

ಪರಶುರಾಮ ಭಾಸಗಿ
ವಿಜಯಪುರ: ಪ್ರತಿಷ್ಠಿತ ಸಿದ್ಧೇಶ್ವರ ಸಹಕಾರಿ ಬ್ಯಾಂಕ್ ಆಡಳಿತ ಮಂಡಳಿ ಚುನಾವಣೆಗೆ ಮುಹೂರ್ತ ನಿಗದಿಯಾಗಿದ್ದು ಆಗಲೇ ಚಟುವಟಿಕೆಗಳು ಚುರುಕುಗೊಂಡಿವೆ !
ನ.8, 2020ಕ್ಕೆ ಚುನಾವಣೆಗೆ ದಿನಾಂಕ ನಿಗದಿಗೊಳಿಸಲಾಗಿದ್ದು ಮತದಾರರ ಅಂತಿಮ ಪಟ್ಟಿ ತಯಾರಿಕೆ, ಬ್ಯಾಂಕ್ ಕಟಬಾಕಿ ಪಾವತಿ, ಪ್ಯಾನಲ್‌ಗಳ ನಿರ್ಧಾರ ಸೇರಿದಂತೆ ಹತ್ತು ಹಲವು ಚಟುವಟಿಕೆಗಳು ಚುರುಕುಗೊಂಡಿವೆ. ಚುನಾವಣೆ ಅಧಿಕಾರಿಯಾಗಿ ಸಹಕಾರಿ ಉಪ ನಿಬಂಧಕ ಪಿ.ಬಿ. ಕಾಳಗಿ ಅವರನ್ನು ನೇಮಕ ಮಾಡಲಾಗಿದ್ದು ಕರೊನಾ ನಡುವೆಯೂ ಚುನಾವಣೆ ಪ್ರಕ್ರಿಯೆಗೆ ಭರ್ಜರಿ ತಯಾರಿ ನಡೆದಿದೆ.
ಅವಧಿ ಮುಕ್ತಾಯ
ಹಾಲಿ ಆಡಳಿತ ಮಂಡಳಿಯ ಚುನಾವಣೆ ಆ. 23, 2015ಕ್ಕೆ ನಡೆದಿದ್ದು ಸೆ. 3, 2020ಕ್ಕೆ ಅವಧಿ ಮುಕ್ತಾಯವಾಗಿದೆ. ಸೆ.3, 2015ಕ್ಕೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆದಿತ್ತು. ನೂತನ ಆಡಳಿತ ಮಂಡಳಿ ರಚನೆಗೆ ಫೆ.29, 2020ರಂದೇ ಬ್ಯಾಂಕ್‌ನ ಪ್ರಧಾನ ವ್ಯವಸ್ಥಾಪಕರು ಚುನಾವಣೆಗಾಗಿ ಪ್ರಸ್ತಾವನೆ ಸಲ್ಲಿಸಿದ್ದರು. ಜೂ.10, 2020ರಂದು ಚುನಾವಣೆ ಅಧಿಕಾರಿ ನೇಮಿಸಿ ಸಹಕಾರಿ ಸಂಘಗಳ ಜಂಟಿ ನಿಬಂಧಕರು ಹಾಗೂ ಸಹಕಾರಿ ಚುನಾವಣೆ ಪ್ರಾಧಿಕಾರದ ಚುನಾವಣೆ ಅಧಿಕಾರಿ ಎಂ. ಲೀಲಾ ನೇಮಕ ಆದೇಶ ಹೊರಡಿಸಿದ್ದರು.
19 ಸ್ಥಾನಗಳಿಗೆ ಚುನಾವಣೆ
ಒಟ್ಟು 19 ನಿರ್ದೇಶಕ ಸ್ಥಾನಗಳ ಪೈಕಿ ಪಜಾ-1, ಪಪಂ-1, ಪ್ರವರ್ಗ (ಅ)-1, ಪ್ರವರ್ಗ (ಬ)-1, ಮಹಿಳಾ-2 ಹಾಗೂ ಸಾಮಾನ್ಯ ವರ್ಗದ 13 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಬ್ಯಾಂಕ್ ವ್ಯಾಪ್ತಿ ಬೆಳಗಾವಿ, ಬಾಗಲಕೋಟೆ, ಕಲಬುರಗಿ ಮತ್ತು ವಿಜಯಪುರ ಒಳಗೊಂಡಿದ್ದು ಮುಖ್ಯ ಕಚೇರಿ ಸೇರಿ 10 ಶಾಖೆಗಳನ್ನು ಹೊಂದಿದೆ. ಒಟ್ಟು 39 ಸಾವಿರ ‘ಅ’ ವರ್ಗದ ಸದಸ್ಯರು, 19 ಸಾವಿರ ಅಸೋಸಿಯೇಟ್ ಸದಸ್ಯರಿದ್ದಾರೆ. ತಾತ್ಕಾಲಿಕ ಮತದಾರರ ಪಟ್ಟಿ ಪ್ರಕಟಿಸಲಾಗಿದ್ದು ಆ ಪ್ರಕಾರ 5974 ಅರ್ಹ ಮತದಾರರದಿದ್ದಾರೆ. ಇನ್ನೂ ಮತದಾರರ ಸಂಖ್ಯೆ ಪರಿಷ್ಕರಣೆಗೊಳ್ಳಲಿದೆ ಎನ್ನುತ್ತಾರೆ ಚುನಾವಣೆ ಅಧಿಕಾರಿ ಪಿ.ಬಿ. ಕಾಳಗಿ.
ಪೆನಲ್ ರಚನೆ ಸದ್ದು
ಪೆನಲ್ ರಚಿಸಿಕೊಂಡು ಕಣಕ್ಕಿಳಿಯುವ ಬಗ್ಗೆ ಅಲ್ಲಲ್ಲಿ ಚರ್ಚೆಗಳಾಗುತ್ತಿವೆಯಾದರೂ ಆ ಬಗ್ಗೆ ಇನ್ನೂ ಸ್ಪಷ್ಟ ಚಿತ್ರಣ ಹೊರಬಿದ್ದಿಲ್ಲ. ಕಳೆದ 2010ರ ಚುನಾವಣೆಯಲ್ಲಿ ಶಿವಾನಂದ ಪಾಟೀಲ, ಅಪ್ಪು ಪಟ್ಟಣಶೆಟ್ಟಿ ಹಾಗೂ ಸಮಾನ ಮನಸ್ಕರ ತಂಡ ಸೇರಿ ಮೂರು ಪೆನಲ್ ರಚಿಸಲಾಗಿತ್ತು. 2015ರಲ್ಲಿ 2 ಪ್ಯಾನಲ್ ರಚಿಸಲಾಗಿತ್ತು. ಆ ಪೈಕಿ ಬಸನಗೌಡ ಪಾಟೀಲರ ಪೆನಲ್‌ನಲ್ಲಿ ಮೂವರು ಆಯ್ಕೆಯಾಗಿದ್ದರು. ಬಳಿಕ ಅವರು ಸಹ ಒಂದೇ ಪೆನಲ್‌ಗೆ ಸೇರಿಕೊಂಡರು. ಸದ್ಯದ ಪರಿಸ್ಥಿಯಲ್ಲಿ ಒಂದೇ ಪೆನಲ್ ಇದ್ದು ಇದೇ ಪೆನಲ್ ಮುಂದುವರಿಯುತ್ತಾ ಅಥವಾ ಹೆಚ್ಚಿನ ಪೆನಲ್‌ಗಳು ರಚನೆಯಾಗುತ್ತವಾ? ಎಂಬುದೇ ಕುತೂಹಲದ ಪ್ರಶ್ನೆ.
ಶತಮಾನೋತ್ಸವ ಆಚರಿಸಿಕೊಂಡ ಸಿದ್ಧೇಶ್ವರ ಬ್ಯಾಂಕ್‌ಗೆ ನಿರ್ದೇಶಕರಾಗುವುದೆಂದರೆ ಅದೊಂದು ಪ್ರತಿಷ್ಠೆ ವಿಷಯ. ರಾಜಕೀಯ ಭವಿಷ್ಯಕ್ಕೆ ಇದೊಂದು ಅಡಿಪಾಯ ಎಂದೇ ಬಿಂಬಿಸಲಾಗಿದೆ. ಶಾಸಕ ಬಸನಗೌಡ ಪಾಟೀಲ ಸೇರಿದಂತೆ ಮಾಜಿ ಶಾಸಕ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ರಾಚಪ್ಪಣ್ಣ ಔರಂಗಬಾದ್, ವಿಲಾಸಬಾಬು ಆಲಮೇಲಕರ ಮತ್ತಿತರರು ಸಿದ್ಧೇಶ್ವರ ಬ್ಯಾಂಕ್ ಮೂಲಕವೇ ರಾಜಕೀಯ ಭವಿಷ್ಯ ಕಂಡುಕೊಂಡಿರುವರೆನ್ನಲಾಗಿದೆ. ಹೀಗಾಗಿ ಸಿದ್ಧೇಶ್ವರ ಬ್ಯಾಂಕ್ ಚುನಾವಣೆ ಪ್ರತಿಷ್ಠೆಯಾಗಿ ಪರಿಣಮಿಸಿದೆ.
ಸಿದ್ಧೇಶ್ವರ ಬ್ಯಾಂಕ್ ಚುನಾವಣೆಗೆ ದಿನಾಂಕ ನಿಗದಿಯಾಗಿದೆ. 21 ದಿನಗಳಿಗೂ ಮುಂಚಿತವಾಗಿ ನೋಟಿಫಿಕೇಶನ್ ಹೊರಡಿಸಬೇಕು. ಈಗಾಗಲೇ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಗೊಂಡಿದೆ. ಕರೊನಾ ಮುಂಜಾಗ್ರತೆಯೊಂದಿಗೆ ಚುನಾವಣೆ ನಡೆಸಲು ಸಕಲ ತಯಾರಿ ನಡೆಸಲಾಗುತ್ತಿದೆ.
ಪಿ.ಬಿ.ಕಾಳಗಿ, ಚುನಾವಣೆ ಅಧಿಕಾರಿ