ಕ್ರೀಡೆಯಿಂದ ವ್ಯಕ್ತಿತ್ವ ವಿಕಸನ ಸಾಧ್ಯ

VMS 3-6
Published on

ವಿಜಯಪುರ: ವಿದ್ಯಾರ್ಥಿಗಳು ಕೇವಲ ಪಠ್ಯಚಟುವಟಿಕೆಗೆ ಸೀಮಿತವಾಗದೆ, ಕ್ರೀಡೆಗಳಲ್ಲಿ ಭಾಗವಹಿಸುವ ಮೂಲಕ ಕಲಿಕಾ ಶಕ್ತಿ ವೃದ್ಧಿಸಿಕೊಳ್ಳಬೇಕೆಂದು ರಾಷ್ಟ್ರಪ್ರಶಸ್ತಿ ಪುರಸ್ಕೃತರ ಫೆಡರೇಷನ್ ರಾಷ್ಟ್ರೀಯ ಅಧ್ಯಕ್ಷ ಡಾ.ಜಾವೀದ್ ಜಮಾದಾರ ಹೇಳಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಭಾರತ ಸರ್ಕಾರದ ಯುವ ಕಾರ್ಯ ಮತ್ತು ಕ್ರೀಡಾ ಮಂತ್ರಾಲಯ, ನೆಹರು ಯುವ ಕೇಂದ್ರ, ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ ಹಾಗೂ ಜೈ ಹನುಮಾನ ಯುವಕ ಮಂಡಳಿ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.
ಯುವಜನತೆಯನ್ನು ಹೆಚ್ಚು ಹೆಚ್ಚು ಕ್ರೀಡೆಗಳಲ್ಲಿ ಭಾಗವಹಿಸುವಂತೆ ಪ್ರೇರೇಪಿಸಬೇಕಾಗಿದೆ. ಅವರಿಗೆ ಅಗತ್ಯ ಪ್ರೋತ್ಸಾಹ, ತರಬೇತಿ, ಮಾರ್ಗದರ್ಶನ ಒದಗಿಸಿದಾಗ ಮಾತ್ರ ಭಾರತವನ್ನು ಕ್ರೀಡಾ ರಾಷ್ಟ್ರವನ್ನಾಗಿ ನಿರ್ಮಿಸಲು ಸಾಧ್ಯ ಎಂದು ಹೇಳಿದರು.
ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸುರೇಶ ಶೇಡಶ್ಯಾಳ ಮಾತನಾಡಿ, ಯುವಕರು ಕ್ರೀಡಾ ಚಟುವಟಿಕೆಯಲ್ಲಿ ಪಾಲ್ಗೊಳ್ಳುವುದರಿಂದ ವ್ಯಕ್ತಿತ್ವ ವಿಕಸನ ಜತೆಗೆ ಸಹೋದರ ಭಾವ ಮೂಡುತ್ತದೆ ಎಂದರು.
ದೈಹಿಕ ಶಿಕ್ಷಣ ನಿರ್ದೇಶಕ ಡಾ.ಅಶೋಕ ಜಾಧವ, ಜಿಲ್ಲಾ ಯುವ ಸಮನ್ವಯಾಧಿಕಾರಿ ರಾಹುಲ್ ಡೊಂಗರೆ, ಗುರುಪಾದಪ್ಪ ಬಗಲಿ ಮಾತನಾಡಿದರು. ಲೆಕ್ಕಾಧಿಕಾರಿ ಬೇಬಿ ದೊಡಮನಿ, ಯುವಕ ಸಂಘದ ಅಧ್ಯಕ್ಷ ಸುರೇಶ ಜಾಧವ ಉಪಸ್ಥಿತರಿದ್ದರು.
ಗ್ರಾಮೀಣ ಯುವಕರಲ್ಲಿ ಕ್ರೀಡಾ ಪ್ರೋತ್ಸಾಹಕ್ಕಾಗಿ ಜಿಲ್ಲೆಯ ಆಯ್ದ 35 ಯುವಕ ಸಂಘಗಳಿಗೆ ತಲಾ 5 ಸಾವಿರ ರೂ. ಮೌಲ್ಯದ ಕ್ರೀಡಾ ಸಾಮಗ್ರಿಗಳನ್ನು ವಿತರಿಸಲಾಯಿತು. ಪ್ರೊ.ಎಸ್.ಎಂ. ಭಜಂತ್ರಿ ಸ್ವಾಗತಿಸಿದರು. ಪ್ರೊ.ಬಿ.ಎನ್. ಶಾಡದಳ್ಳಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net