ಗಮನ ಸೆಳೆದ ಅಕ್ಷತಾರ್ಪಣೆ-ಬೋಗಿ ಕಾರ್ಯಕ್ರಮ

HN 14-4
Published on

ವಿಜಯಪುರ: ಇಲ್ಲಿನ ಶ್ರೀ ಸಿದ್ಧೇಶ್ವರ ದೇವಾಲಯದ ಎದುರು ಜಮಾಯಿಸಿದ ಸಹಸ್ರಾರು ಸಂಖ್ಯೆಯ ಭಕ್ತಾದಿಗಳ ಸಮ್ಮುಖದಲ್ಲಿ ಶ್ರೀ ಸಿದ್ಧೇಶ್ವರ-ಕುಂಬಾರ ಕನ್ಯೆ ಗುಂಡವ್ವಳಿಗೆ ಅಕ್ಷತಾರ್ಪಣೆ ಮಾಡಿ ಭಕ್ತಿ ಭಾವದಲ್ಲಿ ಮಿಂದೆದ್ದರು.
ನಾಡಿನ ಸುಪ್ರಸಿದ್ಧ ಜಾತ್ರಾ ಮಹೋತ್ಸವವಾಗಿರುವ ಶ್ರೀಸಿದ್ಧೇಶ್ವರ ಜಾತ್ರೆಯಲ್ಲಿ ಮಂಗಳವಾರ ನಡೆದ ‘ಅಕ್ಷತಾರ್ಪಣೆ ಭೋಗಿ’ ಕಾರ್ಯಕ್ರಮ ತನ್ನದೇ ಆದ ವಿಶಿಷ್ಟತೆ ಪಡೆದುಕೊಂಡಿತ್ತು.
ಶ್ರೀ ಶಿವಯೋಗಿ ಸಿದ್ಧರಾಮೇಶ್ವರ ಚರಿತ್ರೆ ಓದುವ ಮೂಲಕ ಅಕ್ಷತಾರ್ಪಣೆ ಕಾರ್ಯಕ್ರಮ ನೆರವೇರಿಸಲಾಯಿತು. ಸಂಪ್ರದಾಯದಂತೆ ಬಸನಗೌಡ ಪಾಟೀಲ ಯತ್ನಾಳ ಕುಟುಂಬ ವರ್ಗದವರ ನೇತೃತ್ವದಲ್ಲಿ ಅಕ್ಷತಾರ್ಪಣೆ -ಬೋಗಿ ಕಾರ್ಯಕ್ರಮ ಸಂಭ್ರಮದಿಂದ ನೆರವೇರಿತು.
ಅಕ್ಷತೆಯ ವಿಧಿ ವಿಧಾನದ ಕಾರ್ಯಕ್ರಮವನ್ನು ವೇದಮೂರ್ತಿ ಮುರಗಯ್ಯ ಸಂಗನಬಸಯ್ಯ ಗಚ್ಚಿನಮಠ, ಸಂಗಯ್ಯ ಹಿರೇಮಠ, ಮಲ್ಲಯ್ಯ ಪೂಜಾರಿ, ಸಂದಾನಂದ ಪೂಜಾರಿ, ಸಚಿನ ಹಿರೇಮಠ, ನೀಲಕಂಠಯ್ಯ ಪೂಜಾರಿ ಮೊದಲಾದವರು ಶಾಸೋಕ್ತವಾಗಿ ನೆರವೇರಿಸಿದರು.
ನಾಡಿನ ವಿವಿಧೆಡೆ ಭೋಗಿಯ ದಿನ ಸುಮಂಗಲಿಯರು ಹೊಸ ಬೆಳೆ, ತರಕಾರಿ, ಕೊಬ್ಬರಿ ಎಣ್ಣೆ, ಬೆಣ್ಣೆ, ತುಪ್ಪ, ಸೀರೆ-ಕುಪ್ಪಸ ಸಹಿತವಾಗಿ ಬಾಗಿನ ನೀಡುವ ಸಂಪ್ರದಾಯವಿದೆ. ಕುಂಬಾರ ಗುಂಡವ್ವಳ ಮದುವೆ ನಂತರ ಸಂಪ್ರದಾಯದಂತೆ ಈ ಬಾರಿಯೂ ಸುಮಂಗಲಿಯರು ಪರಸ್ಪರ ಅರಿಷಿಣ-ಕುಂಕುಮ ನೀಡಿದರು.
ಬಸಯ್ಯ ಎಸ್. ಹಿರೇಮಠ, ಸದಾನಂದ ದೇಸಾಯಿ, ಸದಾಶಿವ ಗುಡ್ಡೋಡಗಿ, ಎಸ್. ಎಚ್. ನಾಡಗೌಡ, ಗುರು ಗಚ್ಚಿನಮಠ, ಮಹಾದೇವ ಹತ್ತಿಕಾಳ, ಬಾಗಪ್ಪ ಕನ್ನೋಳ್ಳಿ, ಎಸ್. ಸಿ. ಉಪ್ಪಿನ, ಎಸ್. ಎಚ್. ನಾಡಗೌಡ, ಶರಣು ಸಬರದ, ಬಸು ಗಣಿ, ಪ್ರವೀಣ ಬಿಜ್ಜರಗಿ, ಶಶಿಕಾಂಥ ಮುದಕಾಮಠ, ವಿರೇಶ ಮುದಕಾಮಠ, ಉಮೇಶ ವಂದಾಲ, ಶಿವಾನಂದ ಭುಯ್ಯರ ಇನ್ನಿತರರು ಪಾಲ್ಗೊಂಡಿದ್ದರು.

ಪೌರಾಣಿಕ ಹಿನ್ನೆಲೆ

ಅಕ್ಷತಾರ್ಪಣೆ ಭೋಗಿ ಕಾರ್ಯಕ್ರಮಕ್ಕೆ ಪೌರಾಣಿಕ ಹಿನ್ನೆಲೆ ಇದೆ. 12ನೇ ಶತಮಾನದ ಮಹಾನ್ ಶಿವಶರಣ ಶ್ರೀಸಿದ್ಧೇಶ್ವರರ ಕಾಯಕ ಯೋಗದ ನಿಷ್ಠೆಯನ್ನು ಕಂಡು ಸಾವಿರಾರು ಶರಣ-ಶರಣೆಯರು ಶಿಷ್ಯತ್ವ ವಹಿಸಿದ್ದರು. ಅವರಲ್ಲಿ ಕುಂಬಾರ ಕನ್ಯೆ ಗುಂಡವ್ವ ಕೂಡಾ ಒಬ್ಬರು. ಅತ್ಯಂತ ಶ್ರದ್ಧಾ-ಭಕ್ತಿಯಿಂದ ಕಾಯಕ ನಿಷ್ಠೆಯಿಂದ ಸೇವೆ ಸಲ್ಲಿಸುತ್ತಿದ್ದ ಗುಂಡವ್ವ ಸಿದ್ಧರಾಮನನ್ನು ತನ್ನ ಹೃದಯ ಕಮಲದಲ್ಲಿಟ್ಟು ಆರಾಧಿಸುತ್ತಿದ್ದಳು. ಆಕೆಯ ಮನಸ್ಸಿನಲ್ಲಿ ಚಿಗುರಿದ ಪ್ರೀತಿ ಸಿದ್ಧರಾಮರಿಗೆ ಗೊತ್ತಿರಲಿಲ್ಲ. ಒಂದು ದಿನ ಗುಂಡವ್ವ ಕಾಯಕ ನಿಷ್ಠೆಯನ್ನು ಕೊಂಡಾಡಿದ ಸಿದ್ಧರಾಮರು, ನಿನಗೇನು ಬೇಕು ಎಂದು ಕೇಳುತ್ತಾರೆ. ಅದಕ್ಕೆ ಗುಂಡವ್ವ, ಸ್ವಾಮಿ ನಾನು ನಿಮ್ಮ ಚರಣದಾಸಿಯಾಗಬೇಕು. ನನ್ನನ್ನು ಧರ್ಮಪತ್ನಿಯಾಗಿ ಸ್ವೀಕರಿಸಿ ಎಂದು ಪ್ರಾರ್ಥಿಸುತ್ತಾಳೆ. ಅಖಂಡ ಬ್ರಹ್ಮಚಾರಿಯಾಗಿದ್ದ ಸಿದ್ಧರಾಮರು ಮದುವೆಯಾಗುವುದು ಸಾಧ್ಯವಿರಲಿಲ್ಲ. ಗುಂಡವ್ವಳ ಮನಸ್ಸು ನೋಯಿಸುವುದಕ್ಕೆ ಸಿದ್ಧರಾಮರಿಗೆ ಮನಸ್ಸಾಗಲಿಲ್ಲ. ಕೊನೆಗೆ ನಾನು ಮದುವೆಯಾಗುವುದಿಲ್ಲ. ಆದರೆ ನೀನು ನನ್ನ ಯೋಗದಂಡದೊಂದಿಗೆ ವಿವಾಹವಾಗಬಹುದು ಎಂದು ತಿಳಿಸುತ್ತಾರೆ. ಅದನ್ನು ಪಾಲಿಸಿದ ಗುಂಡವ್ವ ಯೋಗದೊಂಡದೊಂದಿಗೆ ಶಾಸಬದ್ಧವಾಗಿ ಮದುವೆಯಾಗುತ್ತಾಳೆ. ತಾನು ಪತಿಯೊಂದಿಗೆ ಬಾಳಲು ಸಾಧ್ಯವಿಲ್ಲ. ಒತ್ತಾಯ ಮಾಡಿದರೆ ಸಿದ್ಧರಾಮರ ಕಾಯಕಯೋಗಕ್ಕೆ ಭಂಗ ಉಂಟಾಗುತ್ತದೆ. ಅದನ್ನು ತಪ್ಪಿಸಿಕೊಳ್ಳಬೇಕೆಂದು ಗುಂಡವ್ವ ಚಿತೆಗೆ ತನ್ನನ್ನು ತಾನು ಸಮರ್ಪಿಸಿಕೊಳ್ಳುತ್ತಾಳೆ. ಈ ಹಿನ್ನೆಲೆಯಲ್ಲಿ ಪ್ರತಿವರ್ಷ ಜಾತ್ರಾ ಮಹೋತ್ಸವದಂದು ಅಕ್ಷತಾರ್ಪಣೆ ಕಾರ್ಯಕ್ರಮ ನಡೆಯುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net