

ವಿಜಯಪುರ: ರೈತರಿಗೆ ನೀಡುವ ಬಿತ್ತನೆ ಬೀಜ ವಿತರಣೆಯಲ್ಲಿ ಕೊರತೆ ಆಗದಂತೆ ಎಚ್ಚರ ವಹಿಸಬೇಕು ಎಂದು ಕೃಷಿ ಇಲಾಖೆ ಅಪರ ನಿರ್ದೇಶಕ ವೆಂಕಟರೆಡ್ಡಿ ಪಾಟೀಲ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲೆಯ ವಿವಿಧ ರೈತ ಸಂಪರ್ಕ ಕೇಂದ್ರಗಳಿಗೆ ಶುಕ್ರವಾರ ಭೇಟಿ ನೀಡಿದ ಅವರು, ಮುಂಗಾರು ಹಂಗಾಮಿನ ಬಿತ್ತನೆ ಬೀಜದ ದಾಸ್ತಾನಿನ ಮಾಹಿತಿ ಪಡೆದು ರೈತರಿಗೆ ಯಾವುದೇ ರೀತಿಯಲ್ಲಿ ಅನನುಕೂಲವಾಗದಂತೆ ಬಿತ್ತನೆ ಬೀಜವನ್ನು ವಿತರಿಸಬೇಕು. ಬಿತ್ತನೆ ಬೀಜದ ಗುಣಮಟ್ಟ, ಪ್ಯಾಕಿಂಗ್ ಕುರಿತು ಪರಿಶೀಲನೆ ನಡೆಸಬೇಕು ಎಂದು ತಿಳಿಸಿದರು.
ವಿಜಯಪುರ ಹೊರವಲಯದಲ್ಲಿರುವ ರಾಜ್ಯ ಬೀಜ ನಿಗಮ ಘಟಕಕ್ಕ್ಕೆೆ ಭೇಟಿ ನೀಡಿದರು. ನಂತರ ತಿಕೋಟಾದಲ್ಲಿರುವ ಮಣ್ಣು ಆರೋಗ್ಯ ಕೇಂದ್ರ ಹಾಗೂ ರೈತ ಸಂಪರ್ಕ ಕೇಂದ್ರ, ಕೊಲ್ಹಾರದಲ್ಲಿರುವ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕೃಷಿ ಇಲಾಖೆ ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಶಿವಕುಮಾರ, ಕೃಷಿ ಉಪನಿರ್ದೇಶಕರಾದ ಪ್ರಕಾಶ ಚವಾಣ್, ರಾಘವೇಂದ್ರ ಎನ್., ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಕೃಷಿ ಉಪ ನಿರ್ದೇಶಕ ಕೆ.ಎಸ್.ಅಗಸನಾಳ, ಸಹಾಯಕ ಕೃಷಿ ನಿರ್ದೇಶಕ (ಜಾಗೃತ ದಳ) ಎಸ್.ಸಿ. ಪಾಟೀಲ, ಸಹಾಯಕ ಕೃಷಿ ನಿರ್ದೇಶಕ ನಿಂಗಣ್ಣ ಬಿರಾದಾರ, ತಾಂತ್ರಿಕ ಅಧಿಕಾರಿ ರಮೇಶ ತಮಗೊಂಡ ಇತರರಿದ್ದರು.