ವಿಜಯಪುರ -ಉಮರಜ ಮೊಕ್ಕಾಂ ಬಸ್ ಪುನರಾರಂಭ

RVT 5-1
Published on

ರೇವತಗಾಂವ: ಎಂಟು ತಿಂಗಳಿಂದ ಸ್ಥಗಿತಗೊಂಡಿದ್ದ ವಿಜಯಪುರ- ಉಮರಜ ಮೊಕ್ಕಾಂ ಬಸ್‌ನ್ನು ಜಿಪಂ ಅಧ್ಯಕ್ಷೆ ಸುಜಾತ ಕಳ್ಳಿಮನಿಯವರು 24 ಗಂಟೆಯೊಳಗೆ ಪುನರಾರಂಭಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮೊಕ್ಕಾಂ ಬಸ್ ಸ್ಥಗಿತಗೊಂಡಿದ್ದರಿಂದ ವಿದ್ಯಾರ್ಥಿಗಳಿಗೆ ಹಾಗೂ ಗ್ರಾಮೀಣರಿಗೆ ತೀವ್ರ ತೊಂದರೆ ಆಗುತ್ತಿದ್ದು, ಕೂಡಲೇ ಪುನಃ ಬಸ್ ಆರಂಭಿಸಬೇಕೆಂದು ಉಮರಜದಲ್ಲಿ ಗ್ರಾಮ ವಾಸ್ತವ್ಯ ಮಾಡಿದ್ದ ವೇಳೆ ಜಿಪಂ ಅಧ್ಯಕ್ಷೆ ಸುಜಾತ ಕಳ್ಳಿಮನಿ ಅವರಿಗೆ ಗ್ರಾಮಸ್ಥರು ಮನವಿ ಮಾಡಿದ್ದರು. ಮನವಿಗೆ ಸ್ಪಂದಿಸಿದ ಅವರು 24 ಗಂಟೆಯೊಳಗೆ ಬಸ್ ಸಂಚಾರ ಆರಂಭಿಸುವುದಾಗಿ ತಿಳಿಸಿದ್ದರು. ಅದರಂತೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳನ್ನು ಸಂಪರ್ಕಿಸಿ ಅವರ ಮನವೊಲಿಸಿ ಸ್ಯಾಟ್‌ಲೈಟ್ ಬಸ್ ನಿಲ್ದಾಣದಲ್ಲಿ ಬುಧವಾರ ಸಂಜೆ 5 ಗಂಟೆಗೆ ವಿಜಯಪುರ- ಉಮರಜ ಬಸ್‌ಗೆ ಹಸಿರು ನಿಶಾನೆ ತೋರಿ ಸಂಚಾರಕ್ಕೆ ಚಾಲನೆ ನೀಡಿದರು. ವಿಜಯಪುರದಿಂದ ಉಮರಜ ಗ್ರಾಮಕ್ಕೆ ಬಸ್ ಆಗಮಿಸಿ ಮೊಕ್ಕಾಂ ಹೂಡಿದ್ದರಿಂದ ಸಂತಸಗೊಂಡ ಗ್ರಾಮಸ್ಥರು, ಗುರುವಾರ ಬೆಳಗ್ಗೆ ಬಸ್ ಚಾಲಕ ಹಾಗೂ ನಿರ್ವಾಹಕರಿಗೆ ಸನ್ಮಾನಿಸಿ ವಿಜಯಪುರಕ್ಕೆ ಬೀಳ್ಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net