

ವಿಜಯಪುರ: ಇಂಡಿ ತಾಲೂಕಿನ ಹಿರೇಮಸಳಿ ಗ್ರಾಮ ಪಂಚಾಯಿತಿಯಲ್ಲಿ 15ನೇ ಹಣಕಾಸು ಯೋಜನೆ ಸೇರಿ ವಿವಿಧ ಯೋಜನೆಗಳಡಿ ಕಾಮಗಾರಿ ಕೈಗೊಳ್ಳದೆ ಲಕ್ಷ ಲಕ್ಷ ರೂ.ಬಿಲ್ ತೋರಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ತಾಪಂ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
ಇಒ ಸುನೀಲ ಮದ್ದಿನ ನೇತೃತ್ವದ ಅಧಿಕಾರಿಗಳ ತಂಡ ಭೇಟಿ ನೀಡಿ ಸತತ ಮೂರು ಗಂಟೆ ದಾಖಲೆ ಪರಿಶೀಲಿಸಿತು. ಪರಿಶೀಲನೆ ವೇಳೆ ಅನುದಾನ ಬಳಕೆಯಲ್ಲಿ ನಿಯಮಾವಳಿ ಉಲ್ಲಂಘಿಸಿದ್ದು ಕಂಡು ಬಂದಿದೆ. ಇದು ಮೊದಲ ಹಂತದ ತನಿಖೆಯಾಗಿದ್ದು, ಇನ್ನೂ ಮೂರ‌್ನಾಲ್ಕು ದಿನ ತನಿಖೆ ಮುಂದುವರಿಯಲಿದೆ. ಕೇವಲ 15ನೇ ಹಣಕಾಸು ಯೋಜನೆಯ ದಾಖಲೆ ಪರಿಶೀಲಿಸಲಾಗಿದ್ದು, ಇನ್ನೂ 13 ಮತ್ತು 14ನೇ ಹಣಕಾಸು ಯೋಜನೆ ಹಾಗೂ ಎನ್‌ಆರ್‌ಇಜಿ ಬಗ್ಗೆ ತನಿಖೆ ನಡೆಸಬೇಕಿದೆ ಎಂದು ಸುನೀಲ ಮದ್ದಿನ ಸುದ್ದಿಗಾರರಿಗೆ ತಿಳಿಸಿದರು.
ಗ್ರಾಪಂನಲ್ಲಿ ಅಪರಾತಪರಾ ಕಂಡು ಬಂದಿದೆ ಎಂದು ‘ವಿಜಯವಾಣಿ’ ಪತ್ರಿಕೆಯಲ್ಲಿ ಸರಣಿ ವರದಿ ಪ್ರಕಟಗೊಂಡಿತ್ತು. ಅಲ್ಲದೆ, ಗ್ರಾಮದ ನಬಿಲಾಲ ಸೌದಾಗರ ಎಂಬುವರು ಆರೋಪ ಮಾಡಿದ್ದರು. ಆ ಹಿನ್ನೆಲೆ ಜಿಪಂ ಸಿಇಒ ಗೋವಿಂದರೆಡ್ಡಿ ಅವರ ಆದೇಶದ ಮೇರೆಗೆ ಪಂಚಾಯಿತಿಗೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ಗ್ರಾಪಂ ಆಡಳಿತದಲ್ಲಿ ಲೋಪದೋಷ ಕಂಡು ಬಂದಿದ್ದು ನಿಜ. ಈ ಬಗ್ಗೆ ಸಮಗ್ರ ವರದಿ ತಯಾರಿಸಿ ಜಿಪಂ ಸಿಇಒ ಅವರಿಗೆ ಮನವಿ ಸಲ್ಲಿಸುವುದಾಗಿ ತಿಳಿಸಿದರು.
ದಾಖಲೆಗಳು ಸಮರ್ಪಕವಾಗಿಲ್ಲ
ತನಿಖೆ ವೇಳೆ ಪಿಡಿಒ ಬಳಿ ಸಮರ್ಪಕ ದಾಖಲೆಗಳು ಇರಲಿಲ್ಲ. ಫೋಟೊ, ಕೊಟೇಷನ್, ಬಿಲ್‌ಗಳು ಸರಿಯಾಗಿರಲಿಲ್ಲ. ಒಂದು ಕಾಮಗಾರಿ ಹೆಸರಲ್ಲಿ ಬೇರೆ ಕಾಮಗಾರಿ ಕೈಗೊಳ್ಳಲು ಮೇಲಧಿಕಾರಿಗಳ ಅನುಮತಿ ಪಡೆಯದೆ ಇರುವುದು, ನೀರು ನಿರ್ವಹಣೆ ಹೆಸರಲ್ಲಿ ಮಾಡಿರುವ ಬಿಲ್‌ಗೆ ಫೋಟೊ ಇಲ್ಲದೆ ಇರುವುದು, ರೇಷನ್‌ಗೆ ಬಳಸಿದ ಹಣಕ್ಕೆ ಕಬ್ಬಿಣ ಅಂಗಡಿಯ ಬಿಲ್ ತೋರಿಸಿದ್ದು ತನಿಖೆ ವೇಳೆ ಕಂಡು ಬಂದಿದೆ ಎಂದು ದೂರುದಾರ ನಬಿಲಾಲ ಸೌದಾಗರ ‘ವಿಜಯವಾಣಿ’ಗೆ ತಿಳಿಸಿದ್ದಾರೆ.
ತನಿಖೆ ವರದಿ ಬಹಿರಂಗಗೊಳ್ಳಲಿ
ತನಿಖೆಗೆ ಸಂಬಂಧಿಸಿದ ವರದಿಯನ್ನು ಗ್ರಾಮಸ್ಥರ ಮುಂದೆ ಬಹಿರಂಗ ಪಡಿಸಲು ಇಒ ಅವರನ್ನು ಮುಖಂಡರು ಒತ್ತಾಯಿಸಿದರು. ಆದರೆ, ಇಒ ಅವರು ಇದು ಆಂತರಿಕ ತನಿಖೆಯಾಗಿದೆ. ದಾಖಲೆಗಳನ್ನು ಪರಿಶೀಲಿಸಿ ವರದಿ ಸಲ್ಲಿಸಲಾಗುವುದೆಂದು ಸಮಜಾಯಿಷಿ ನೀಡಿದರು. ತನಿಖೆ ವೇಳೆ ದೂರುದಾರರು ದಾಖಲೆಗಳ ಪ್ರತಿ ನೀಡಲು ಮನವಿ ಮಾಡಲಾಗಿ, ಹಾಗೆ ನೀಡಲು ಬರುವುದಿಲ್ಲ ಎಂದರು. ಅಲ್ಲದೆ, ತನಿಖೆ ವರದಿಗೆ ಪ್ರತ್ಯಕ್ಷದರ್ಶಿಯಾಗಿ ಸಹಿ ಮಾಡಿಸಿಕೊಂಡಿದ್ದು, ಅದರಲ್ಲಿಯ ವಿಷಯ ನನಗೆ ಮನದಟ್ಟಾಗಲಿಲ್ಲ ಎಂದು ದೂರುದಾರರು ‘ವಿಜಯವಾಣಿ’ಗೆ ತಿಳಿಸಿದರು.