ಕಾಂಗ್ರೆಸ್ ಕಾರ್ಯಕರ್ತರಿಂದ ಬೃಹತ್ ಪ್ರತಿಭಟನೆ

VJP 28-4
Published on

ವಿಜಯಪುರ: ಸ್ವಾತಂತ್ರೃ ಹೋರಾಟಗಾರ ಶತಾಯುಷಿ ದೊರೆಸ್ವಾಮಿ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಶುಕ್ರವಾರ ಬೃಹತ್ ಪ್ರತಿಭಟನೆ ನಡೆಸಿದರು.
ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಜಮಾಯಿಸಿದ ನೂರಾರು ಪ್ರತಿಭಟನಾಕಾರರು ಯತ್ನಾಳ ವಿರುದ್ಧ ಘೋಷಣೆ ಕೂಗಿದರು. ಬಳಿಕ ಅಪರ ಜಿಲ್ಲಾಧಿಕಾರಿ ಡಾ. ಔದ್ರಾಮ್ ಅವರ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು.
ಮಾಜಿ ಸಚಿವ ಶಾಸಕ ಎಂ.ಬಿ. ಪಾಟೀಲ ಮಾತನಾಡಿ, ಬಸನಗೌಡ ಪಾಟೀಲ ಯತ್ನಾಳ ಪ್ರಚಾರಕ್ಕಾಗಿ ಏನೆಲ್ಲಾ ಮಾತನಾಡುತ್ತಿದ್ದಾರೆ. ಎಚ್.ಎಸ್. ದೊರೆಸ್ವಾಮಿ ಅವರು ಈ ದೇಶದ ಆಸ್ತಿ. ಹಿರಿಯ ಸ್ವಾತಂತ್ರೃ ಹೋರಾಟಗಾರ. ಅಂಥವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದು ಖಂಡನೀಯ ಎಂದರು.
ಯತ್ನಾಳ ಅಭಿವೃದ್ಧಿ ಕಾರ್ಯ ಮಾಡದಿದ್ದರೂ ಪರವಾಗಿಲ್ಲ ಬೇರೊಬ್ಬರ ಭಾವನೆ ಕೆರಳಿಸುವುದನ್ನು ಬಿಡಬೇಕು. ಕೋಮು ಗಲಭೆ ಎಬ್ಬಿಸುವುದನ್ನು ನಿಲ್ಲಸಬೇಕೆಂದರು.
ಮಾಜಿ ಶಾಸಕ ಸಿ.ಎಸ್.ನಾಡಗೌಡ ಮಾತನಾಡಿ, ಬಿಜೆಪಿ ಮಾಜಿ ಶಾಸಕ ಕಪೀಲ್ ಮಿಶ್ರಾನ ಪ್ರಚೋದನಕಾರಿ ಹೇಳಿಕೆಗಳು ಹಾಗೂ ಪೌರತ್ವ ಕಾಯ್ದೆ ತಿದ್ದುಪಡಿ ವಿರೋಧಿಸಿ ದೆಹಲಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಸುಮಾರು 38ಜನ ಸಾವನಪ್ಪಿದ್ದು ಕೇಂದ್ರ ಸರ್ಕಾರ ಮೂಕ ಪ್ರೇಕ್ಷಕನಾಗಿದೆ. ಗಲಭೆ ನಿಯಂತ್ರಿಸಲು ಬಿಜೆಪಿ ವಿಲವಾಗಿದೆ. ಇತ್ತ ಸ್ವಾತಂತ್ರೃ ಹೋರಾಟಗಾರ ದೊರೆಸ್ವಾಮಿ ಬಗ್ಗೆ ಇಲ್ಲಸಲ್ಲದ ಮಾತು ಹೇಳಿ ಯತ್ನಾಳ ಅಶಾಂತಿ ಹರಡುತ್ತಿರುವುದು ಖಂಡನೀಯ ಎಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಜು ಆಲಗೂರ ಮಾತನಾಡಿ, ಸ್ವಾತಂತ್ರೃ ಚಳುವಳಿಯಲ್ಲಿ ದೊರೆಸ್ವಾಮಿ ಪಾತ್ರವೇನು ಎಂಬುದಕ್ಕೆ ಅಧಿಕೃತ ದಾಖಲೆಗಳಿವೆ. ಅವರು ಕೇವಲ ಬ್ರಿಟಿಷರನ್ನು ಭಾರತದಿಂದ ಓಡಿಸುವುದಕಷ್ಟೆ ಸೀಮಿತವಾಗದೇ ಒಂದು ಸುಂದರ, ಸಮಾನ, ಸಹಬಾಳ್ವೆಯ ಭಾರತವನ್ನು ಕಟ್ಟುವ ಕನಸನ್ನಿಟ್ಟುಕೊಂಡು ನಿರಂತರವಾಗಿ ಶ್ರಮಿಸುತ್ತಾ ಬಂದಿದ್ದಾರೆ. ಮಹಾತ್ಮ ಗಾಂಧೀಜಿ ಅವರ ಒಡನಾಡಿಯಾಗಿದ್ದ ಇವರು ಸತ್ಯ ಪಕ್ಷಪಾತಿಯಾಗಿ, ನೇರನಿಷ್ಟುರಿಯಾಗಿ ನಡೆದು ಬಂದಿರುತ್ತಾರೆ. ಸ್ವಾತಂತ್ರೃ ಚಳುವಳಿಗೆ ದ್ರೋಹ ಬಗೆದ ಬಿಜೆಪಿ ಪಕ್ಷ ಇಂತಹ ಹೊಣೆಗೇಡಿ ಶಾಸಕರನ್ನು ಇಟ್ಟುಕೊಂಡಿದೆ ಎಂದು ಟೀಕಿಸಿದರು.
ಮಾಜಿ ಶಾಸಕ ವಿಠಲ ಕಟಕಧೋಂಡ, ಅಬ್ದುಲ್‌ಹಮೀದ್ ಮುಶ್ರೀಫ್, ವೈಜನಾಥ ಕರ್ಪೂರಮಠ, ಅಡಿವೆಪ್ಪ ಸಾಲಗಲ್ಲ, ಮಹಾದೇವಿ ಗೋಕಾಕ, ಎಂ.ಎಂ. ಸುತಾರ, ಮಹ್ಮದ್‌ರಫಿಕ ಟಪಾಲ, ಎಸ್.ಎಂ. ಪಾಟೀಲ ಗಣಿಹಾರ, ವಿಶ್ವನಾಥ ಮಠ, ಬಿ.ಎಸ್.ಪಾಟೀಲ ಯಾಳಗಿ, ಚಂದ್ರಶೇಖರ ಕೊಡಬಾಗಿ, ಅಜೀಂ ಇನಾಮದಾರ ಜಮೀರ್‌ಅಹ್ಮದ್ ಬಕ್ಷಿ, ಆರತಿ ಶಹಾಪೂರ, ಚಾಂದಸಾಬ ಗಡಗಲಾವ, ಪೀರಪ್ಪ ನಡುವಿನಮನಿ, ರವಿಗೌಡ ಪಾಟೀಲ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net