13ರಿಂದ ಎಪಿಎಂಸಿ ವ್ಯಾಪಾರ ಬಂದ್

APMC
Published on

ವಿಜಯಪುರ: ರಾಜ್ಯ ಸರ್ಕಾರ ಕೃಷಿ ಮಾರುಕಟ್ಟೆಯಲ್ಲಿ ವ್ಯವಹರಿಸುವವರಿಗೆ ಶೇ. 1.50 ರಷ್ಟು ಇದ್ದ ಸೆಸ್‌ನ್ನು ಶೇ. 1ಕ್ಕೆ ಇಳಿಸಲು ತೀರ್ಮಾನಿಸಿರುವುದನ್ನು ಖಂಡಿಸಿ ಜು. 13ರಿಂದ ಅನಿರ್ಧಿಷ್ಟಾವಧಿವರೆಗೆ ಎಪಿಎಂಸಿ ಮಾರುಕಟ್ಟೆ ವಹಿವಾಟು ಬಂದ್ ಮಾಡಲಾಗುವುದೆಂದು ಮರ್ಚಂಟ್ಸ್ ಅಸೋಸಿಯೇಶನ್ ಅಧ್ಯಕ್ಷ ರವೀಂದ್ರ ಬಿಜ್ಜರಗಿ ತಿಳಿಸಿದ್ದಾರೆ.
ಸರ್ಕಾರ ಬಹುರಾಷ್ಟ್ರೀಯ ಕಂಪನಿಗಳಿಗೆ ಮುಕ್ತವಾಗಿ ಆಹ್ವಾನಿಸುವುದರಿಂದ ಎಪಿಎಂಸಿ ಮಾರುಕಟ್ಟೆಯಿಂದ ರೈತರು ವಿಮುಖರಾಗಿ ವಹಿವಾಟು ಹಸ್ತಾಂತರಗೊಂಡು ಮಾರುಕಟ್ಟೆಯಲ್ಲಿರುವ ಬಂಡವಾಳ ಹೂಡಿರುವ ವ್ಯಾಪಾರಸ್ಥರಿಗೆ ಕಂಟಕವಾಗುವುದು. ಮಾರುಕಟ್ಟೆ ಮೇಲೆ ಅವಲಂಬಿತ ದಲಾಲರು/ ಗುಮಾಸ್ತರು/ ಹಮಾಲರು ಹಾಗೂ ತಳದವರು ಮಾರುಕಟ್ಟೆಯಿಂದ 25 ರಿಂದ 30 ಸಾವಿರ ಜನ ಉದ್ಯೋಗ ಕಳೆದುಕೊಳ್ಳುವುದಿಂದ ಅವರ ಜೀವನ ಬೀದಿ ಪಾಲಾಗುವುದರಲ್ಲಿ ಸಂದೇಹವಿಲ್ಲ.

ಈ ಮೊದಲು ವ್ಯಾಪಾರ ಸಂಘಟನೆಗಳಾದ ಬೆಂಗಳೂರಿನ ಎಫ್‌ಕೆಸಿಸಿಐ ಮತ್ತು ಹುಬ್ಬಳ್ಳಿಯ ವಾಣಿಜ್ಯೋದ್ಯಮ ಸಂಸ್ಥೆಗಳು, ನಮ್ಮನ್ನೊಳಗೊಂಡ ಹಲವಾರು ವ್ಯಾಪಾರಿ ಸಂಘಟನೆಗಳು ಮುಖ್ಯಮಂತ್ರಿಗಳನ್ನು ಹಾಗೂ ಎಪಿಎಂಸಿ ಸಚಿವರನ್ನು ಮತ್ತು ಕೃಷಿ ನಿರ್ದೇಶಕ ಕರಿಗೌಡರನ್ನು ಭೇಟಿಯಾದಾಗ ಮಾರುಕಟ್ಟೆ ಸೆಸ್‌ನ್ನು ಶೇ. 0.20 ಆಕರಿಸುವುದಾಗಿ ಭರವಸೆ ನೀಡಿದ್ದರು. 10-15 ವರ್ಷಗಳ ರೈತರ ಹಿತಾಸಕ್ತಿಯ ವ್ಯಾಪಾರಸ್ಥರ ಬೇಡಿಕೆಯಾದ ಸೆಸ್‌ನ್ನು ಕಡಿತಗೊಳಿಸಲು ವಿನಂತಿಸಲಾಗಿತ್ತು. ಶೇ. 1.50ರ ಸೆಸ್‌ನಲ್ಲಿ ಶೇ. 0.50ನ್ನು ರೈತರಿಗೆ ಆವರ್ತ ನಿಧಿಯಾಗಿ ಕಾಯ್ದಿರಿಸಲಾಗಿತ್ತು. ಸದ್ಯಕ್ಕೆ ಸಾವಿರಾರು ಕೋಟಿಯಷ್ಟು ಆವರ್ತನಿಧಿ ಸಂಗ್ರವಾಗಿದ್ದು, ಕೇವಲ ಶೇ. 0.50 ಸೆಸ್ ಕಡಿಮೆ ಮಾಡಿದ್ದು, ಕೇವಲ ಆವರ್ತನಿಧಿ ತೆಗೆದಂತಾಗಿದೆ. ನೆರೆ ರಾಜ್ಯಗಳಿಗೆ ಹೊಲಿಸಿದರೆ ರಾಜ್ಯದಲ್ಲಿ ದುಬಾರಿಯಾಗಿದೆ. ರೈತರ ಸಂಕಷ್ಟ ಕಾಲದಲ್ಲಿ ವ್ಯಾಪಾಸ್ಥರು ನೆರವಾಗುತ್ತಿದ್ದು, ವ್ಯಾಪಾರಸ್ಥರ/ ರೈತರ ಸಂಬಂಧಕ್ಕೆ ಧಕ್ಕೆಯಾಗಿದೆ. ಎಪಿಎಂಸಿ ಮಾರುಕಟ್ಟೆಯ ವ್ಯಾಪಾರಸ್ಥರ ಹಾಗೂ ಮಾರುಕಟ್ಟೆ ಹೊರಗೆ ವ್ಯಾಪಾರ ಮಾಡುವವರ ನಡುವಿನ ತಾರತಮ್ಯ ಹೋಗಲಾಡಿಸಿ ವ್ಯಾಪಾರಸ್ಥರ ಹಾಗೂ ಮಾರುಕಟ್ಟೆ ಮೇಲೆ ಅವಲಂಬಿತವಾಗಿರುವ ದುಡಿಯುವ ವರ್ಗದ ಹಿತಾಸಕ್ತಿಗಾಗಿ ಮಾರುಕಟ್ಟೆ ಸೆಸ್‌ನ್ನು ಶೇ. 0.20 ರಷ್ಟು ಸೆಸ್ ವಿಧಿಸಲು ವಿನಂತಿಸಿ ಹಾಗೂ ಪರಿಷ್ಕೃತ ಮಾರುಕಟ್ಟೆ ಸೆಸ್‌ನ್ನು ವಿಧಿಸುವಿಕೆ ವಿರೋಧಿಸಿ ಸೋಮವಾರದಿಂದ ವ್ಯಾಪಾರ ಬಂದ್ ಮಾಡಲು ನಿರ್ಧರಿಸಲಾಗಿದೆ ಎಂದವರು ತಿಳಿಸಿದರು.

ಸಂಘದ ಪದಾಧಿಕಾರಿಗಳಾದ ವಿಜಯಾನಂದ ತಾಳಿಕೋಟಿ, ಪ್ರವೀಣ ವಾರದ, ಮನೋಜ ಬಗಲಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net