ಸರ್ಕಾರಿ ಶಾಲೆ ಡಿಜಿಟಲೀಕರಣಕ್ಕೆ ಒತ್ತು

HN 29-1
Published on

ವಿಜಯಪುರ: ವಿಜಯಪುರ ನಗರದ ಸರ್ಕಾರಿ ಶಾಲೆಗಳನ್ನು ಸಂಪೂರ್ಣ ಡಿಜಿಟಲ್ ಮಾಡುವಂತಹ ಕನಸನ್ನು ಹೊಂದಲಾಗಿದೆ ಎಂದು ಸಿದ್ಧಸಿರಿ ಸೌಹಾರ್ದ ಸಹಕಾರಿ ಬ್ಯಾಂಕ್ ನಿರ್ದೇಶಕ ರಾಮನಗೌಡ ಪಾಟೀಲ ಹೇಳಿದರು.
ಭವಾನಿನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿವಿಧ ಕಾಮಗಾರಿಗಳ ಭೂಮಿಪೂಜೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸರ್ಕಾರಿ ಶಾಲೆಯಲ್ಲಿ ಓದುವಂತಹ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವಂತಹ ಗುರಿ ಇಟ್ಟುಕೊಳ್ಳಲಾಗಿದೆ. ಈಗಾಗಲೇ ಒಂದು ಶಾಲೆಯನ್ನು ದತ್ತು ತೆಗೆದುಕೊಳ್ಳಲಾಗಿದ್ದು, ಅದರ ಅಭಿವೃದ್ಧಿಗೆ ವಿಸ್ತೃತ ವರದಿ ತಯಾರಿಸಲಾಗುತ್ತಿದೆ. ವಿಜಯಪುರದ ಎಲ್ಲ ಸರ್ಕಾರಿ ಶಾಲೆಗಳನ್ನು ಡಿಜಿಟಲ್ ಆಗಿ ಪರಿವರ್ತಿಸುವ ಕನಸನ್ನು ಹೊಂದಲಾಗಿದೆ ಎಂದರು.
ಮುಂಬರುವ ದಿನಗಳಲ್ಲಿ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ಹೆಚ್ಚಿನ ರೀತಿಯಲ್ಲಿ ಶಾಲೆಯನ್ನು ಅಭಿವೃದ್ಧಿಪಡಿಸುವ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದರು.
ವಿಜಯಪುರ ನಗರ ವಾರ್ಡ್ ನಂ.35ರಲ್ಲಿ ಬರುವ ಭವಾನಿನಗರದಲ್ಲಿ ಜಿಲ್ಲಾ ಪಂಚಾಯಿತಿ ವತಿಯಿಂದ ಮಂಜೂರಾದ 10.60 ಲಕ್ಷ ರೂ. ವೆಚ್ಚದ ಸರ್ಕಾರಿ ಪ್ರೌಢಶಾಲೆ ಕೆಬಿಎಸ್ ನಂ.57 ರ ಕೊಠಡಿಗಳ ದುರಸ್ತಿ ನಿರ್ಮಾಣ ಕಾಮಗಾರಿ, ಸಿದ್ಧಸಿರಿ ಸೌಹಾರ್ದ ಸಹಕಾರಿಯಿಂದ ಶುದ್ಧ ಕುಡಿಯುವ ನೀರಿನ ಘಟಕ ಮತ್ತು ವಾರ್ಡ್ ನಂ.4ರಲ್ಲಿ ಬರುವ ಭೂತನಾಳ ತಾಂಡಾದ ಸರ್ಕಾರಿ ಪ್ರೌಢಶಾಲೆ ಕೆಬಿಎಸ್ ನಂ.51 ರ ಕೊಠಡಿಗಳ ದುರಸ್ತಿ ನಿರ್ಮಾಣ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಲಾಯಿತು.

ಮುಖಂಡರಾದ ಸಂತೋಷ ಪಾಟೀಲ, ಬಾಳು ಚವಾಣ್, ರಮೇಶ ಚವಾಣ್, ರಮೇಶ ಬಿರಾದಾರ, ಶರಣು ನಿಡಗುಂದಿ, ಜೀತೇಂದ್ರ ದೇಶಪಾಂಡೆ, ಶಿವರಾಜ ಯಡ್ರಾಮಿ, ಜೀತು ಚವಾಣ್, ಸುರೇಶ ಚವಾಣ್ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net