ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸರ್ಕಾರಕ್ಕೆ ಮನವಿ

VMS 26-4
Published on

ವಿಜಯಪುರ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಕ್ಷರದಾಸೋಹ ಕಾರ್ಮಿಕರು ಮಂಗಳವಾರ ಅಪರ ಜಿಲ್ಲಾಧಿಕಾರಿ ಡಾ.ಔದ್ರಾಮ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಎಚ್.ಟಿ. ಮಾತನಾಡಿ, ಲಾಕ್‌ಡೌನ್ ಸಂದರ್ಭದಲ್ಲಿ ದುಡಿದ ಅಕ್ಷರ ದಾಸೋಹ ಕಾರ್ಮಿಕರಿಗೆ ಶಾಲೆ ಪುನರಾರಂಭ ಆಗುವವರೆಗೂ ಗೌರವಧನ ಪಾವತಿಸಬೇಕು. ಅಕ್ಷರದಾಸೋಹ ಕಾರ್ಮಿಕರಿಗೆ ವಿಶೇಷ ಅನುದಾನ ಬಿಡುಗಡೆ ಮಾಡಬೇಕು. ಮುರಾರ್ಜಿ ದೇಸಾಯಿ ಶಾಲೆಗಳಲ್ಲಿ ಮಾಡಿದಂತೆ, ರಾಜ್ಯ ಸರ್ಕಾರಿ ಶಾಲೆಗಳಲ್ಲಿ ಉಳಿದ ಆಹಾರ-ದಿನಸಿ ಸಾಮಾನುಗಳನ್ನು ಅಕ್ಷರ ದಾಸೋಹ ಕಾರ್ಮಿಕರಿಗೆ ವಿತರಿಸಬೇಕು. ಅಕ್ಷರ ದಾಸೋಹ ಕಾರ್ಮಿಕರಿಗೆ ಅಗತ್ಯ ದಿನಸಿ ವಸ್ತುಗಳ ರೇಷನ್‌ಕಿಟ್ ಒದಗಿಸಬೇಕು ಎಂಬಿತ್ಯಾದಿ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು.
ಅಕ್ಷರ ದಾಸೋಹ ಕಾರ್ಮಿಕರ ಜಿಲ್ಲಾ ಕಾರ್ಯದರ್ಶಿ ಶಶಿಕಲಾ ಮ್ಯಾಗೇರಿ ಮಾತನಾಡಿ, ರಾಜ್ಯದಲ್ಲಿ ಶಾಲೆಗಳು ರಜೆ ಘೋಷಿಸಿದಾಗಲೂ ಅಕ್ಷರ ದಾಸೋಹ ಕಾರ್ಮಿಕರಿಗೆ ಮನೆಮನೆಗೆ ಆಹಾರಧಾನ್ಯ ತಲುಪಿಸುವ ಕೆಲಸಕ್ಕೆ ನೇಮಿಸಲಾಗಿದೆ. ಸಾಮಾನ್ಯವಾಗಿ ಅಕ್ಷರ ದಾಸೋಹ ಕಾರ್ಮಿಕರು ಬೇಸಿಗೆ ರಜೆಯಲ್ಲಿ ಗೌರವಧನ ಇಲ್ಲದಿರುವುದರಿಂದ ಬೇರೆ ರೀತಿಯ ಕೂಲಿ ಕೆಲಸಗಳಲ್ಲಿ ತೊಡಗಿ ತಮ್ಮ ಜೀವನ ನಿರ್ವಹಣೆ ಮಾಡಿಕೊಳ್ಳುತ್ತಿದ್ದರು. ಆದರೆ, ಪ್ರಸ್ತುತ ಸಂದರ್ಭದಲ್ಲಿ ಯಾವುದೇ ಆರ್ಥಿಕ ಚಟುವಟಿಕೆ ಇಲ್ಲದೇ ಇರುವುದರಿಂದ ಅವರ ಹಾಗೂ ಅವರ ಕುಟುಂಬದ ದುಡಿಯುವ ಕೈಗಳಿಗೂ ಕೆಲಸ ಇಲ್ಲದಾಗಿವೆ. ಇದರಿಂದಾಗಿ ಈ ಕುಟುಂಬಗಳು ಜೀವನ ನಿರ್ವಹಣೆ ಇಲ್ಲದೇ ಅನಿವಾರ್ಯವಾಗಿ ಬೀದಿಗೆ ಬೀಳುವ ಆತಂಕದಲ್ಲಿ ದಿನ ಕಳೆಯುತ್ತಿದ್ದಾರೆ ಎಂದರು.
ಸುನೀಲ ಸಿದ್ರಾಮಶೆಟ್ಟಿ, ಲಕ್ಷ್ಮಿ ಲಕ್ಷೆಟ್ಟಿ, ರಾಜಬಿ ಚಪ್ಪರಬಂದ್ ಮತ್ತಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net