ಯಾರ ಕೈಗೆ ಸಿದ್ಧೇಶ್ವರ ಬ್ಯಾಂಕ್ ಚುಕ್ಕಾಣಿ?

VJP_Siddehwar
Published on

ಪರಶುರಾಮ ಭಾಸಗಿ ವಿಜಯಪುರ

ಪ್ರತಿಷ್ಟಿತ ಸಿದ್ಧೇಶ್ವರ ಸಹಕಾರಿ ಬ್ಯಾಂಕ್ ನಿರ್ದೇಶಕ ಸ್ಥಾನದ ಚುನಾವಣೆ ಸಮಾಪ್ತಿಗೊಳ್ಳುತ್ತಿದ್ದಂತೆ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಕ್ಕೆ ತೆರೆ ಮರೆಯ ಕಸರತ್ತು ಜೋರಾಗತೊಡಗಿದೆ. ಅಂದುಕೊಂಡಂತೆ ಹಳೇ ಪ್ಯಾನಲ್‌ನ ಸದಸ್ಯರೇ ಮೇಲುಗೈ ಸಾಧಿಸಿದ್ದು ಹೊಂದಾಣಿಕೆ ಸೂತ್ರದಡಿ ಅಧ್ಯಕ್ಷ- ಉಪಾಧ್ಯಕ್ಷರನ್ನು ಆಯ್ಕೆ ಮಾಡಲು ಸಿದ್ಧತೆ ನಡೆದಿದೆ. ಸಾಂಪ್ರದಾಯಿಕವಾಗಿ ಹೊಸಬರಿಗೆ ಮತ್ತು ಹಿರಿತನದ ಜವಾಬ್ದಾರಿ ಹೊತ್ತವರಿಗೆ ಆಯ್ಕೆ ಮಾಡಬೇಕೆಂಬ ಕೂಗು ಬಲಗೊಂಡಿದ್ದು ಆ ನಿಟ್ಟಿನಲ್ಲಿ ಆಕಾಂಕ್ಷಿಗಳು ಸರ್ವ ಸದಸ್ಯರ ವಿಶ್ವಾಸ ಗಳಿಸುವ ನಿಟ್ಟಿನಲ್ಲಿ ತಲ್ಲೀನರಾಗಿದ್ದಾರೆ.

ನ. 17ಕ್ಕೆ ಆಯ್ಕೆ ಪ್ರಕ್ರಿಯೆ

ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಕ್ಕೆ ನ. 17ಕ್ಕೆ ಮುಹೂರ್ತ ನಿಗದಿಗೊಳಿಸಲಾಗಿದೆ. ಇನ್ನೂ ಮೂರ‌್ನಾಲ್ಕು ದಿನ ಕಾಲಾವಕಾಶ ಇದ್ದು ಅಷ್ಟರಲ್ಲಿ ವೇದಿಕೆ ಸಿದ್ಧಗೊಳಿಸಲು ಆಕಾಂಕ್ಷಿಗಳು ಅಣಿಯಾಗಿದ್ದಾರೆ. ಅದಕ್ಕಾಗಿ ರಾಜಕೀಯ ಹಿರಿಯ ನಾಯಕರು, ಸದಸ್ಯರು ಮತ್ತು ಸಮುದಾಯದ ಮುಖಂಡರ ಮನವೊಲಿಸುತ್ತಿದ್ದಾರೆ. ಶೀಘ್ರದಲ್ಲೇ ಸರ್ವ ಸದಸ್ಯರು ಸಭೆ ಕರೆದು ಪರಸ್ಪರ ಹೊಂದಾಣಿಕೆ ಸೂತ್ರದನ್ವಯ ಅಧ್ಯಕ್ಷ- ಉಪಾಧ್ಯಕ್ಷರನ್ನು ಆಯ್ಕೆ ಮಾಡಲು ತೀರ್ಮಾನಿಸಿದ್ದಾಗಿ ಚುನಾಯಿತ ಸದಸ್ಯರೊಬ್ಬರು ತಿಳಿಸಿದ್ದಾರೆ.

ಯಾರಿಗೆ ಅವಕಾಶ?

ಕಳೆದ 2010ರಿಂದ ಬ್ಯಾಂಕ್ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಕ್ಕೆ ಹೊಸಬರನ್ನೇ ಆಯ್ಕೆ ಮಾಡುವ ಸಂಪ್ರದಾಯ ಉಳಿಸಿಕೊಂಡು ಬರಲಾಗಿದೆ. ಆ ಪ್ರಕಾರ 19 ಸ್ಥಾನಗಳ ಪೈಕಿ ಈಗಾಗಲೇ ಸುಮಾರು 8 ಜನ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನ ಅಲಂಕರಿಸಿದ್ದಾರೆ. ಅವರನ್ನು ಹೊರತುಪಡಿಸಿ ಮೂರು ಮತ್ತು ಅದಕ್ಕಿಂತ ಹೆಚ್ಚಿನ ಬಾರಿ ಆಯ್ಕೆಯಾದವರಿಗೆ ಪ್ರಥಮಾದ್ಯತೆ ನೀಡಲು ಯೋಜಿಸಲಾಗಿದೆ. ಹಾಗಾದಲ್ಲಿ ಪ್ರಕಾಶ ಬಗಲಿ, ವಿಜಯಕುಮಾರ ಇಜೇರಿ ಹಾಗೂ ಬೌರಮ್ಮ ಗೊಬ್ಬೂರ ಹೆಸರು ಮುಂಚೂಣಿಗೆ ಬರಲಿವೆ. ಮೂವರಲ್ಲಿ ಪ್ರಕಾಶ ಬಗಲಿ ನಾಲ್ಕನೇ ಬಾರಿಗೆ ಆಯ್ಕೆಯಾಗಿದ್ದು, ಇನ್ನುಳಿದವರು ಮೂರನೇ ಬಾರಿ ನಿರ್ದೇಶಕರಾಗಿದ್ದಾರೆ. ಹೀಗಾಗಿ ಅಧ್ಯಕ್ಷ ಸ್ಥಾನಕ್ಕೆ ಪ್ರಕಾಶ ಬಗಲಿ ಅರ್ಹರಾಗಲಿದ್ದು, ಇನ್ನುಳಿದ ಇಬ್ಬರ ಪೈಕಿ ಒಬ್ಬರಿಗೆ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡುವ ಸಾಧ್ಯತೆ ಕಂಡು ಬಂದಿದೆ.

ಅವಧಿ ಹಂಚಿಕೆ

2007ರಲ್ಲಿ ಬ್ಯಾಂಕ್ ಸೂಪರ್ ಸೀಡ್ ಆದ ಬಳಿಕ 2010ರಲ್ಲಿ ಚುನಾವಣೆ ನಡೆಯಿತು. ಅಲ್ಲಿಂದ ಇಲ್ಲಿವರೆಗೆ ಒಮ್ಮೆ ಅಧಿಕಾರ ಅನುಭವಿಸಿದವರಿಗೆ ಮತ್ತೊಮ್ಮೆ ಅವಕಾಶ ನೀಡಿಲ್ಲ. ಅಲ್ಲದೆ, ಐದು ವರ್ಷದ ಆಡಳಿತಾವಧಿಯಲ್ಲಿ ಅರ್ಧ ಅವಧಿ ಹಂಚಿಕೆ ಮಾಡುತ್ತಾ ಬರಲಾಗಿದೆ. 2010ರ ಮೊದಲ ಅವಧಿಗೆ ಅಪ್ಪು ಪಟ್ಟಣಶೆಟ್ಟಿ, ಡಾ. ವಿಜಯಕುಮಾರ ಮುಳವಾಡ, ಎರಡನೇ ಅವಧಿಗೆ ಆರ್.ಎಂ. ಪಾಟೀಲ, ಗುರು ಗಚ್ಚಿನಮಠ, 2015ರ ಮೊದಲ ಅವಧಿಗೆ ಸುರೇಶ ಗಚ್ಚಿನಕನಟ್ಟಿ, ವಿಜಯಕುಮಾರ ಔರಂಗಬಾದ, ಎರಡನೇ ಅವಧಿಗೆ ಶ್ರೀಹರ್ಷಗೌಡ ಪಾಟೀಲ ಹಾಗೂ ರಮೇಶ ಬಿದನೂರ ಅನುಕ್ರಮವಾಗಿ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನ ಅಲಂಕರಿಸಿದ್ದಾರೆ. ಹಾಲಿ ಆಡಳಿತ ಮಂಡಳಿಯಲ್ಲಿ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಅವರ ಸಹೋದರ ಈರಣ್ಣ ಪಟ್ಟಣಶೆಟ್ಟಿ ಇದ್ದು ಅವರ ಕೋಟಾ ಕೂಡ ಮುಕ್ತಾಯವಾದಂತೆ ಎನ್ನಲಾಗಿದೆ. ಈ ಎಲ್ಲರನ್ನು ಹೊರತುಪಡಿಸಿ ಇನ್ನುಳಿದವರಲ್ಲಿ ಯಾರು ಹಿರಿತನದ ಜವಾಬ್ದಾರಿ ಹೊತ್ತಿದ್ದಾರೋ ಅವರನ್ನೇ ಅಧ್ಯಕ್ಷ- ಉಪಾಧ್ಯಕ್ಷರನ್ನಾಗಿಸಬೇಕೆಂಬುದು ಅಘೋಷಿತ ನಿಯಮ ಮಾಡಿಕೊಂಡಿದ್ದಾಗಿ ತಿಳಿದು ಬಂದಿದೆ.

ಈ ಎಲ್ಲ ಅಂಶ ಪರಿಗಣಿಸಿದರೆ ಹಿಂದುಳಿದ ‘ಬ’ ವರ್ಗದಿಂದ ಆಯ್ಕೆಯಾದ ಪ್ರಕಾಶ ಬಗಲಿ ಅಧ್ಯಕ್ಷರಾಗುವುದು ಖಚಿತ ಎನ್ನಲಾಗುತ್ತಿದೆ. ಏಕೆಂದರೆ ಇವರು ನಾಲ್ಕು ಬಾರಿ ಆಯ್ಕೆಯಾಗಿದ್ದಾರೆ. ಅಲ್ಲದೆ, ಗಾಣಿಗ ಸಮುದಾಯಕ್ಕೂ ಆದ್ಯತೆ ನೀಡುವ ಉದ್ದೇಶದಿಂದ ಬಗಲಿ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಹಾಗೂ ಮೂರು ಬಾರಿ ಆಯ್ಕೆಯಾಗಿರುವ ವಿಜಯಕುಮಾರ ಇಜೇರಿ ಹಾಗೂ ಬೌರಮ್ಮ ಗೊಬ್ಬೂರ ಇಬ್ಬರಲ್ಲಿ ಒಬ್ಬರಿಗೆ ಮೊದಲ ಅವಧಿಗೆ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡುವ ಸಾಧ್ಯತೆ ದಟ್ಟವಾಗಿದೆ.

ಒಟ್ಟಿನಲ್ಲಿ ಶತಮಾನ ಕಂಡ ಬ್ಯಾಂಕ್ ಆಡಳಿತ ಚುಕ್ಕಾಣಿ ಈ ಬಾರಿ ಯಾರ ಕೈಗೆ ಸಿಗಲಿದೆ ಎಂಬ ಕುತೂಹಲ ಹೆಚ್ಚಿದ್ದು ದೀಪಾವಳಿ ತರುವಾಯ ಬ್ಯಾಂಕ್‌ನಲ್ಲಿ ದೀಪ ಬೆಳಗಿಸುವ ನೂತನ ಸಾರಥಿ ಯಾರು ಎಂಬುದು ಕಾದು ನೋಡಬೇಕಿದೆ.

ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಕ್ಕೆ ವಿಭಿನ್ನ ಅಭಿಪ್ರಾಯಗಳೇನೇ ಇದ್ದರೂ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಆಯ್ಕೆ ಮಾಡಲಾಗುವುದು. ಈವರೆಗೆ ಯಾರೂ ಮುಂದೆ ಬಂದಿಲ್ಲ. ಆದರೂ, ಸಾಮಾಜಿಕ ನ್ಯಾಯ, ಹಿರಿತನ ಜವಾಬ್ದಾರಿಗೆ ಆದ್ಯತೆ ಸಿಗಬೇಕು, ಹೊಸಬರಿಗೆ ಅವಕಾಶ ಸಿಗಲಿ ಎಂಬುದು ನನ್ನ ಆಶಯ.ಶ್ರೀಹರ್ಷಗೌಡ ಪಾಟೀಲ, ನಿಕಟಪೂರ್ವ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net