

ವಿಜಯಪುರ: ಜಿಲ್ಲಾದ್ಯಂತ ರಾಮನವಮಿ ನಿಮಿತ್ತ ಶ್ರೀರಾಮ ಹಾಗೂ ಹನುಮಂತ ದೇವರ ಗುಡಿಗಳಲ್ಲಿ ಭಾನುವಾರ ವಿಶೇಷ ಪೂಜೆ ನೆರವೇರಿಸಲಾಯಿತು.
ಕರೊನಾ ಕಾರಣಕ್ಕೆ ಎರಡು ವರ್ಷ ಉತ್ಸವ ಸಂಕ್ಷಿಪ್ತವಾಗಿ ನಡೆದಿತ್ತು. ಈ ಬಾರಿ ಬೆಳಗ್ಗೆಯಿಂದಲೇ ದೇಗುಲಗಳತ್ತ ಭಕ್ತರು ಹರಿದು ಬಂದರು. ಶ್ರೀರಾಮನ ಮಂದಿರಗಳಲ್ಲಿ ಹಬ್ಬದ ವಾತಾವರಣವಿತ್ತು. ಶ್ರೀರಾಮ ಸೇನೆ ಸೇರಿದಂತೆ ಇತರ ಹಿಂದು ಸಂಘಟನೆಗಳಿಂದ ವಿವಿಧೆಡೆ ಪಾನಕ, ಕೋಸಂಬರಿ, ಮಜ್ಜಿಗೆ ವಿತರಿಸಲಾಯಿತು. ವಿಜಯಪುರ ನಗರದ ಗಲ್ಲಿ ಗಲ್ಲಿಗಳಲ್ಲೂ ಅಯೋಧ್ಯಾಧಿಪತಿಯ ಸ್ಮರಣೆ ಕೇಳಿಬಂತು.
ರಾಮನವಮಿ ನಿಮಿತ್ತ ಮಾಂಸ ಮಾರಾಟ ನಿಷೇಧಿಸಲಾಗಿತ್ತು. ಜಿಲ್ಲೆಯ ವಿವಿಧೆಡೆ ರಾಮನ ಮೆರವಣಿಗೆ ಹಿನ್ನೆಲೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಯಿತು.
ನಗರದ ಆಯೋಧ್ಯಾ ನಗರ ಶ್ರೀರಾಮ ಮಂದಿರದಲ್ಲಿ ಬೆಳಗ್ಗೆ ರಾಮದೇವರ ಮೂರ್ತಿಗೆ ಪಂಚಾಮೃತ ಅಭಿಷೇಕ, ರಾಮಾಯಣ ಪಾರಾಯಣ ನಡೆಯಿತು. ಬಳಿಕ ರಾಮನ ತೊಟ್ಟಿಲೋತ್ಸವ, ಬಾಲ ರಾಮನಿಗೆ ನಾಮಕರಣ ಮಾಡುವ ಮೂಲಕ ಮಹಿಳೆಯರು ತೊಟ್ಟಿಲು ತೂಗಿ ಸಂಭ್ರಮಿಸಿದರು. ವಿವಿಧ ಬಡಾವಣೆಯ ಭಕ್ತರು ಉತ್ಸವದಲ್ಲಿ ಭಾಗವಹಿಸಿದ್ದರು.
ನಗರದ ಝೇಂಡಾ ಕಟ್ಟಿ ಹಳಕೇರಿ ಗಲ್ಲಿಯ ಗಾಯಿಜಾಳ ಬಳಿಯ ಪ್ರಸನ್ನೇಶ್ವರ ದೇವಸ್ಥಾನದಲ್ಲಿ ಬೆಳಗ್ಗೆ ಸುಪ್ರಭಾತದ ಬಳಿಕ ಪಂಚಾಮೃತ ಅಭಿಷೇಕ, ಅಲಂಕಾರ ಸೇವೆ, ಶ್ರೀರಾಮನ ತೊಟ್ಟಿಲೋತ್ಸವ, ಸತ್ಯನಾರಾಯಣ ಪೂಜೆ ಜರುಗಿತು. ಶ್ರೀ ಪ್ರಸನ್ನೇಶ್ವರ ಸೇವಾ ಭಜನಾ ಮಂಡಳಿ ಸದಸ್ಯರಿಂದ ರಾಮ ನಾಮದ ಭಕ್ತಿ ಸಂಗೀತ ಸೇವೆ ಜರುಗಿತು. ರಾಮ ತೊಟ್ಟಿಲೋತ್ಸವದ ಸಂದರ್ಭದಲ್ಲಿ ನೂರಾರು ಭಕ್ತರು ಭಾಗವಹಿಸಿದ್ದರು. ವಿದ್ವಾನ್ ಪ್ರಕಾಶಾಚಾರ್ಯ ಮದಭಾವಿ ನೇತೃತ್ವ ವಹಿಸಿದ್ದರು.
ಮಜ್ಜಿಗೆ, ಪಾನಕ ವಿತರಣೆ
125 ವರ್ಷಗಳ ಇತಿಹಾಸ ಹೊಂದಿರುವ ನಗರದ ರಾಮ ಮಂದಿರ ರಸ್ತೆಯಲ್ಲಿರುವ ಪುರಾತನ ಶ್ರೀರಾಮ ಮಂದಿರದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಬೆಳಗ್ಗೆ ವಿಶೇಷ ಪೂಜೆ, 11ಕ್ಕೆ ಪುಷ್ಪವೃಷ್ಟಿ, ಮಧ್ಯಾಹ್ನ 12ಕ್ಕೆ ಭಜನೆ ನಡೆಯಿತು. ಭಕ್ತಾದಿಗಳಿಗೆ ಪ್ರಸಾದ ವಿತರಿಸಲಾಯಿತು.