

ವಿಜಯಪುರ: ರಾಜ್ಯದ ಎಲ್ಲ ನೀರಾವರಿ ಯೋಜನೆಗಳ ಬಗ್ಗೆ ಮಾತನಾಡುವ ಹಕ್ಕು ನನಗಿದೆ. ನೀರಾವರಿ ಮಂತ್ರಿಯಾಗಿದ್ದಾಗ ನಾನು ಮಾಡಿದ ಸಾಧನೆಗಳ ಬಗ್ಗೆ ನನಗೆ ಹೆಮ್ಮೆ ಇದೆ. ಕ್ರೆಡಿಟ್ ಪಡೆಯಲು ನನಗೆ ಸಾಕಷ್ಟು ವಿಷಯಗಳಿವೆ. ಆ ಬಗ್ಗೆ ದಿನಕ್ಕೊಂದು ಸುದ್ದಿಗೋಷ್ಠಿ ನಡೆಸಬಹುದು. ಕೀಳುಮಟ್ಟದ ರಾಜಕಾರಣ ಮಾಡುವ ಅಧೋಗತಿ ಇನ್ನೂ ಬಂದಿಲ್ಲ….!
ಇದು ಜಲಸಂಪನ್ಮೂಲ ಮಾಜಿ ಸಚಿವ ಶಾಸಕ ಡಾ.ಎಂ.ಬಿ. ಪಾಟೀಲ ನೀರಾವರಿ ಯೋಜನೆಗಳಿಗೆ ಸಂಬಂಧಿಸಿದಂತೆ ತಮ್ಮ ಮೇಲೆ ಕೇಳಿ ಬಂದ ಆಪಾದನೆಗಳಿಗೆ ತಿರುಗೇಟು ನೀಡಿದ ಪರಿ.
ಇಂಡಿ ತಾಲೂಕಿನ 16 ಕೆರೆಗಳಿಗೆ ನೀರು ತುಂಬುವ ಯೋಜನೆಗೆ ಜು. 9 ರಂದು ಆಡಳಿತಾತ್ಮಕ ಅನುಮೋದನೆ ಸಿಕ್ಕ ಬೆನ್ನಲ್ಲೆ ಮಾಧ್ಯಮಗಳಲ್ಲಿ ನನ್ನ ಮೇಲೆ ಕೆಲವು ಆಪಾದನೆಗಳು ಕೇಳಿ ಬಂದವು. ಆ ಹಿನ್ನೆಲೆ ಯೋಜನೆ ಹಿಂದಿರುವ ಸತ್ಯಾಸತ್ಯತೆ, ತಮ್ಮ ಪ್ರಯತ್ನ, ಪರಿಶ್ರಮದ ಕುರಿತು ಮಾಧ್ಯಮಗಳ ಮುಂದೆ ಕನ್ನಡಿಯೇ ಇರಿಸುತ್ತಿರುವುದಾಗಿ ಅವರು ತಿಳಿಸಿದರು.
ಯಾರ ಅನುಮತಿಯೂ ಬೇಕಿಲ್ಲ
ಕೇವಲ ಇಂಡಿ ತಾಲೂಕಿನ 16 ಕೆರೆಗಳು ಮಾತ್ರವಲ್ಲ, ರಾಜ್ಯದ ಎಲ್ಲ ನೀರಾವರಿ ಯೋಜನೆಗಳ ಬಗ್ಗೆ ಮಾತನಾಡುವ ಹಕ್ಕು ನನಗಿದೆ. ಅದಕ್ಕೆ ಯಾರ ಅನುಮತಿಯೂ ಪಡೆಯಬೇಕಿಲ್ಲ. ಹದಿನಾರು ಕೆರೆ ತುಂಬುವುದು ನನ್ನ ಕನಸು. ಇದರಲ್ಲಿ ಕ್ರೆಡಿಟ್ ತೆಗೆದುಕೊಳ್ಳುವುದಾಗಲಿ, ಕೀಳು ರಾಜಕಾರಣ ಮಾಡುವ ಅಧೋಗತಿ ನನಗೆ ಬಂದಿಲ್ಲ. ನಾನು ಮಾಡಿದ ಯೋಜನೆಗಳ ಬಗ್ಗೆ ಮಾತನಾಡುವ ಹಕ್ಕು ನನಗಿದೆ ಎಂದ ಅವರು ಇದಷ್ಟೇ ಅಲ್ಲ, ರಾಜ್ಯದ ಮೇಕೆದಾಟು, ಎತ್ತಿನ ಹೊಳೆ, ಕಾವೇರಿ, ಭದ್ರಾ ಮೇಲ್ದಂಡೆ ಯೋಜನೆ, ಸಿಂಗಟಾಲೂರು ಯೋಜನೆ, ಹೇಮಾವತಿ ಕಾಲುವೆ ಆಧುನೀಕರಣ ಹೀಗೆ ಅನೇಕ ಯೋಜನೆಗಳ ಬಗ್ಗೆ ಮಾತನಾಡುವ ಹಕ್ಕು ನನಗಿದೆ. ಈ ಎಲ್ಲ ಯೋಜನೆಗಳಲ್ಲೂ ನನ್ನ ಸಾಧನೆ ಅಡಕವಾಗಿದೆ. ನಾನು ಮಂತ್ರಿಯಾಗಿದ್ದಾಗ ಅಷ್ಟೇ ಮಾತನಾಡಬೇಕೆಂದಿಲ್ಲ. ಮಂತ್ರಿ ಇಲ್ಲದಿದ್ದಾಗಲೂ ನಾನು ಮಾಡಿದ ಸಾಧನೆ ಹೇಳಿಕೊಳ್ಳುವ ಹಕ್ಕು ನನಗಿದೆ. ನೀರಾವರಿ ಮಂತ್ರಿಯಾಗುವ ಮುಂಚೆ, ಆದ ನಂತರ, ಇಂದು ಮತ್ತು ಮುಂದೆ ಎಂದೆಂದೂ ನೀರಾವರಿಗೆ ನನ್ನ ಹೋರಾಟ ಇದ್ದದ್ದೆ. ಇದಕ್ಕೆ ಯಾರದ್ದೂ ಪರವಾನಗಿ ಬೇಕಿಲ್ಲ ಎಂದು ಶಾಸಕ ಯಶವಂತರಾಯಗೌಡ ಪಾಟೀಲರಿಗೆ ಪರೋಕ್ಷವಾಗಿ ಟಾಂಗ್ ನೀಡಿದರು.
ಕೆರೆಗೆ ನೀರು ತುಂಬುವ ಯೋಜನೆ ಹಿನ್ನೆಲೆ
ಏಷ್ಯಾದಲ್ಲೇ ಅತಿ ದೊಡ್ಡದಾದ ತಿಡಗುಂದಿ ಅಕ್ವಾಡೆಕ್ಟ್ ಮೂಲಕ ಇಂಡಿ ಭಾಗದ 16 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ನನ್ನ ಕನಸಿನ ಕೂಸು. ನನ್ನ ಯೋಚನೆ, ಯೋಜನೆ ಮತ್ತು ಪ್ರಯತ್ನದ ಫಲವಾಗಿ ಇಂದು ಯೋಜನೆಗೆ ಆಡಳಿತಾತ್ಮಕ ಅನುಮೋದನೆ ಸಿಕ್ಕಿದೆ. ವಾಸ್ತವದಲ್ಲಿ ಈ ಯೋಜನೆ ನೀರಾವರಿ ಯೋಜನೆಯಲ್ಲೇ ಇರಲಿಲ್ಲ. ಇಂಡಿ ಭಾಗದ ನೀರಿನ ಸಮಸ್ಯೆ ಮನಗಂಡು ಆ ಭಾಗದ ರೈತರ ಒತ್ತಾಯದ ಮೇರೆಗೆ 2019ರಲ್ಲಿ ಸುಮಾರು 140 ಕೋಟಿ ರೂ. ವೆಚ್ಚದ ಯೋಜನೆ ರೂಪಿಸಿ ಪ್ರಸ್ತಾವನೆ ಸಲ್ಲಿಸಿ ತಾಂತ್ರಿಕ ಸಮಿತಿ ಒಪ್ಪಿಗೆ ಕೊಡಿಸಿದ್ದೆ.
ಅಷ್ಟೇ ಅಲ್ಲ, ಅಂದು ಇಂಡಿ ತಾಲೂಕಿಗೆ ಹೆಚ್ಚಿನ ನೀರಾವರಿ ಸೌಲಭ್ಯ ಒದಗಿಸುವ ಹಿನ್ನೆಲೆ ಎರಡು ತಂಡ ರಚಿಸಿ ಮಹಾರಾಷ್ಟ್ರ, ಆಂಧ್ರ ಪ್ರದೇಶ, ಗುಜರಾತ್ ಮತ್ತು ಮಧ್ಯ ಪ್ರದೇಶಕ್ಕೆ ಕಳುಹಿಸಿದ್ದೆ. ನಾಗಠಾಣ ಮತ್ತು ತಿಡಗುಂದಿ ಶಾಖಾ ಕಾಲುವೆ ಓವರ್‌ಲ್ಯಾಪ್ ಆಗದಂತೆ ಕ್ರಮ ಕೈಗೊಂಡಿದ್ದೆ. ಗೆಜೆಟ್ ನೋಟಿಪಿಕೇಷನ್ ಇಲ್ಲದಿದ್ದರೂ ಬಹುತೇಕ ಕಾಮಗಾರಿ ಮಾಡಿದೆ. ಚಡಚಣ, ಹೊರ್ತಿ ಭಾಗಕ್ಕೆ ನೀರು ಒದಗಿಸಲು ಕೆಲಸ ಮಾಡಿದೆ ಎಂದರು.
ಆಡಳಿತಾತ್ಮಕ ಅನುಮೋದನೆ
2020 ರ ಬಳಿಕ ನೀರಾವರಿ ಮಂತ್ರಿಗಳ ಮನೆಯಲ್ಲಿ ಕುಳಿತು ಹದಿನಾರು ಕೆರೆ ತುಂಬುವ ಯೋಜನೆ ಹಾಗೂ ಎಲ್ಲ ಕಾಲುವೆ ಮೂಲಕ ಹಳ್ಳಕೊಳ್ಳ ತುಂಬುವ ಯೋಜನೆ ಜಾರಿಗೆ ಅಂದಿನ ನೀರಾವರಿ ಮಂತ್ರಿ ರಮೇಶ ಜಾರಕಿಹೊಳಿಗೆ ವಿನಂತಿಸಿದೆ. 2020 ಅ. 15 ರಂದು ಬೋರ್ಡ್‌ನಲ್ಲಿ ಆಡಳಿತಾತ್ಮಕ ಅನುಮೋದನೆಯೂ ಆಯಿತು. ನಂತರ ಹಣಕಾಸು ಇಲಾಖೆ ನೀರಾವರಿ ಇಲಾಖೆಗೆ ಪತ್ರ ಬರೆದು ಈ ಯೋಜನೆಗಳಿಗೆ ಹಣಕಾಸಿನ ಲಭ್ಯತೆ ಇಲ್ಲದ ಕಾರಣ ಸ್ಥಗಿತಗೊಳಿಸಲು ಹೇಳಿತು. ಇದೀಗ ಆಡಳಿತಾತ್ಮಕ ಅನುಮೋದನೆ ಸಿಕ್ಕಿತು. ಕಾರಣ ನಾನು ಜು.9 ರಂದು ಬೆಳಗ್ಗೆ 11ಕ್ಕೆ ಯಡಿಯೂರಪ್ಪ ಅವರ ಮನೆಗೆ ಹೋಗಿ ನೀರಾವರಿಗೆ ಸಂಬಂಧಿಸಿದಂತೆ ಇಂಡಿ ಭಾಗದ 16 ಕೆರೆಗಳಿಗೆ ನೀರು ತುಂಬಿಸುವುದು ಹಾಗೂ ಹಳ್ಳಕೊಳ್ಳಗಳಿಗೆ ನೀರು ಹರಿಸುವ ಎರಡು ಪ್ರಮುಖ ಯೋಜನೆಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲು ಮನವಿ ಮಾಡಿದೆ. ಆದರೆ, ಮುಖ್ಯಮಂತ್ರಿಗಳು ಎರಡರಲ್ಲಿ ಒಂದು ಆಯ್ಕೆ ಮಾಡಿಕೊಳ್ಳಲು ತಿಳಿಸಿದಾಗ ನಾನು ಆದ್ಯತೆ ನೀಡಿದ್ದು ಇಂಡಿ ತಾಲೂಕಿನ 16 ಕೆರೆಗೆ ನೀರು ತುಂಬಿಸುವ ಯೋಜನೆಗೆ. ಆ ಪ್ರಕಾರ ಅದೇ ದಿನ ಸಂಜೆ ಯಡಿಯೂರಪ್ಪ ಅವರು ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಿದ್ದು, ಅದಕ್ಕೆ ಈಗಲೂ ವೈಯಕ್ತಿಕವಾಗಿ ಅಭಿನಂದನೆ ಸಲ್ಲಿಸುವೆ ಎಂದರು.
ಜೆಡಿಎಸ್ ಶಾಸಕ ನನ್ನ ಮೂರ್ತಿ ಮಾಡುತ್ತಿದ್ದಾರೆ
ತಿಡಗುಂದಿ ಅಕ್ವಾಡೆಕ್ಟ್‌ನಿಂದ ಕೇವಲ ಒಂದು ತಾಲೂಕಿಗೆ ಮಾತ್ರ ಅನುಕೂಲವಾಗಿಲ್ಲ. ನಾಗಠಾಣ ಕ್ಷೇತ್ರಕ್ಕೂ ಸಾಕಷ್ಟು ಅನುಕೂಲವಿದೆ. ಆ ಕ್ಷೇತ್ರದ ಶಾಸಕ ಡಾ.ದೇವಾನಂದ ಚವ್ಹಾಣ್ ಅವರು ನನ್ನ ಮೂರ್ತಿ ಸ್ಥಾಪಿಸುವುದಾಗಿ ತಿಳಿಸಿದ್ದಲ್ಲದೆ, ಇದೀಗ ಅದಕ್ಕೆ ಮುಂಗಡವೂ ನೀಡಿರುವ ಮಾಹಿತಿ ಇದೆ ಎಂದು ಡಾ.ಎಂ.ಬಿ. ಪಾಟೀಲ ಯಶವಂತರಾಯಗೌಡರಿಗೆ ಪರೋಕ್ಷವಾಗಿ ಟಾಂಗ್ ನೀಡಿದರು.
ರೇವಣಸಿದ್ದೇಶ್ವರ ಏತನೀರಾವರಿ ಹಾಗೂ ಡಾ.ಫ.ಗು. ಹಳಕಟ್ಟಿ ಅವರ ಶಿವಾನುಭವ ಪತ್ರಿಕೆಗೂ ಅನುಮೋದನೆ ಕೊಡಿಸಬಹುದಿತ್ತು ಎಂಬ ಮಾತು ನನ್ನ ವಿರುದ್ಧ ಮಾಧ್ಯಮಗಳ ಮೂಲಕ ಕೇಳಿ ಬಂತು. ಆದರೆ, ಶಿವಾನುಭವ ಪತ್ರಿಕೆ ವಿಚಾರ ಇದೀಗ ಆರಂಭವಾಗಿರುವಂಥದ್ದು. ಕೇವಲ ಮೂರ್ನಾಲ್ಕು ತಿಂಗಳಲ್ಲಿ ಅದೂ ಆಗಲಿದೆ. ಇನ್ನು ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆಯಲ್ಲೂ ನನ್ನ ಪಾಲಿದೆ. ಅದೊಂದು ಬೃಹತ್ ಯೋಜನೆ. ರಾಜ್ಯದಲ್ಲಿ ನನ್ನ ಸರ್ಕಾರ ಇದ್ದರೆ ಅದನ್ನೂ ಅನುಷ್ಠಾನಗೊಳಿಸುತ್ತಿದ್ದೆ. ಹೀಗಾಗಿ ಎಷ್ಟು ಸಾಧ್ಯವೋ ಅಷ್ಟನ್ನು ಈಗ ಮಾಡಿರುವೆ. ಅದು ಯಾಕೆ ಆಗಿಲ್ಲ, ಇದು ಯಾಕೆ ಆಗಿಲ್ಲ ಎನ್ನುವ ಬದಲು ಆಗಿರುವುದನ್ನು ಸ್ವೀಕರಿಸಬೇಕು ಎಂದರು.