ಗ್ರಾಮೀಣರ ಸಮಸ್ಯೆಗೆ ಸಕಾಲಕ್ಕೆ ಸ್ಪಂದಿಸಿ

VJP 13-1
Published on

ವಿಜಯಪುರ: ಜಿಲ್ಲೆಯಲ್ಲಿ ಕರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು ಪರಿಣಾಮ ಗ್ರಾಮೀಣ ಬಡ ಹಾಗೂ ಕೂಲಿ ಕಾರ್ಮಿಕರ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಹೀಗಾಗಿ ಗ್ರಾಮೀಣರ ಸಮಸ್ಯೆಗೆ ಸಕಾಲಕ್ಕೆ ಸ್ಪಂದಿಸಬೇಕೆಂದು ಜಿಪಂ ಅಧ್ಯಕ್ಷೆ ಸುಜಾತಾ ಕಳ್ಳಿಮನಿ ಅಧಿಕಾರಿಗಳಿಗೆ ಸೂಚಿಸಿದರು.

ಜಿಪಂ ಕಚೇರಿಯಲ್ಲಿ ಈಚೆಗೆ ಇಲಾಖೆವಾರು ಅಧಿಕಾರಿಗಳ ಸಭೆ ನಡೆಸಿದ ಅವರು, ಈಗಾಗಲೇ ಜಿಲ್ಲೆಯಲ್ಲಿ ಕರೊನಾ ಆತಂಕ ಹೆಚ್ಚಿದೆ. ಅಧಿಕಾರಿ ವರ್ಗ ಸಹ ಕರೊನಾ ನಿರ್ವಹಣೆಗೆ ವ್ಯಾಪಕವಾಗಿ ಶ್ರಮಿಸುತ್ತಿದೆ. ಆದರೆ, ಸೋಂಕು ಹೆಚ್ಚುವ ವೇಗ ಗಮನಿಸಿದರೆ ಇನ್ನೂ ಭೀಕರತೆ ಸೃಷ್ಟಿಯಾಗಲಿದೆ. ಹೀಗಾಗಿ ಸಾಕಷ್ಟು ಮುಂಜಾಗ್ರತೆ ವಹಿಸಬೇಕು ಎಂದರು.

ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಬಯಸುವ ಕೂಲಿಕಾರರಿಗೆ ತಕ್ಷಣ ಉದ್ಯೋಗ ಒದಗಿಸಲು ಅಗತ್ಯ ಕ್ರಮ ವಹಿಸಬೇಕು. ಮಾಸ್ಕ್ ಧರಿಸಲು ಎಚ್ಚರಿಕೆ ನೀಡುವುದು. ಮಾಸ್ಕ್ ಧರಿಸದವರಿಗೆ ದಂಡ ವಿಧಿಸುವುದು. ಸ್ವಚ್ಛತೆ ಕಾಪಾಡುವಂತೆ ತಿಳುವಳಿಕೆ ಮೂಡಿಸುವುದು. ಫಾಗಿಂಗ್ ಮಾಡುವುದು. ಸಾರ್ವಜನಿಕರಿಂದ 14ನೇ ಹಣಕಾಸು ಯೋಜನೆಯಡಿ ಕೆಲವು ಗ್ರಾಮ ಪಂಚಾಯಿತಿಗಳಿಂದ ಹಣಕಾಸಿನ ಅವ್ಯವಹಾರದ ಬಗ್ಗೆ ದೂರುಗಳು ಬರುತ್ತಿದ್ದು ಅವುಗಳ ಬಗ್ಗೆ ಪರಿಶೀಲಿಸಿ ಕ್ರಮಕ್ಕೆ ಶಿಾರಸು ಮಾಡಲು ಸೂಚಿಸಿದರು.

ಕೃಷಿ ಇಲಾಖೆಯ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸಿ ಕೃಷಿ ಇಲಾಖೆಯಿಂದ ರೈತರ ಬೇಡಿಕೆಗೆ ಅನುಗುಣವಾಗಿ ಸಮರ್ಪಕವಾಗಿ ಬಿತ್ತನೆ ಬೀಜ ಹಾಗೂ ರಾಸಾಯನಿಕ ಔಷಧಗಳನ್ನು ಸಕಾಲಕ್ಕೆ ಪೂರೈಸಲು ಸೂಚಿಸಿದರು. ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net