ಆಕ್ಸಿಜನ್ ಬಸ್ ಸೇವೆ ಆರಂಭ

hn-21-2
Published on

ವಿಜಯಪುರ ಇಲ್ಲಿನ ಶ್ರೀ ಸಿದ್ಧೇಶ್ವರ ಸಂಸ್ಥೆ ಹಾಗೂ ಸಿದ್ಧಸಿರಿ ಸೌಹಾರ್ದ ಸಹಕಾರಿ ಸಂಘದ ವತಿಯಿಂದ ಕರೊನಾ ರೋಗಿಗಳಿಗಾಗಿ ಆಕ್ಸಿಜನ್ ಬಸ್ ಸೇವೆಯನ್ನು ಶುಕ್ರವಾರ ಆರಂಭಿಸಲಾಯಿತು.

ಸಿದ್ಧೇಶ್ವರ ಸಂಸ್ಥೆ ಚೇರ್ಮನ್ ಬಸಯ್ಯ ಹಿರೇಮಠ ಮಾತನಾಡಿ, ಶಾಸಕ ಬಸನಗೌಡ ಆರ್ ಪಾಟೀಲ ಯತ್ನಾಳ ಅವರ ನೇತೃತ್ವದಲ್ಲಿ ಈ ಸೇವೆಯನ್ನು ಉಚಿತವಾಗಿ ಆರಂಭಿಸಲಾಗಿದ್ದು, ಉತ್ತರ ಕರ್ನಾಟಕ ಭಾಗದಲ್ಲಿ ಗಮನ ಸೆಳೆದಿದೆ. ಸಂಸ್ಥೆಯಿಂದ 6 ಶಾಲೆ ಬಸ್‌ಗಳಲ್ಲಿ ಪೋರ್ಟೆಬಲ್ ಕಾನ್ಸನ್‌ಟ್ರೇಟ್ ಆಕ್ಸಿಜನ್ ಮಶಿನ್ ಅಳವಡಿಸಲಾಗಿದೆ. ನಗರ ಪ್ರದೇಶದ 10 ಕೀ.ಮೀ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ಯಾವುದೇ ವ್ಯಕ್ತಿಗೆ ಆಕ್ಸಿಜನ್ ಕೊರತೆ ಉಂಟಾಗಿದ್ದಲ್ಲಿ ಅಥವಾ ಆಸ್ಪತ್ರೆಯಲ್ಲಿ ಬೆಡ್ ಸಿಗದೆ ಇರುವ ಸಂದರ್ಭದಲ್ಲಿ ತುರ್ತಾಗಿ ಈ ಸೇವೆಯನ್ನು ಬಳಸಿಕೊಳ್ಳಲು ಸಹಕಾರಿಯಾಗಲಿದೆ ಎಂದರು.

ಪ್ರತಿ ಬಸ್‌ನಲ್ಲಿ ಕೇವಲ ಇಬ್ಬರು ರೋಗಿಗಳಿಗೆ ಮಾತ್ರ ಅವಕಾಶವನ್ನು ಕಲ್ಪಿಸಿದ್ದು, ಅವರು ಬಯಸಿದ ಖಾಸಗಿ ಅಥವಾ ಸರ್ಕಾರಿ ಆಸ್ಪತ್ರೆಗೆ ಬೆಡ್ ಸಿಗುವವರೆಗೆ ಬಸ್‌ನಲ್ಲೇ ಆರೈಕೆ ಮಾಡಲಾಗುತ್ತದೆ. ಈ ರೀತಿ ನೂತನವಾದಂತಹ ಯೋಜನೆಗೆ ಯತ್ನಾಳ ಅವರು ಹಾಗೂ ಸಂಸ್ಥೆಯ ಪದಾಧಿಕಾರಿಗಳು ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ತಿಳಿಸಿದರು.

ಸಿದ್ಧಸಿರಿ ಸೌಹಾರ್ದ ಸಹಕಾರಿ ನಿರ್ದೇಶಕ ರಾಮನಗೌಡ ಬ.ಪಾಟೀಲ ಯತ್ನಾಳ, ಪದಾಧಿಕಾರಿಗಳಾದ ಸದಾನಂದ ದೇಸಾಯಿ, ಸುಧೀರ ಚಿಂಚಲಿ, ಸಿದ್ಧೇಶ್ವರ ಸಂಸ್ಥೆ ಹಾಗೂ ಸಿದ್ಧಸಿರಿ ಸೌಹಾರ್ದ ಸಂಘದ ಸಿಬ್ಬಂದಿ ಉಪಸ್ಥಿತರಿದ್ದರು.

ಮಾಹಿತಿಗಾಗಿ ಸಂಪರ್ಕಿಸಿ
ಕರೊನಾ ರೋಗಿಗಳಿಗಾಗಿ ಉಚಿತವಾಗಿ ಆಕ್ಸಿಜನ್ ಬಸ್ ಸೇವೆಯನ್ನು ಒದಗಿಸಲಾಗಿದ್ದು, ಸಾರ್ವಜನಿಕರು ಹೆಚ್ಚಿನ ಮಾಹಿತಿಗಾಗಿ ಮೊ: 9606963550 ಹಾಗೂ 9972274549ಗೆ ಸಂಪರ್ಕಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net