ಮುಂಗಾರು ನಿರ್ವಹಣೆಗೆ ಮಾರ್ಗದರ್ಶಿ

ಇಂಡಿ ತಾಲೂಕಿನ ಹೊಲದಲ್ಲಿ ರೈತರು ಬಿತ್ತನೆ ಮಾಡುತ್ತಿರುವುದು.
ಇಂಡಿ ತಾಲೂಕಿನ ಹೊಲದಲ್ಲಿ ರೈತರು ಬಿತ್ತನೆ ಮಾಡುತ್ತಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಇಂಡಿ ತಾಲೂಕಿನಲ್ಲಿ ಮಳೆ ಕೊರತೆ
  • ವೈಜ್ಞಾನಿಕ ಕೃಷಿ ಪದ್ಧತಿಯಿಂದ ಉತ್ತಮ ಇಳುವರಿ
ಇಂಡಿ: ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಫೆಸಿಫಿಕ್ ಮಹಾಸಾಗರದಲ್ಲಿ ಮೇಲ್ಮೈ ತಾಪಮಾನ ಹೆಚ್ಚಳದಿಂದ ಉಂಟಾಗಿರುವ ಎಲ್‌ನಿನೋ ಪರಿಣಾಮ ಈ ವರ್ಷ ಮಳೆ ಪ್ರಮಾಣದ ಮೇಲೆ ಬೀರುವ ಸಾಧ್ಯತೆ ಇದೆ. ರೈತರು ಮಳೆ ಲಭ್ಯತೆ ಆಧರಿಸಿ ಬೆಳೆ ಹಾಗೂ ತಳಿಗಳನ್ನು ಆಯ್ಕೆ ಮಾಡುವುದು ಅತ್ಯಂತ ಅಗತ್ಯವಾಗಿದೆ ಎಂದು ಕೃಷಿ ಉಪ ನಿರ್ದೇಶಕ ಚಂದ್ರಕಾಂತ ಪವಾರ ತಿಳಿಸಿದ್ದಾರೆ.
ಅಂತೆಯೇ ಸರಿಯಾದ ಸಮಯದಲ್ಲಿ ಬಿತ್ತನೆ ತೇವಾಂಶ ಸಂರಕ್ಷಣೆ ಮತ್ತು ಮಧ್ಯಂತರ ಬರ ನಿರ್ವಹಣಾ ಕ್ರಮ ಅನುಸರಿಸುವುದರಿಂದ ಬೆಳೆ ಹಾನಿ ಕಡಿಮೆ ಮಾಡಿ ಉತ್ತಮ ಇಳುವರಿ ಪಡೆಯಬಹುದು ಎಂದು ಕೃಷಿ ಇಲಾಖೆ ರೈತರಿಗೆ ಮಾರ್ಗದರ್ಶನ ನೀಡಿದೆ.
ಖುಷ್ಕಿ ಬೆಳೆ ಬೆಳೆಯುವ ಸಂದರ್ಭದಲ್ಲಿ ಕನಿಷ್ಠ 50 ರಿಂದ 60 ಮೀ.ಮೀ ಮಳೆ ಬಂದ ನಂತರ ಬಿತ್ತನೆ ಮಾಡುವುದು ಸೂಕ್ತ, ಹೊಲದಲ್ಲಿ ತೇವಾಂಶವನ್ನು ಉಳಿಸಿಕೊಳ್ಳಲು ಕಳೆ ನಿಯಂತ್ರಣ ಅಂತರ ಬೇಸಾಯ ಹಾಗೂ ಕೃಷಿ ತ್ಯಾಜ್ಯಗಳನ್ನು ಹೊದಿಕೆಯಾಗಿ ಬಳಸುವುದು ಉತ್ತಮ. ಮಧ್ಯಂತರ ಬರ ಪರಿಸ್ಥಿತಿ ಎದುರಾದಾಗ ಬೆಳೆ ಚೇತರಿಕೆ ಶೇ.1ರಿಂದ 3 ಯೂರಿಯಾವನ್ನು ಶೇ.0.5 ಜಿಂಕ್ ಸಲೆೇಟ್ ಜತೆಗೆ ಅಥವಾ ಪ್ರತ್ಯೇಕವಾಗಿ ಸಿಂಪಡಿಸಬಹುದು. ಇದರ ಜತೆಗೆ ಶೇ.2 ಡಿಎಪಿ 13:0:45 ಅಥವಾ 19:19:19 ದ್ರಾವಣಗಳ ಸಿಂಪಡಣೆ ಪರಿಣಾಮಕಾರಿ. ಸಾವಯುವ ಗೊಬ್ಬರ ಹಾಗೂ ಹೈಡ್ರೋಜೆಲ್ ಬಳಕೆಯಿಂದ ಮಣ್ಣಿನಲ್ಲಿ ತೇವಾಂಶ ಹೆಚ್ಚು ಕಾಲ ಉಳಿಯುತ್ತದೆ. ನೀರಿನ ಲಭ್ಯತೆ ಇರುವ ಪ್ರದೇಶಗಳಲ್ಲಿ ಹನಿ ನೀರಾವರಿ ಅಥವಾ ತುಂತುರ ನೀರಾವರಿ ವ್ಯವಸ್ಥೆ ಬಳಸುವುದು ಉತ್ತಮ.
ತೊಗರಿಯಲ್ಲಿ ಟಿಎಸ್-3 ಆರ್ ತಳಿಗಳು ಉತ್ತಮವಾಗಿದ್ದು ಮಳೆ ತಡವಾದಲ್ಲಿ ಎಕೆಟಿ 8811 ಅಥವಾ ಬಿಎಸ್‌ಎಂಆರ್ 786 ತಳಿಗಳನ್ನು ಆಯ್ಕೆ ಮಾಡಬಹುದು.
ನೆಲಗಡಲೆ ಬೆಳೆಯಲ್ಲಿ ಜೆಎಲ್ 24, ಕೆ - 6 ಮತ್ತು ಕೆ - 9 ತಳಿಗಳು ಸೂಕ್ತವಾಗಿದ್ದು ಮಳೆ ವಿಳಂಬವಾದರೆ ಹುರುಳಿ, ಸೂರ್ಯಕಾಂತಿ, ಸಜ್ಜೆ ಪರ್ಯಾಯ ಬೆಳೆಯಾಗಿ ಬೆಳೆಯಬಹುದು.
ಆಗಸ್ಟ್ ತಿಂಗಳಲ್ಲಿ ಅಲಸಂದೆ, ಹುರುಳಿ, ಅವರೆ ಹಾಗೂ ಮೇವಿನ ಜೋಳ ಬೆಳೆಗಳಿದ್ದು, ಸೆಪ್ಟೆಂಬರ್ ತಿಂಗಳಲ್ಲಿ ಮಳೆಯಾದರೆ ಅಲ್ಪಾವಧಿ ಅಲಸಂದಿ, ಹುರುಳಿ, ಕಡಲೆ ಬೆಳೆಗಳನ್ನು ಬೆಳೆಯಬಹುದು. ಒಟ್ಟಾರೆ ಹವಾಮಾನಕ್ಕೆ ಅನುಗುಣವಾಗಿ ತಳಿಗಳ ಆಯ್ಕೆ ತೇವಾಂಶ ಸಂರಕ್ಷಣೆ ಹಾಗೂ ಬರ ನಿರ್ವಹಣಾ ಕ್ರಮಗಳನ್ನು ಅನುಸರಿಸಿದರೆ ಮಳೆ ಕೊರತೆಯಿಂದಾಗುವ ಬೆಳೆ ನಷ್ಟವನ್ನು ತಡೆಯಬಹುದು. ರೈತರು ಹವಾಮಾನ ಮುನ್ಸೂಚನೆಗಳನ್ನು ಗಮನಿಸಿ ವೈಜ್ಞಾನಿಕ ಕೃಷಿ ಪದ್ದತಿಗಳನ್ನು ಅನುಸರಿಸುವ ಮೂಲಕ ಉತ್ತಮ ಇಳುವರಿ ಪಡೆಯಬಹುದಾಗಿದೆ.
"

ರೈತರು ಮಳೆ ಲಭ್ಯತೆ ಆಧರಿಸಿ ಸೂಕ್ತ, ಅಲ್ಪಾವಧಿ ಬೆಳೆ ಹಾಗೂ ತಳಿಗಳನ್ನು ಆಯ್ಕೆ ಮಾಡಿ ಬಿತ್ತನೆ ಕೈಕೊಳ್ಳಬಹುದು. ಮಳೆ ಕೊರತೆ ಸಂದರ್ಭದಲ್ಲಿ ಸೂಕ್ತ ತಳಿಗಳ ಆಯ್ಕೆ ತೇವಾಂಶ ಸಂರಕ್ಷಣೆ ಮತ್ತು ಮಧ್ಯಂತರ ಬರ ನಿರ್ವಹಣಾ ಕ್ರಮಗಳನ್ನು ಅನುಸರಿಸಿದರೆ ಬೆಳೆ ಹಾನಿ ಗಣನೀಯವಾಗಿ ಕಡಿಮೆ ಮಾಡಬಹುದು. ಹವಾಮಾನ ಮುನ್ಸೂಚನೆಗಳನ್ನು ಗಮನಿಸಿ ಹಂತ ಹಂತವಾಗಿ ಬಿತ್ತನೆ ಮತ್ತು ಬೆಳೆ ನಿರ್ವಹಣೆ ಕೈ ಕೊಳ್ಳುವುದು ರೈತರ ಯಶಸ್ಸಿನ ಸೂತ್ರ.

ಚಂದ್ರಕಾಂತ ಪವಾರ, ಕೃಷಿ ಉಪನಿರ್ದೇಶಕರು, ಇಂಡಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net