ಅಕ್ರಮ ತಡೆಗೆ ಆಧಾರ್ ಲಿಂಕ್ ಅವಶ್ಯ

VJP Shashikala Jolle
Published on

ವಿಜಯಪುರ: ಮತದಾರರ ಗುರುತಿನ ಚೀಟಿ ಅಕ್ರಮಕ್ಕೆ ಕಡಿವಾಣ ಹಾಕಲು ಆಧಾರ್ ಲಿಂಕ್ ಅವಶ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

ಗಡಿಭಾಗದಲ್ಲಿ ಅಕ್ರಮ ಮತದಾರರ ಹಾವಳಿ ಹೆಚ್ಚುತ್ತಿರುವ ಬಗ್ಗೆ ಬುಧವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅಕ್ರಮ ಮತದಾರರ ಹಾವಳಿ ಬಗ್ಗೆ ಈವರೆಗೆ ಗಮನಕ್ಕಿರಲಿಲ್ಲ. ಈಗಾಗಲೇ ಸಂಸದರು ಸಹ ಈ ಕುರಿತು ಚುನಾವಣೆ ಆಯೋಗಕ್ಕೆ ಪತ್ರ ಬರೆದಿದ್ದರೆಂದು ತಮ್ಮಿಂದ ತಿಳಿದು ಬಂದಿದೆ. ಅದನ್ನಾಧರಿಸಿ ಮತದಾರರ ಸಮೀಕ್ಷೆ ನಡೆಸುವ ಜೊತೆಗೆ ಆಧಾರ್ ಲಿಂಕ್ ಮಾಡಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಗ್ರಾಪಂ ಚುನಾವಣೆ ಶಾಂತಿ ಹಾಗೂ ಸುವ್ಯವಸ್ಥಿತವಾಗಿ ನಡೆಸಲು ಸಹಕರಿಸಬೇಕು. ಗ್ರಾಮೀಣರು ಹೆಚ್ಚು ಮತದಾನ ಮಾಡಬೇಕು. ಆ ಮೂಲಕ ಚುನಾವಣೆ ಯಶಸ್ವಿಯಾಗಿ ನೆರವೇರಲು ಸಹಕರಿಸಬೇಕೆಂದರು.

ಸಾಕಷ್ಟು ಸವಾಲುಗಳ ಮಧ್ಯೆ ಸರ್ಕಾರ ಜನಪರ ಆಡಳಿತ ನೀಡುತ್ತಿದೆ. ಕರೊನಾ, ನೆರೆ ಹಾಗೂ ಅತಿವೃಷ್ಟಿ ನಡುವೆಯೂ ರಾಜ್ಯದ ಜನತೆಗೆ ನ್ಯಾಯ ಒದಗಿಸುವ ಕೆಲಸವನ್ನು ಸರ್ಕಾರ ಮಾಡಿದೆ. ಭೀಮಾ ಮತ್ತು ಡೋಣಿ ನದಿ ತೀರದಲ್ಲಿ ನೆರೆ ಮತ್ತು ಅತಿವೃಷ್ಟಿಯಿಂದಾಗಿ 2.33 ಲಕ್ಷ ಹೆಕ್ಟೇರ್ ಬೆಳೆ ಹಾನಿಯಾಗಿತ್ತು. ಪರಿಹಾರ ಕಾರ್ಯ ಪ್ರಗತಿಯಲ್ಲಿದೆ ಎಂದರು.

ಮಹಾನಗರ ಪಾಲಿಕೆ ಚುನಾವಣೆಗೆ ಸಂಬಂಧಿಸಿದಂತೆ ಹೈಕೋರ್ಟ್ ನಿರ್ದೇಶನ ನೀಡಿದರೂ ಸರ್ಕಾರ ಯಾವುದೇ ಕ್ರಮಕ್ಕೆ ಮುಂದಾಗದಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಜೊಲ್ಲೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಇನ್ನು ಉದ್ಯೋಗ ಖಾತ್ರಿ ಯೋಜನೆಯಡಿ ಸಾಕಷ್ಟು ಉದ್ಯೋಗವಕಾಶ ಕಲ್ಪಿಸುವ ಮೂಲಕ ಗುಳೆ ತಡೆಯುವುದಾಗಿ ತಿಳಿಸಿದರು. ನಿಗಮ ಮಂಡಳಿಗೆ ಪಕ್ಷದ ಪ್ರಾಮಾಣಿಕ ಕಾರ್ಯಕರ್ತರಿಗೆ ಅವಕಾಶ ನೀಡುವ ಬದಲು ಪಕ್ಷದಿಂದ ಹೊರ ಹೋದವರಿಗೂ ಅವಕಾಶ ಕಲ್ಪಿಸಿದ ಬಗ್ಗೆ ಅಸಮಾಧಾನ ಸ್ಫೋಟಗೊಂಡಿದೆಯಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸುತ್ತಾ, ಬೇರೆ ಪಕ್ಷಗಳಿಂದ ಬಂದ ಕೆಲವರಿಗೆ ಅನಿವಾರ್ಯವಾಗಿ ಅವಕಾಶ ನೀಡಲಾಗಿದೆ. ಇನ್ನುಳಿದಂತೆ ನಿಷ್ಟಾವಂತರಿಗೆ ಅವಕಾಶ ನೀಡಿದ್ದಾಗಿ ತಿಳಿಸಿದರಲ್ಲದೇ ಪಕ್ಷ ವಿರೋಧಿಸಿ ಹೊರ ನಡೆದವರಿಗೆ ನಿರ್ದೇಶಕರನ್ನಾಗಿಸಿದ ಕುರಿತ ಪ್ರಶ್ನೆಗೆ ಸಮರ್ಪಕ ಉತ್ತರ ನೀಡಲಿಲ್ಲ. ವಿಪ ಸದಸ್ಯ ಅರುಣ ಶಹಾಪುರ, ಮಾಜಿ ಶಾಸಕ ಎಸ್.ಕೆ. ಬೆಳ್ಳುಬ್ಬಿ, ಆರ್.ಎಸ್. ಪಾಟೀಲ ಕೂಚಬಾಳ, ದಯಾಸಾಗರ ಪಾಟೀಲ, ಶಿವರುದ್ರ ಬಾಗಲಕೋಟ, ಅಶೋಕ ಅಲ್ಲಾಪುರ, ವಿಜಯಕುಮಾರ ಜೋಷಿ ಮತ್ತಿತರರಿದ್ದರು.

ಸಚಿವ ಸ್ಥಾನಕ್ಕೆ ಲಾಬಿ ಮಾಡಿಲ್ಲ

ಯಾವುದೇ ಕಾರಣಕ್ಕೂ ನಾನು ಸಚಿವ ಸ್ಥಾನಕ್ಕೆ ಲಾಬಿ ಮಾಡಿಲ್ಲ ಎಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

ಸಚಿವ ಸ್ಥಾನ ಉಳಿಸಿಕೊಳ್ಳಲು ಯಾವುದೇ ತರಹ ಲಾಬಿಗೆ ಮುಂದಾಗಿಲ್ಲ. ನಾನು ದೆಹಲಿಗೆ ಹೋಗಿದ್ದು ನನ್ನ ಇಲಾಖೆಯ ಕೆಲಸಕ್ಕೆ ಹೊರತು ಲಾಬಿ ಮಾಡಲು ಅಲ್ಲ. ಲಾಬಿ ಮಾಡುವ ಅವಶ್ಯಕತೆ ನನಗೆ ಬಂದಿಲ್ಲ. ನಾನೇಕೆ ಲಾಬಿ ಮಾಡಬೇಕು ಎಂದು ಮರು ಪ್ರಶ್ನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net