ನೀರಿನ ಸ್ವಚ್ಛತೆಗೆ ವಿಶೇಷ ಗಮನ ನೀಡಿ

vjp-22-5
Published on

ವಿಜಯಪುರ: ಸ್ಮಾರಕಗಳ ನಗರ ವಿಜಯಪುರದಲ್ಲಿ ತಾಜಬಾವಡಿ ಸೇರಿ ಅನೇಕ ಬಾವಡಿ, ಕೆರೆಗಳಿದ್ದು, ಅವುಗಳನ್ನು ಸ್ವಚ್ಛಗೊಳಿಸಿ ಸಾರ್ವಜನಿಕರಿಗೆ ಬಳಕೆಯಾಗುವಂತೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ವೆಂಕಣ್ಣ ಬಿ. ಹೊಸಮನಿ ಹೇಳಿದರು.

ನಗರದ ಕಾಕಾ ಕಾರ್ಖಾನೆ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ನ್ಯಾಯವಾದಿಗಳ ಸಂಘ, ಸ್ಪಂದನಾ ಸ್ವಯಂಸೇವಾ ಸಂಸ್ಥೆ ಮತ್ತು ಜೈನ್ ಇರಿಗೇಶನ್ ಸಿಸ್ಟಮ್ ಲಿಮಿಟೆಡ್ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿಶ್ವ ಜಲ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಗಿಡಗಳನ್ನು ನೆಡುವ ಮೂಲಕ ಶುದ್ಧ ಗಾಳಿ, ಶುದ್ಧ ನೀರು ಮತ್ತು ಉತ್ತಮ ಪರಿಸರ ನಿರ್ಮಿಸಿ ಮುಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡಬೇಕು. ಜೂನ್ 5 ರಂದು ಎಲ್ಲ ಇಲಾಖೆಗಳು ಸೇರಿ ಪರಿಸರ ಮಾಲಿನ್ಯ ತಡೆಗಟ್ಟಲು ಗಿಡಗಳನ್ನು ನೆಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.

ಅಭಿಯಂತರ ಎಸ್.ಎಸ್. ಪಟ್ಟಣಶೆಟ್ಟಿ ಮಾತನಾಡಿ, ಪ್ರತಿಯೊಂದು ಗ್ರಾಮಗಳಲ್ಲಿ ಜಲ ಸಂರಕ್ಷಣೆಗೆ ಸಂಬಂಧಿಸಿದಂತೆ ನಾಗರಿಕರಿಗೆ ಅರಿವು ಮೂಡಿಸಬೇಕು. ಸಮೂಹ ಮಾಧ್ಯಮದವರು ನೀರಿನ ಬಗ್ಗೆ ವ್ಯಾಪಕ ಜಾಗೃತಿ ಮೂಡಿಸಬೇಕೆಂದರು.
ಪ್ರಾದೇಶಿಕ ಕೃಷಿ ಸಂಶೋಧನಾ ಕೇಂದ್ರ ಸಹ ಸಂಶೋಧನಾ ನಿರ್ದೇಶಕ ಅಶೋಕ ಎಸ್. ಸಜ್ಜನ್ ಮಾತನಾಡಿ, ಉಸಿರು ಬಂದಾಗಿನಿಂದ ಉಸಿರು ಹೋಗುವವರೆಗೂ ನೀರು ಅವಶ್ಯಕವಿದೆ. ನಾವೆಲ್ಲರೂ ನೀರಿನ ಬಗ್ಗೆ ಲಕ್ಷೃ ವಹಿಸಿದರೆ ನಮ್ಮ ಮುಂದಿನ ಪೀಳಿಗೆಗೆ ನೀರು ದೊರೆಯುತ್ತದೆ. ನಿರ್ಲಕ್ಷಿಸಿದರೆ ನೀರಿನ ಸಮಸ್ಯೆ ಎದುರಿಸಬೇಕಾಗುವುದು ಎಂದರು.

ಸಿಕ್ಯಾಬ್ ಕಾಲೇಜ್ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಎಸ್.ಜೆ. ಅರವೇಕರ್, ಬಿಎಲ್ಡಿಇ ಸಂಸ್ಥೆ ಸಹಾಯಕ ಪ್ರಾಧ್ಯಾಪಕಿ ಅನುರಾಧ ಎಸ್. ಟಂಕಸಾಲಿ ಮತ್ತು ಮಹಾನಗರ ಪಾಲಿಕೆ ವಕೀಲರು ಮತ್ತು ಕಾನೂನು ಸಲಹೆಗಾರ ಐ.ಎಂ. ಇಂಡಿಕರ ಮತ್ತಿತರರಿದ್ದರು.

ಉಮೇಶ ಪಂಚಾಳ ಮತ್ತು ರಾಹುಲ್ ಪಂಚಾಳ ಪ್ರಾರ್ಥಿಸಿದರು. ಸಹಾಯಕ ಕಾರ್ಯಪಾಲಕ ಅಭಿಯಂತರ ಬಿ.ವೈ. ನದಾಫ್ ನಿರೂಪಿಸಿದರು. ಸ್ಪಂದನ ಏಜೆನ್ಸಿ ಎಂ.ಎಸ್. ದೇವರ ಸ್ವಾಗತಿಸಿ, ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net