

ವಿಜಯಪುರ: ಜಗತ್ತಿನಲ್ಲಿ ಪುರುಷರು ಹಾಗೂ ಸ್ತ್ರೀಯರು ಸರಿಸಮಾನರು ಎಂಬ ಭಾವನೆ ಎಲ್ಲರಲ್ಲಿ ಮೂಡಿದಾಗ ಮಾತ್ರ ಹೆಣ್ಣು ಈ ಜಗದ ಕಣ್ಣಾಗಲು ಸಾಧ್ಯ ಎಂದು ನಗರದ ಎಪಿಎಂಸಿ ಪೊಲೀಸ್ ಠಾಣೆಯ ಸಬ್‌ಇನ್ಸಪೆಕ್ಟರ್ ಪ್ರೇಮಾ ಕೂಚಬಾಳ ಹೇಳಿದರು.
ನಗರದ ವಿದ್ಯಾವರ್ಧಕ ಸಂಘದ ಕಲಾ, ವಾಣಿಜ್ಯ ಮತ್ತು ಬಿಸಿಎ ಮಹಾವಿದ್ಯಾಲಯದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ದಿನಗಳಲ್ಲಿ ಮಹಿಳೆ ಮೇಲೆ ದೌರ್ಜನ್ಯಗಳು ಹೆಚ್ಚುತ್ತಿದ್ದು, ಅದನ್ನು ಎದುರಿಸುವ ಶಕ್ತಿ ನಮ್ಮಲ್ಲಿ ಬರಬೇಕಾಗಿದೆ. ಕೇವಲ ನಾನು ಅಬಲೆ ಎನ್ನುತ್ತ ತಲೆ ಮೇಲೆ ಕೈಹೊತ್ತು ಕುಳಿತರೆ ಬದುಕು ನಡೆಸುವುದು ದುಸ್ತರವಾಗುತ್ತದೆ.
ವಿದ್ಯಾರ್ಥಿ ಜೀವನ ಎನ್ನುವುದು ಸಾಧನೆಗೆ ಸಿಕ್ಕಿರುವ ಅವಕಾಶವಾಗಿದ್ದು, ಮೊದಲು ಸಾಧನೆಯಡೆಗೆ ಹೋಗಬೇಕೆ ವಿನಃ ಮೊಬೈಲ್ ಎಂಬ ಮಾಯಾ ಪ್ರಪಂಚದಲ್ಲಿ ಕಳೆದುಹೋಗಬಾರದು. ಮಹಿಳೆ ಯಾವುದಕ್ಕೂ ಕಡಿಮೆ ಇಲ್ಲ ಎಂಬುದನ್ನು ಸಾಧನೆ ಮೂಲಕ ತೋರಿಸಬೇಕು. ಅದೇ ನಾವು ಈ ಜಗತ್ತಿಗೆ ನೀಡುವ ದೊಡ್ಡ ಕೊಡುಗೆ ಎಂದವರು ಹೇಳಿದರು.
ಡಾ.ಪ್ರಾರ್ಥನಾ ದರಬಾರ್ ಮಾತನಾಡಿ, ಅಂತಾರಾಷ್ಟ್ರೀಯ ಮಹಿಳಾ ದಿನ ಆಚರಿಸುವ ಮೂಲಕ ಹೆಣ್ಣಿನ ಕುರಿತು ಹೊಗಳುವ ಬದಲು ಪ್ರತಿಯೊಬ್ಬ ಹೆಣ್ಣುಮಗಳು ಕೂಡ ತನ್ನ ಶಕ್ತಿಯನ್ನು ಅರಿತು, ತಾನು ಅಬಲೆಯಲ್ಲ ಸಬಲೆ ಎನ್ನುವುದನ್ನು ಸಾಧಿಸಿ ತೋರಿಸಿದ್ದೇ ಆದರೆ ನಿತ್ಯ ಮಹಿಳಾ ದಿನ ಆಚರಿಸಬಹುದು ಎಂದು ಹೇಳಿದರು.
ವಿದ್ಯಾ ವರ್ಧಕ ಸಂಘದ ಅಧ್ಯಕ್ಷ ರಾಜೇಶ ದರಬಾರ್, ಸಮನ್ವಯ ಅಧಿಕಾರಿ ಡಾ.ವಿ.ಬಿ. ಗ್ರಾಮಪುರೋಹಿತ, ಪ್ರಾಚಾರ್ಯ ಜಿ.ಎಚ್. ಮಣ್ಣೂರ, ಉಪನ್ಯಾಸಕ ಸುನೀಲಕುಮಾರ ಯಾದವ, ಸೀಮಾ ಪಾಟೀಲ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. ಕಾಲೇಜಿನ ಬೋಧಕ-ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.
ಆರತಿ ಬಿಸ್ಟಗೊಂಡ ಸ್ವಾಗತಿಸಿದರು. ನಾಗಮ್ಮ ಗಬಸಾವಳಗಿ ಪರಿಚಯಿಸಿದರು. ಐಶ್ವರ್ಯ ದೇಸಾಯಿ ಹಾಗೂ ಸಾಧನಾ ಬಂಢಾರಕವಠೆ ನಿರೂಪಿಸಿದರು. ಶ್ವೇತಾ ಝಿಂಗಾಡೆ ವಂದಿಸಿದರು.
ಚನ್ನಮ್ಮ, ಹೊನ್ನಮ್ಮ, ಓಬವ್ವರ ಉದಾಹರಣೆ ಕೇಳಿ ಸುಮ್ಮನೆ ಕುಳಿತರೆ ಸಾಕಾಗುವುದಿಲ್ಲ. ಬದಲಿಗೆ ನಾವು ಅವರಂತೆ ಗಟ್ಟಿಗಿತ್ತಿಯರಾದಾಗ ಮಾತ್ರ ಎಲ್ಲವನ್ನು ಎದುರಿಸಬಹುದು. ಹೆಣ್ಣು ಪುರುಷನಿಗಿಂತ ಸಬಲಳು. ಆ ಸತ್ಯವನ್ನು ಒಪ್ಪಿಕೊಳ್ಳದ ನಾವು, ನಮ್ಮ ಶಕ್ತಿ ಮೇಲೆ ಅಪನಂಬಿಕೆ ಹೊಂದುತ್ತಿದ್ದೆವೆ. ಇನ್ನಾದರೂ ಅದರಿಂದ ಹೊರಬನ್ನಿ.
ಪ್ರೇಮಾ ಕುಚಬಾಳ, ಪೊಲೀಸ್ ಸಬ್‌ಇನ್ಸಪೆಕ್ಟರ್, ಎಪಿಎಂಸಿ ಠಾಣೆ