ಬೇಸಿಗೆ ಆರಂಭದಲ್ಲೇ ಉತ್ತರ ಕರ್ನಾಟಕ ಧಗಧಗ!

HN 23-1
Published on

ಹೀರಾನಾಯ್ಕ ಟಿ. ವಿಜಯಪುರ
ಬೇಸಿಗೆ ಆರಂಭದಲ್ಲೇ ಬಿಸಿಲಿನ ತಾಪ ಹೆಚ್ಚಾಗುತ್ತಿದ್ದು, ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಅಧಿಕ ಉಷ್ಣಾಂಶ ದಾಖಲಾಗಿ ಜನರು ಮನೆಯಿಂದ ಹೊರ ಬರುವುದೇ ದುಸ್ತರವಾಗಿದೆ.
ಕಲಬುರಗಿಯಲ್ಲಿ 36.20 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾದರೆ, ವಿಜಯಪುರದಲ್ಲಿ 34.70 ಡಿಗ್ರಿ ಸೆಲ್ಸಿಯಸ್‌ನಷ್ಟು ಗರಿಷ್ಠ ತಾಪಮಾನ ದಾಖಲಾಗಿದೆ. ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಾದ ರಾಯಚೂರು 32.80, ಬಳ್ಳಾರಿ 32.90, ಕೊಪ್ಪಳ 31.50, ಬೀದರ್ 32.50, ಬೆಳಗಾವಿ 33.40, ಗದಗ 33.90, ಹಾವೇರಿ 32.80, ಧಾರವಾಡ 32.20 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ. ಇನ್ನುಳಿದಂತೆ ಚಿತ್ರದುರ್ಗ 31.50, ದಾವಣಗೆರೆ 34.30, ಶಿವಮೊಗ್ಗ 34, ಚಾಮರಾಜನಗರ 33.10, ಮೈಸೂರು 31.30, ಮಂಡ್ಯ 31.10, ಹಾಸನ 32, ರಾಮನಗರ 31.40, ಬೆಂಗಳೂರು ನಗರ 32, ಬೆಂಗಳೂರು ಗ್ರಾಮಾಂತರ 31.20, ಕೋಲಾರದಲ್ಲಿ 30.60 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿರುವುದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಅಂಕಿ-ಅಂಶದಿಂದ ತಿಳಿದು ಬಂದಿದೆ.

ಬಿಸಿಲಿಗೆ ಬಸವಳಿದ ಜನತೆ

ಬಿಸಿಲಿಗೆ ಜನರು ಮನೆ, ಕಚೇರಿ ಬಿಟ್ಟು ಹೊರ ಬರುವುದು ಕಷ್ಟವಾಗುತ್ತಿದೆ. ನೆತ್ತಿ ಸುಡುವ ರಣಬಿಸಿಲಿಗೆ ಜನತೆ ಪರಿತಪಿಸುವಂತಾಗಿದೆ. ವಾಹನ ಸವಾರರು ರಸ್ತೆಗಿಳಿಯಲು ಹಿಂದೇಟು ಹಾಕುತ್ತಿದ್ದಾರೆ. ಮಧ್ಯಾಹ್ನ 12 ಗಂಟೆಯಿಂದ ಸಂಜೆ 4 ಗಂಟೆವರೆಗೆ ರಸ್ತೆಗಳಲ್ಲಿ ವಾಹನ ಸಂಚಾರ ಕಡಿಮೆಯಾಗಿ ರಸ್ತೆಗಳೆಲ್ಲ ಬಿಕೋ ಎನ್ನುತ್ತವೆ. ಇನ್ನು ಜನರು ದಣಿವು ನಿವಾರಿಸಿಕೊಳ್ಳಲು ಕಲ್ಲಂಗಡಿ ಹಣ್ಣು, ಕರಬೂಜ ಇನ್ನಿತರ ತಂಪು ಪಾನೀಯದ ಮೊರೆ ಹೋಗುತ್ತಿದ್ದಾರೆ.

ನೀರಿನ ಸಂಗ್ರಹ ಪ್ರಮಾಣ ಇಳಿಕೆ

ಈಗಾಗಲೇ ಬೇಸಿಗೆ ಪ್ರಾರಂಭಗೊಂಡಿದ್ದು, ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ನೀರಿನ ಸಂಗ್ರಹದ ಪ್ರಮಾಣ ಕೂಡ ಇಳಿಕೆಯಾಗುತ್ತಿದೆ. ಆಲಮಟ್ಟಿ ಜಲಾಶಯದಲ್ಲಿ ಜ.1ರಂದು 102.262 ಟಿಎಂಸಿ ನೀರು ಲಭ್ಯವಿತ್ತು. ತದನಂತರ ಜನವರಿ ಅಂತ್ಯಕ್ಕೆ 79.552 ಟಿಎಂಸಿಗೆ ಇಳಿಕೆಯಾಗಿದೆ. ಪ್ರಸ್ತುತ 62 ಟಿಎಂಸಿ ನೀರಿದ್ದು, ಇನ್ನೂ ಮೂರು ತಿಂಗಳು ಬೇಸಿಗೆ ಇರುವುದರಿಂದ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆಗಳು ಹೆಚ್ಚಾಗಿವೆ. ವಿಜಯಪುರ ಜಿಲ್ಲೆಯ ಗಡಿಹಾಳ, ಬಳವಾಟ, ಐನಾಪುರ ಮಹಲ್ ಸೇರಿ ಇನ್ನಿತರ ಕಡೆಗಳಲ್ಲಿ ಈಗಾಗಲೇ ಜನರು ನೀರಿಗಾಗಿ ಖಾಲಿ ಕೊಡ ಪ್ರದರ್ಶಿಸಿ ಪ್ರತಿಭಟನೆ ನಡೆಸಿದ್ದಾರೆ.

ಕಳೆದ ವರ್ಷ ವಿಜಯಪುರ ಜಿಲ್ಲೆಯಲ್ಲಿ 42 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಈ ಬಾರಿಯೂ ಅಧಿಕ ಉಷ್ಣಾಂಶ ದಾಖಲಾಗುವ ಸಾಧ್ಯತೆ ಇದೆ. ಮೋಡ ಚದುರಿದ ವಾತಾವರಣ ತಾಪಮಾನ ಹೆಚ್ಚಳಕ್ಕೆ ಕಾರಣವಾಗಿದೆ.
ಡಾ.ಪಿ.ಎಸ್.ಪತ್ತಾರ, ಹವಾಮಾನ ತಜ್ಞ
, ಪ್ರಾದೇಶಿಕ ಕೃಷಿ ಸಂಶೋಧನಾ ಕೇಂದ್ರ, ವಿಜಯಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net