

ಮುದ್ದೇಬಿಹಾಳ: ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಸುಣಕಲ್ ಗ್ರಾಮದ ಹತ್ತಿರ ಹೊಸದಾಗಿ ನಿರ್ಮಿಸಲಾಗಿರುವ ಮಾಜಿ ಸಚಿವ, ಶಾಸಕ ಆರ್.ಬಿ. ತಿಮ್ಮಾಪೂರ ಮಾಲೀಕತ್ವದ ಆರ್.ಬಿ. ಶುಗರ್ಸ್ ನ. 20ರಂದು ಕೇನ್ ಕ್ಯಾರಿಯರ್ ಪೂಜೆ ಮೂಲಕ ಕಬ್ಬು ನುರಿಸುವ ಕಾರ್ಯ ಪ್ರಾರಂಭಿಸಲಿದೆ ಎಂದು ಕಾರ್ಖಾನೆಯ ತಾಂತ್ರಿಕ ಉಪಾಧ್ಯಕ್ಷ ಎಸ್.ಆರ್. ಕುಂದರಗಿ ಹಾಗೂ ಉಪ ಪ್ರಧಾನ ವ್ಯವಸ್ಥಾಪಕ ಬಿ.ಬಿ. ಪಾಟೀಲ ತಿಳಿಸಿದರು.
ನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಪ್ರಸಕ್ತ ಹಂಗಾಮಿನ ಕಬ್ಬು ನುರಿಸುವ ಕಾರ್ಯಕ್ಕೆ ಅಧಿಕೃತ ಚಾಲನೆ ನೀಡಲಾಗುತ್ತದೆ. ಪ್ರಾರಂಭದಲ್ಲಿ ಒಂದು ವಾರ ಪ್ರಾಯೋಗಿಕವಾಗಿ ಕಬ್ಬು ನುರಿಸಲಾಗುತ್ತದೆ. ನಂತರ ನಿರಂತರ ಕಬ್ಬು ನುರಿಸುವ ಕಾರ್ಯ ಮುಂದುವರಿಯಲಿದೆ ಎಂದರು.
ಕಾರ್ಖಾನೆಯು ದಿನವೊಂದಕ್ಕೆ 5 ಸಾವಿರ ಮೆಟ್ರಿಕ್ ಟನ್ ಕಬ್ಬು ನುರಿಸುವ ಸಾಮರ್ಥ್ಯ ಹೊಂದಿದೆ. ಈ ಹಂಗಾಮಿನಲ್ಲಿ 40 ಸಾವಿರ ಎಕರೆ ಪ್ರದೇಶದ ಕಬ್ಬು ನುರಿಸುವ ಗುರಿ ಹೊಂದಲಾಗಿದೆ. ಈ ಕಾರ್ಖಾನೆಯಿಂದ ಕಲ್ಯಾಣ ಕರ್ನಾಟಕ ಭಾಗದ ಹಿಂದುಳಿದ ಜಿಲ್ಲೆಗಳಾದ ರಾಯಚೂರು, ಯಾದಗಿರಿ ಹಾಗೂ ಕಿತ್ತೂರು ಕರ್ನಾಟಕ ಭಾಗದ ಹಿಂದುಳಿದ ಜಿಲ್ಲೆಗಳಾದ ವಿಜಯಪುರ, ಬಾಗಲಕೋಟೆ ಜಿಲ್ಲೆಗಳ ರೈತರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ನಾರಾಯಣಪುರ ಜಲಾಶಯದ ಮುಂಭಾಗದ ರಾಜ್ಯ ಹೆದ್ದಾರಿ ಮೂಲಕ ಕಾರ್ಖಾನೆಗೆ ಕಬ್ಬು ಸಾಗಿಸಲು ಅನುಕೂಲ ಮಾಡಿಕೊಡುವ ಉದ್ದೇಶದಿಂದ ನಾರಾಯಣಪುರ ಚೆಕ್ ಪೋಸ್ಟ್‌ನಿಂದ ಜಾವೂರ ಕ್ರಾಸವರೆಗೆ ರಸ್ತೆ ತಗ್ಗು ದಿನ್ನೆಗಳನ್ನು ತಾತ್ಕಾಲಿಕವಾಗಿ ಮಣ್ಣು ಹಾಕಿ ಮುಚ್ಚಿ ಕಬ್ಬು ಸಾಗಿಸುವ ವಾಹನಗಳ ಸುಗಮ ಓಡಾಟಕ್ಕೆ ಅನುಕೂಲ ಮಾಡಿಕೊಡಲಾಗುತ್ತದೆ ಎಂದರು. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ, ಬಾಗಲಕೋಟೆ ಜಿಲ್ಲೆಯ ಇಳಕಲ್, ಹುನಗುಂದ, ಯಾದಗಿರಿ ಜಿಲ್ಲೆಯ ನಾರಾಯಣಪುರ, ರಾಯಚೂರು ಜಿಲ್ಲೆಯ ಲಿಂಗಸುಗೂರು ಭಾಗದ 60ಕ್ಕೂ ಹೆಚ್ಚು ಗ್ರಾಮಗಳ ರೈತರು ಕಾರ್ಖಾನೆ ವ್ಯಾಪ್ತಿಗೆ ಬರಲಿದ್ದಾರೆ. ರೈತರು ಪೂರೈಸುವ ಕಬ್ಬಿನ ಹಣವನ್ನು ಮಧ್ಯವರ್ತಿಗಳಿಲ್ಲದೆ ನೇರವಾಗಿ ಆಯಾ ರೈತರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲಾಗುತ್ತದೆ ಎಂದರು. ಕಾರ್ಖಾನೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಅಮಿತ್ ನಲವಡೆ, ಮುದ್ದೇಬಿಹಾಳ ವಿಭಾಗದ ಅಧಿಕಾರಿ ಹಣಮಂತ ಹುಲ್ಲೂರ ಇದ್ದರು.