ಭಾಗ್ಯ ಕರುಣಿಸಿ' ಎಂದರಂತೆ. ಆಗ ಅಖಂಡ ಬ್ರಹ್ಮಚಾರಿಯಾಗಿದ್ದ ಸಿದ್ಧರಾಮರು ಮದುವೆಯಾಗುವುದು ಸಾಧ್ಯವಿಲ್ಲದ ಕಾರಣ ನೀನು ನನ್ನ ಯೋಗದಂಡದೊಂದಿಗೆ ಮದುವೆಯಾಗಬಹುದೆಂದರು. ಈ ಮಾತನ್ನು ಅಕ್ಷರಶಃ ಪಾಲಿಸಿದ ಕುಂಬಾರ ಗುಂಡವ್ವ ಯೋಗದಂಡದೊಂದಿಗೆ ಶಾಸ್ತ್ರೋಕ್ತವಾಗಿ ಮದುವೆಯಾದರು ಎಂಬ ಪ್ರತೀತಿ. ಹೀಗಾಗಿ ಪ್ರತಿ ವರ್ಷ ಜಾತ್ರೋತ್ಸವದ ಸಂದರ್ಭ ಈ ಸಂಪ್ರದಾಯ ನೆರವೇರುತ್ತದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net