

ವಿಜಯಪುರ: ಜಿಲ್ಲೆಯ ವಿವಿಧೆಡೆ ವರುಣನ ಆರ್ಭಟ ಮುಂದುವರಿದಿದ್ದು, ಭೀಮಾ ನದಿ ಹಾಗೂ ಡೋಣಿ ನದಿಯಲ್ಲಿ ಅಪಾರ ಪ್ರಮಾಣದ ನೀರು ಹರಿಯುತ್ತಿದೆ. ಇದರಿಂದಾಗಿ ತಾಳಿಕೋಟೆ ಭಾಗ ಸೇರಿ ವಿವಿಧೆಡೆಗಳಲ್ಲಿ ಸೇತುವೆ ಮುಳುಗಡೆಗೊಂಡು ರಸ್ತೆ ಸಂಪರ್ಕ ಕಡಿತಗೊಂಡಿದೆ. ಭಾನುವಾರ ಸುರಿದ ಮಳೆಯಿಂದಾಗಿ ವಿಜಯಪುರ ನಗರದಲ್ಲಿ ಮನೆಗಳಿಗೆ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ವಿಜಯಪುರದ ಸಿದ್ಧಾರೂಢ ಮಠದ ಹತ್ತಿರ ಸುರಕ್ಷಾ ಕಾಲನಿಯಲ್ಲಿ ಮಳೆಯಿಂದ 15 ರಿಂದ 20 ಮನೆಗಳಲ್ಲಿ ನೀರು ನುಗ್ಗಿದೆ.
ವಿಜಯಪುರ ತಾಲೂಕಿನ ಕಗ್ಗೋಡ ಗ್ರಾಮದ ರೈತ ಶಂಕ್ರಪ್ಪ ಹೆಗಡೆಹಾಳ ಅವರಿಗೆ ಸೇರಿದ ಏಳು ಎಕರೆ ಮೆಕ್ಕೆಜೋಳ ಸಂಪೂರ್ಣ ಜಲಾವೃತಗೊಂಡು ಹಾನಿಯಾಗಿದೆ. ಅದಲ್ಲದೆ, ತಾಳಿಕೋಟೆ ಭಾಗದಲ್ಲಿ ಡೋಣಿ ನದಿ ಉಕ್ಕಿ ಹರಿಯುತ್ತಿರುವುದರಿಂದ ಆ ಭಾಗದ ಗ್ರಾಮಗಳಲ್ಲಿಯೂ ಅಪಾರ ಬೆಳೆ ಹಾನಿಯಾಗಿದೆ. ತೊಗರಿ ಸೇರಿ ವಿವಿಧ ಬೆಳೆಗಳು ಸಂಪೂರ್ಣ ನೆಲಕಚ್ಚಿದೆ.
ಬಸವನ ಬಾಗೇವಾಡಿ 3.2 ಮಿಮೀ ಮಳೆಯಾಗಿದೆ. ಆಲಮಟ್ಟಿ 0.8, ಹೂವಿನ ಹಿಪ್ಪರಗಿ 4.6, ಅರೇಶಂಕರ 2.4, ಮಟ್ಟಿಹಾಳ 2.0, ವಿಜಯಪುರ 4.8, ನಾಗಠಾಣ 6.1, ಭೂತನಾಳ 13.8, ಹಿಟ್ನಳ್ಳಿ 4.0, ತಿಕೋಟಾ 4.2, ಕುಮಟಗಿ 21.4, ಕನ್ನೂರ 74.2, ಇಂಡಿ 17.5, ನಾದ ಬಿ.ಕೆ 5.0, ಅಗರಖೇಡ 4.3. ಹೊರ್ತಿ 58.4, ಹಲಸಂಗಿ 5.0, ಚಡಚಣ 3.4, ಝಳಕಿ 5.1, ಮುದ್ದೇಬಿಹಾಳ 49.0, ನಾಲತವಾಡ 19.6, ತಾಳಿಕೋಟೆ 6.5, ಢವಳಗಿ 20.0, ಸಿಂದಗಿ 30.0, ಆಲಮೇಲ 8.5, ಸಾಸಾಬಾಳ 3.3, ರಾಮನಹಳ್ಳಿ 4.8, ಕಡ್ಲೇವಾಡ 15.0, ದೇವರ ಹಿಪ್ಪರಗಿ 18.0, ಕೊಂಡಗೂಳಿ 5.5 ಮಿ.ಮೀ. ಮಳೆಯಾಗಿದೆ ಎಂದು ಜಿಲ್ಲಾ ಅಂಕಿ-ಅಂಶ ಇಲಾಖೆ ಮಾಹಿತಿ ನೀಡಿದೆ.