ಉದ್ಯಾನ ನಿರ್ವಹಣೆಗೆ ಕರೊನಾ ಕಂಟಕ

VJP_Udyan
Published on

ವಿಜಯಪುರ: ನಗರದ ವಿವಿಧ ಬಡಾವಣೆಗಳಲ್ಲಿ ಅಮೃತ ಯೋಜನೆಯಡಿ ನಿರ್ಮಿಸಿದ ಸುಂದರ ಉದ್ಯಾನಳಿಗೂ ಕರೊನಾ ಕಂಟಕ ಆವರಿಸಿದ್ದು ನಿರ್ವಹಣೆ ಕೊರತೆ ಎದ್ದು ಕಾಣುತ್ತಿದೆ.
ಭಾರತ ಲಾಕ್‌ಡೌನ್‌ಗಿಂತಲೂ ಮುಂಚಿತವಾಗಿಯೇ ಉದ್ಯಾನಗಳು ಬಿಸಿಲಿನ ಹೊಡೆತಕ್ಕೆ ಬಳಲಿದ್ದು ಇದೀಗ ಹಸಿರೆಲೆಗಳು ಸಂಪೂರ್ಣ ಹಳದಿ ಬಣ್ಣಕ್ಕೆ ತಿರುಗಿವೆ. ಹೀಗಾಗಿ ಕೋಟ್ಯಂತರ ರೂ. ವೆಚ್ಛದಲ್ಲಿ ನಿರ್ಮಿಸಿದ ಸುಂದರ ಉದ್ಯಾನಗಳು ಕಣ್ಮುಂದೆಯೇ ಒಣಗಿ ಹೋಗುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಉದ್ಯಾನಗಳ ವಿವರ

ಐಶ್ವರ್ಯ ನಗರ, ಆನಂದ ನಗರ, ಬಿಎಲ್‌ಡಿಇ ಇಂಜಿನಿಯರಿಂಗ್ ಕಾಲೇಜಿನ ಹಿಂದುಗಡೆ, ಆದರ್ಶ ನಗರದಲ್ಲಿ ತಲಾ 50 ಲಕ್ಷ ರೂ.ವೆಚ್ಚದಲ್ಲಿ ಉದ್ಯಾನ ನಿರ್ಮಿಸಲಾಗಿದೆ. ಆಶ್ರಮ ಕಾಲನಿಯಲ್ಲಿ 1.50 ಕೋಟಿ ರೂ. ವೆಚ್ಛದಲ್ಲಿ ಉದ್ಯಾನ ನಿರ್ಮಿಸಲಾಗಿದೆ. ಉದ್ಯಾನ ನಿರ್ಮಿಸಿದ ಒಂದು ವರ್ಷದವರೆಗೆ ಗುತ್ತಿಗೆದಾರರೇ ನಿರ್ವಹಣೆ ಮಾಡಬೇಕೆಂಬ ಶರತ್ತಿದೆ. ಆದರೆ, ಗುತ್ತಿಗೆದಾರರು ಇತ್ತ ತಿರುಗಿಯೂ ನೋಡುತ್ತಿಲ್ಲ ಎಂಬುದು ಸ್ಥಳೀಯರ ಆರೋಪ.

ಸಾರ್ವಜನಿಕರಿಂದ ನೀರು

ಬಡಾವಣೆಯ ಸುತ್ತಲಿನ ನಿವಾಸಿಗಳು ಮನೆ ಮುಂದೆ ನೀರು ಬಂದಾಗ ಉದ್ಯಾನಕ್ಕೆ ನೀರು ಹಾಯಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಅವರು ತಮ್ಮ ಮನೆ ಮುಂದಿನ ಸಸ್ಯಗಳಿಗೆ ಮಾತ್ರ ನೀರುಣಿಸುತ್ತಿದ್ದು ಸಂಪೂರ್ಣ ಉದ್ಯಾನಕ್ಕೆ ನೀರು ಹಾಯಿಸುವವರಿಲ್ಲದಾಗಿದೆ. ಉದ್ಯಾನಗಳಲ್ಲಿ ಸ್ಪಿಂಕಲರ್ ವ್ಯವಸ್ಥೆ ಇದ್ದು ನೀರು ಹಾಯಿಸುತ್ತಿರುವುದಾಗಿ ಅಧಿಕಾರಿಗಳು ತಿಳಿಸುತ್ತಾರೆ. ಆದರೆ, ಉದ್ಯಾನದ ಸ್ಥಿತಿ ನೋಡಿದರೆ ಕಳೆದೊಂದು ತಿಂಗಳಿನಿಂದ ಉದ್ಯಾನ ನೀರು ಕಂಡಂತೆ ಕಾಣುತ್ತಿಲ್ಲ.
ಇದೇ ತೆರನಾಗಿ ಬಿಡಿಎ ಉದ್ಯಾನಗಳು, ರಸ್ತೆ ಮಧ್ಯೆ ನೆಟ್ಟ ಸಸಿಗಳು ಸಹ ಒಣಗುತ್ತಿವೆ. ನಗರದ ಪ್ರಮುಖ ವೃತ್ತಗಳಲ್ಲಿರುವ ಸಸ್ಯಗಳು ಹಾಗೂ ಹುಲ್ಲು ಹಾಸು ಸಹ ಒಣಗುತ್ತಿವೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಲಾಕ್‌ಡೌನ್ ಅವಧಿ ಮುಗಿಯುವುದರೊಳಗೆ ಹಸಿರು ಮಾಯವಾಗಿರುತ್ತದೆ ಎಂಬುದು ಸ್ಥಳೀಯ ನಿವಾಸಿಗಳ ಅಂಬೋಣ.

ಎಲ್ಲ ಉದ್ಯಾನಗಳಿಗೂ ನೀರು ಹಾಯಿಸಲಾಗುತ್ತಿದೆ. ಸ್ಥಳೀಯರ ಆರೋಪ ಕೇಳಿ ಬಂದ ಕೂಡಲೇ ಅಧಿಕಾರಿಗಳನ್ನು ಕಳುಹಿಸಿ ಪರಿಶೀಲಿಸಲಾಗಿದೆ. ನೀರಿನ ಸಮಸ್ಯೆ ಇಲ್ಲ.
ಶ್ರೀಹರ್ಷಾ ಶೆಟ್ಟಿ, ಪಾಲಿಕೆ ಆಯುಕ್ತ

ಉದ್ಯಾನಗಳ ನಿರ್ವಹಣೆಗೆ ಸಂಬಂಧಿಸಿದಂತೆ ಅಧಿಕಾರಿಗಳ ಗಮನಕ್ಕೆ ಸಾಕಷ್ಟು ಬಾರಿ ತಂದರೂ ಪ್ರಯೋಜನವಾಗಿಲ್ಲ. ಈ ಹಿಂದೆ ಸಂಸದರೇ ಅಧಿಕಾರಿಗಳಿಗೆ ಹೇಳಿದ್ದಾರೆ. ಅದಾಗ್ಯೂ ಉದ್ಯಾನಗಳು ನಿರ್ವಹಣೆ ಕೊರತೆಯಿಂದ ಬಳಲುತ್ತಿವೆ. ಪಾಲಿಗೆಗೆ ಆಡಳಿತ ಮಂಡಳಿ ಇಲ್ಲದ ಕಾರಣ ಯಾರೂ ಕೇಳದಬಂತಾಗಿದೆ.
ರವೀಂದ್ರ ಲೋಣಿ, ಪಾಲಿಕೆ ಸದಸ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net