

ವಿಜಯಪುರ: ವೇತನ ಪರಿಷ್ಕರಣೆ ಹಾಗೂ ಇತರ 12 ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅಖಿಲ ಭಾರತ ಬ್ಯಾಂಕ್ ನೌಕರರ ಸಂಘಟನೆಗಳ ಒಕ್ಕೂಟದ ಕರೆಯ ಮೇರೆಗೆ ಶುಕ್ರವಾರ ವಿವಿಧ ಶಾಖೆಗಳ ನೌಕರರು ಮುಷ್ಕರ ನಡೆಸಿದರು.
ನಗರದ ಸಿಂಡಿಕೇಟ್ ಬ್ಯಾಂಕ್‌ನ ಮುಖ್ಯ ಶಾಖೆ ಎದುರು ಜಮಾಯಿಸಿದ 300ಕ್ಕೂ ಅಧಿಕ ನೌಕರರು ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಘೋಷಣೆ ಕೂಗಿದರು. ಮತ ಪ್ರದರ್ಶನದ ಮೂಲಕ ಸರ್ಕಾರದ ಗಮನ ಸೆಳೆಯಲೆತ್ನಿಸಿದರು.
ಸುಮಾರು 2 ವರ್ಷಗಳಿಂದ 11ನೇ ವೇತನ ಪರಿಷ್ಕರಣೆ ಮಾತುಕತೆ ನಡೆದರೂ ಐಬಿಎ ಕಟು ಧೋರಣೆಯಿಂದಾಗಿ ಬ್ಯಾಂಕ್ ನೌಕರರು ವೇತನ ಪರಿಷ್ಕರಣೆಯಿಂದ ವಂಚಿತರಾಗಿದ್ದಾರೆ. ಸರ್ಕಾರ ಇತರ ಇಲಾಖೆಗಳಿಗೆ ಶೇ.50 ರಿಂದ 60 ವೇತನ ಹೆಚ್ಚಿಸಿದೆ. ಆದರೆ, ಬ್ಯಾಂಕ್ ನೌಕರರ ಬೇಡಿಕೆಯಾದ ಕೇವಲ ಶೇ.20 ವೇತನ ಹೆಚ್ಚಳ ಮಾಡಲು ನಿರಾಕರಿಸಿದ್ದಾರೆ. ವೇತನ ಪರಿಷ್ಕರಣೆಯೊಂದಿಗೆ 5 ದಿನಗಳ ಬ್ಯಾಂಕ್ ಕೆಲಸ, ಹಳೆ ಪಿಂಚಣಿ, ಯೋಜನೆಯನ್ನು ಎಲ್ಲರಿಗೂ ಜಾರಿಗೊಳಿಸುವುದು, ಪಿಂಚಣಿಗಾರರು ಪಿಂಚಣಿ ಪರಿಷ್ಕರಿಸಬೇಕು. ನೌಕರರ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿ ಮಾಡಬೇಕೆಂದು ನೌಕರರು ಒತ್ತಾಯಿಸಿದರು.
ಬ್ಯಾಂಕ್ ಸಂಘಟನೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಅಜಯ ಚವಾಣ, ಅಧ್ಯಕ್ಷ ಶ್ರೀಕಾಂತ ದಶವಂತ, ಆರ್.ಎಸ್. ಕುಲಕರ್ಣಿ, ಜಿ.ಜಿ. ಗಾಂಧಿ, ಸಿ.ಎ. ಗಂಟೆಪ್ಪಗೋಳ, ವಿ.ಡಿ. ಕನಮಡಿ, ಅಶೋಕ ಉಪಾದ್ಯ, ಜಿ.ಎಸ್. ಕುಲಕರ್ಣಿ, ರಾಹುಲ ಪೋಳ, ಹರೀಶ ಗವಾರಿ, ಐ.ಎಸ್. ಚಿಮ್ಮಲಗಿ, ವಿದ್ಯಾ ಐಗಳಿ, ರಶ್ಮಿ ದೇಶಪಾಂಡೆ ಮತ್ತಿತರರಿದ್ದರು.